ತಮಗಿದ್ದ ಝಡ್+ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿರುವುದರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2019 ರ ಆಗಸ್ಟ್‌ನಲ್ಲಿ ಕೇಂದ್ರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದಾಗ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು.
ಝಡ್-ಪ್ಲಸ್ ಭದ್ರತೆ ಅಡಿಯಲ್ಲಿ ತನಗೆ ಇನ್ನು ಮುಂದೆ ಕಮಾಂಡೋಗಳ ರಕ್ಷಣೆ ಲಭ್ಯ ಇರುವುದಿಲ್ಲ ಎಂದು ಪೊಲೀಸ್ ಪ್ರಧಾನ ಕಛೇರಿ ಮೂಲಕ ನನಗೆ ಮಾಹಿತಿ ಬಂದಿದೆ ಎಂದು ಮಲಿಕ್ ಹೇಳಿದ್ದಾರೆ.
“ನನಗೆ ಕೇವಲ ಪಿಎಸ್‌ಒ (ವೈಯಕ್ತಿಕ ಭದ್ರತಾ ಅಧಿಕಾರಿ)ಯನ್ನು ಮಾತ್ರ ನೀಡಲಾಗಿದೆ, ಆದರೆ, ಅವರು ಕೂಡಾ ಕಳೆದ ಮೂರು ದಿನಗಳಿಂದ ಬರಲಿಲ್ಲ. ಯಾರಾದರೂ ನನ್ನ ಮೇಲೆ ದಾಳಿ ಮಾಡಬಹುದು.” ಎಂದು ಸತ್ಯಪಾಲ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಸತ್ಯಪಾಲ್ ಅವರಿಗಿರುವ ಭದ್ರತೆಯನ್ನು ಹಿಂಪಡೆದಿರುವುದರಿಂದ ಕೇಂದ್ರದ ನಡೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಕೃಷಿ ಕಾನೂನು ಸೇರಿದಂತೆ ಹಲವಾರು ವಿಷಯಗಳಲ್ಲಿ ಮಲಿಕ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಎದುರು ಹಾಕಿಕೊಂಡಿದ್ದಾರೆ. ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಅವರು ರೈತರಿಗೆ ಬೆಂಬಲ ನೀಡಿದ್ದರು, ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಕಡತಗಳನ್ನು ತೆರವುಗೊಳಿಸಲು ₹ 300 ಕೋಟಿ ಲಂಚದ ಆಮಿಷವನ್ನು ತನಗೆ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದರು.
“ಜಮ್ಮು ಮತ್ತು ಕಾಶ್ಮೀರದ ಹಿಂದಿನ ಎಲ್ಲಾ ರಾಜ್ಯಪಾಲರು ಉತ್ತಮ ಭದ್ರತೆಯನ್ನು ಹೊಂದಿದ್ದಾರೆ. ನನಗೆ ಏನಾದರೂ ಸಂಭವಿಸಿದರೆ, ಕೇಂದ್ರ ಸರ್ಕಾರವು ಅದಕ್ಕೆ ಜವಾಬ್ದಾರಿ. ನಾನು ರಾಜ್ಯಪಾಲನಾಗಿದ್ದಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ್ದೇನೆ. ಆರ್ಟಿಕಲ್ 370 ಯನ್ನು ನನ್ನ ಅಧಿಕಾರಾವಧಿಯಲ್ಲಿ ತೆಗೆದುಹಾಕಲಾಗಿದೆ. ನನ್ನ ಜೀವಕ್ಕೆ ಬೆದರಿಕೆ ಇದೆ, ನನಗೇನಾದರೂ ಸಂಭವಿಸಿದರೆ ಅದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ” ಎಂದು ಮಲಿಕ್ ಹೇಳಿದ್ದಾರೆ.
ಮಲಿಕ್ ಅವರನ್ನು 2017 ರಲ್ಲಿ ಬಿಹಾರ ಗವರ್ನರ್ ಆಗಿ ನೇಮಿಸಲಾಗಿತ್ತು. 2018 ರಲ್ಲಿ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಲಾಗಿದ್ದು, ನಂತರ 2019 ರಲ್ಲಿ ಗೋವಾ ಮತ್ತು 2020 ರಲ್ಲಿ ಮೇಘಾಲಯಕ್ಕೆ ಸ್ಥಳಾಂತರಿಸಲಾಯಿತು. ಅವರ ಐದು ವರ್ಷಗಳ ಅಧಿಕಾರವಧಿಯು ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿತ್ತು. ಅಕ್ಟೋಬರ್ 2022 ರಲ್ಲಿ ಅವರ ಸೇವೆಯ ಅವಧಿಯು ಪೂರ್ಣಗೊಂಡಿತ್ತು.