ಮಾರಣಾಂತಿಕ ಕ್ಯಾನ್ಸರ್ನಿಂದ ಬಳಲುತ್ತಿರುವ ಮಾವೋವಾದಿ ನಾಯಕಿ ನರ್ಮದಾ ಅಕ್ಕ ಅವರು ಅಂತಿಮ ದಿನಗಳ ಆರೈಕೆ ಕೇಂದ್ರದಲ್ಲಿ ಪ್ಯಾಲಿಯೇಟಿವ್ ಆರೈಕೆ ಪಡೆಯಲು ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮಂಗಳವಾರ ಬಾಂಬೆ ಹೈಕೋರ್ಟ್ ಆಲಿಸಿದ್ದು ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ.
ಹೆಚ್ಚು ಓದಿದ ಸ್ಟೋರಿಗಳು
ನಿರ್ಮಲಾ ಅವರನ್ನು 2019ರಲ್ಲಿ ಗಡ್ಚಿರೋಲಿಯಲ್ಲಿ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ದಾಳಿಯಲ್ಲಿ ಹದಿನೈದು ಪೊಲೀಸರು ಹಾಗೂ ಓರ್ವ ಜನಸಾಮಾನ್ಯ ಸಾವನ್ನಪ್ಪಿದ್ದರು.
ವಕೀಲ ಯುಗ್ ಮೋಹಿತ್ ಚೌಧರಿ ಮೂಲಕ ಸಲ್ಲಿಸಲಾಗಿರುವ ತಮ್ಮ ಮನವಿಯಲ್ಲಿ ನರ್ಮದಾ ಅವರು 2018ರಲ್ಲಿ ತಾವು ಸ್ತನ ಕ್ಯಾನ್ಸರ್ಗೆ ತುತ್ತಾಗಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. 2019ರಲ್ಲಿ ಮಹಾರಾಷ್ಟ್ರ ಪೊಲೀಸರು ತಮ್ಮನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ಕಾರಣ ಕಿಮೊಥೆರಪಿ ಮಾಡಿಸಿಕೊಳ್ಳಲು ಸಾಧ್ಯವಾಗಿಲಿಲ್ಲ. ಹಾಗಾಗಿ ಆರೋಗ್ಯ ಪರಿಸ್ಥಿತಿ ಹದಗೆಡತೊಡಗಿತು ಎಂದು ತಿಳಿಸಿದ್ದಾರೆ.
ನರ್ಮದಾ ಅವರ ಪರವಾಗಿ ಹಾಜರಾದ ವಕೀಲೆ ಪಯೋಶಿ ರಾಯ್ ಅವರು, ನರ್ಮದಾ ಅವರು ಕ್ಯಾನ್ಸರ್ನ ನಾಲ್ಕನೇ ಹಂತದಲ್ಲಿದ್ದಾರೆ. ಮೂಳೆಗಳು ಹಾಗೂ ಶ್ವಾಸಕೋಶದ ಬಹು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅವರನ್ನು ಕೈದಿಗಳ ಸಾಂದ್ರತೆ ಹೆಚ್ಚಿರುವ ಜೈಲಿನಲ್ಲಿರಿಸಲಾಗಿದ್ದು ಬಿಸಿ ನೀರು, ಶೌಚಾಲಯ, ವೈದ್ಯಕೀಯ ಸೌಕರ್ಯಗಳಿಲ್ಲದೆ ಅವರು ನೆಲದ ಮೇಲೆ ಮಲಗುವಂತಾಗಿದೆ ಎಂದು ವಿವರಿಸಿದ್ದಾರೆ.
ಈ ಪರಿಸ್ಥಿತಿಯಲ್ಲಿ ಅವರಿಗೆ ಪ್ಯಾಲಿಯೇಟಿವ್ ಕೇರ್ ಅವಶ್ಯಕತೆ ಇದ್ದು ಅವರಿಗೆ ತಮ್ಮ ಪತಿ ಹಾಗೂ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇತರ ಆರೋಪಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದ್ದಾರೆ.

ವಿಚಾರಣೆ ವೇಳೆ ವಕೀಲೆ ಪಯೋಶಿ ರಾಯ್ ಅವರು “ಅರ್ಜಿದಾರರು ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ” ಎಂದು ಪದೇ ಪದೇ ಹೇಳುತ್ತಿದ್ದನ್ನು ಗಮನಿಸಿದ ನ್ಯಾ. ಎಸ್ ಎಸ್ ಶಿಂಧೆ ಹಾಗೂ ಎನ್ ಜೆ ಜಾಮ್ದಾರ್ ಅವರಿದ್ದ ವಿಭಾಗೀಯ ಪೀಠವು ಅವರಿಗೆ ಹಾಗೆ ಪದೇಪದೇ ಹೇಳದಂತೆ ಹಾಗೂ ಆಶಾವಾದಿಯಾಗಿರುವಂತೆ ಸೂಚಿಸಿ,. “ನೀವು ಆಶಾವಾದಿಯಾಗಿರಬೇಕು. ಅವರ ಜೀವನವನ್ನು ಏಕೆ ಕೆಲವೇ ದಿನಗಳಿಗೆ ನಿರ್ಬಂಧಿಸುತ್ತಿದ್ದೀರಿ? ಅವರು ಹೆಚ್ಚು ಕಾಲ ಬದುಕಬಹುದು. ನಾವೆಲ್ಲರೂ ಮೊದಲು ಮನುಷ್ಯರು ನಂತರ ನಾವು ನ್ಯಾಯಮೂರ್ತಿಗಳು” ಎಂದು ಹೇಳಿದ್ದಾರೆ.
ಅಲ್ಲದೆ, “ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಂವಿಧಾನದ 21ನೇ ವಿಧಿಯು ಬಂಧಿಗಳಿಗೂ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ನಾವು ಪ್ರಕರಣವನ್ನು ಎಲ್ಲ ಕೋನಗಳಿಂದಲೂ ಪರಿಗಣಿಸುತ್ತೇವೆ. ಇಂತಹ ಅನೇಕ ಪ್ರಕರಣಗಳಲ್ಲಿನ ತೀರ್ಪುಗಳು ನಮ್ಮ ಮುಂದಿವೆ. ನಾವು ವಿವೇಚನೆಯನ್ನು ಬಳಸಬೇಕಾಗುತ್ತದೆ,” ಎಂದು ಪೀಠವು ತಿಳಿಸಿದೆ.
ಮತ್ತೊಂದೆಡೆ, ಸರ್ಕಾರಿ ವಿಶೇಷ ಅಭಿಯೋಜಕರಾದ ಸಂಗೀತಾ ಶಿಂಧೆ ಅವರು ನರ್ಮದಾ ವಕೀಲರು ಜೈಲಿನ ಸ್ಥಿತಿಗತಿಗಳ ಬಗ್ಗೆ ಹಾಗೂ ಆರೈಕೆಯಲ್ಲಿನ ಲೋಪದ ಬಗ್ಗೆ ಮಾಡಿದ ಆರೋಪಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನರ್ಮದಾ ಅವರಿಗೆ ಟಾಟಾ ಸ್ಮಾರಕ ಆರೈಕೆ ಕೇಂದ್ರದಲ್ಲಿ ವಾರದಲ್ಲಿ ಮೂರು ಬಾರಿ ತಪ್ಪದೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಅವರನ್ನು ಉಪಚರಿಸಲು ಇಬ್ಬರು ಸಹಕೈದಿಗಳನ್ನು ಸಹ ಇರಿಸಿರುವ ಬಗ್ಗೆ ತಿಳಿಸಿದ್ದಾರೆ.
ಈ ವೇಳೆ ನರ್ಮದಾ ಪರ ವಕೀಲೆ ಪಯೋಶಿ ರಾಯ್ ಅವರು, ಅವರು ಗುಣಮುಖರಾಗುವ ಹಂತದಿಂದ ದೂರ ಸಾಗಿದ್ದಾರೆ. ಕಿಮೋಥೆರಪಿ ಚಿಕಿತ್ಸೆಯು ಕೇವಲ ನೋವು ಶಮನಕ್ಕೆ ಮಾತ್ರವೇ ಮಾಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಂತಿಮವಾಗಿ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತು. ಇದರ ಜೊತೆ ಬಾಂಬ್ ಸ್ಫೋಟ ಪ್ರಕರಣದಲಲ್ಲಿ ಅವರು ಆರೋಪಿ ಎನ್ನುವುದನ್ನು ನೆನಪಿಸಿದರು.