ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯನ್ನು ನಿಯಂತ್ರಿಸಲು ವಿಫಲವಾದ ಭಾರತ ಸರ್ಕಾರದ ಮುಜುಗರ ತಪ್ಪಿಸಲು ಭಾರತೀಯ ಜನತಾ ಪಕ್ಷವು ರಚನಾತ್ಮಕ ಕಾರ್ಯತಂತ್ರ ರೂಪಿಸಿದ್ದು, ತನ್ನ ಸರ್ಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲೆಂದು ಈ ಯೋಜನೆಗೆ ಬಿಜೆಪಿ ಸಜ್ಜಾಗಿದೆ ಎನ್ನಲಾಗಿದೆ.
ಕೋವಿಡ್ ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸಲು, ಲಸಿಕೆ ಕುರಿತು ಜಾಗೃತಿ ಮೂಡಿಸಲು ಮತ್ತು ರೋಗದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ದೇಶಾದ್ಯಂತ ಸ್ವಯಂಸೇವಕ ಸೇವೆಯ ಎರಡನೇ ಹಂತವನ್ನು ಪ್ರಾರಂಭಿಸಲು ಬಿಜೆಪಿ ಸಜ್ಜಾಗಿದೆ. ಕೋವಿಡ್ ಎರಡನೇ ಅಲೆಯ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಇನ್ನೂ ಸಿದ್ಧವಾಗಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದ ನಡುವೆಯೇ, ಕಳೆದ ತಿಂಗಳು ಈ ಕಾರ್ಯಕ್ರಮವನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರಂಭಿಸಿದ್ದರು.

“ಸೇವಾ ಹೈ ಸಂಘಥನ್” ಎಂಬ ಘೋಷವಾಕ್ಯದೊಡನೆ ನಡ್ಡಾ ಅವರು ಪಕ್ಷದ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ಅಭಿಯಾನ, ಪರಿಹಾರ ಕಾರ್ಯಕ್ರಮಗಳು, ಹಳ್ಳಿಗಳಲ್ಲಿ ಆರೋಗ್ಯ ಸ್ವಯಂಸೇವಕರಿಗೆ ತರಬೇತಿ ನೀಡಲು ಸಹಾಯ ಮಾಡುವಂತೆ ಸೂಚಿಸಿದ್ದಾರೆ.
ವ್ಯಾಕ್ಸಿನೇಷನ್ ಅಭಿಯಾನದಡಿಯಲ್ಲಿ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಜನರು ಲಸಿಕೆಯ ಎರಡೂ ಪ್ರಮಾಣವನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಹೆಚ್ಚು ಪ್ರಮಾಣದಲ್ಲಿ ಕೋವಿಡ್ ತಗುಲುವ ಅಪಾಯವಿರುವ 18 ರಿಂದ 44 ವಯಸ್ಸಿನೊಳಗಿನವರಿಗೆ ವಿಶೇಷ ಎಚ್ಚರಿಕೆ, ರೋಗವನ್ನು ತಗ್ಗಿಸುವ ಕುರಿತು ಅರಿವು ಮೂಡಿಸಲು ಹಾಗೂ ಲಸಿಕೆ ಹಾಕಿಸಲು ಉತ್ತೇಜನ ನೀಡುವಂತೆ ಕಾರ್ಯಕರ್ತರಿಗೆ ನಿರ್ದೇಶಿಲಾಗುತ್ತಿದೆ.

ನಡ್ಡಾ ಅವರ ಸೂಚನೆಗಳನ್ನು ವಿವರಿಸಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಪತ್ರವು ಇತರ ಆದ್ಯತೆಯ ಕ್ಷೇತ್ರಗಳನ್ನು ಸಹ ಗುರುತಿಸಿದೆ: “ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಮತ್ತು ವಿನಂತಿಗಳ ಮೇರೆಗೆ ರಕ್ತದಾನ ಮಾಡುವುದು. ಆಸ್ಪತ್ರೆಗಳು ಮತ್ತು ಇತರ ಸ್ಥಳಗಳಲ್ಲಿ ಪಡಿತರ ಕಿಟ್ ಮತ್ತು ಆಹಾರ ವಿತರಣೆಯನ್ನು ಏರ್ಪಡಿಸುವುದು ಅವಶ್ಯಕತೆಯ ಆಧಾರದ ಮೇಲೆ ಕೈಗೆತ್ತಿಕೊಳ್ಳಬೇಕು. ವಯಸ್ಸಾದ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವ ಅಥವಾ ಎಲ್ಲರೂ ಸೋಂಕಿಗೆ ಒಳಗಾದ ಪ್ರತ್ಯೇಕ ಮನೆಗಳಿಗೆ ಸ್ವಯಂಸೇವಕರನ್ನು ನಿಯೋಜಿಸುವುದು. COVID ತೊಡಕುಗಳನ್ನು ಹೇಳಿಕೊಳ್ಳಲು ಟೆಲಿ ಮೆಡಿಸಿನ್ ಕನ್ಸಲ್ಟೆನ್ಸಿ ಮತ್ತು ವೈದ್ಯಕೀಯ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು. ಕರೋನಾ ಪೀಡಿತ ಜನರು ತಮ್ಮ ವಿಮಾ ಸೌಲಭ್ಯವನ್ನು ಶೀಘ್ರದಲ್ಲಿಯೇ ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ಅದಕ್ಕೆ ಸಹಾಯ ಮಾಡುವುದು” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ತರಬೇತಿ ನೀಡಲು ಮತ್ತು ಸ್ಥಳೀಯ ವೈದ್ಯಕೀಯ ಕಚೇರಿಗಳಲ್ಲಿ ಥರ್ಮಲ್ ಸ್ಕ್ಯಾನರ್‌ಗಳು, ಆಕ್ಸಿಮೀಟರ್‌ಗಳು, ಹೋಮ್ ಟೆಸ್ಟ್ ಕಿಟ್‌ಗಳು ಮತ್ತು ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಲು ರಾಜ್ಯ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೋವಿಡ್‌ನನ್ನು ನಿಭಾಯಿಸಿದ ರೀತಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೀಕೆಗಳನ್ನು ಎದುರಿಸಿದ ಒಕ್ಕೂಟ ಸರ್ಕಾರ ಮತ್ತು ಬಿಜೆಪಿಯ ಮೂಲ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಳೆದ ತಿಂಗಳು ಸಕಾರಾತ್ಮಕತೆಗಾಗಿ ಒಂದು ಸಮಗ್ರ ಕಾರ್ಯ ಯೋಜನೆಯನ್ನು ರೂಪಿಸಿದೆ. ಸಕರಾತ್ಮಕ ಚಿಂತನೆಯನ್ನು ಹರಡುವುದು ಎಂಬ ನೆಪದಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸದಂತೆ ಪಕ್ಷದ ಕಾರ್ಯಕರ್ತರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಪ್ರಯತ್ನಪಟ್ಟಿತ್ತು.
ಇದೀಗ ಅದರ ಮುಂದುವರಿದ ಭಾಗವಾಗಿ, ವ್ಯಾಕ್ಸಿನ್ ವಿಚಾರದಲ್ಲಿ ಜನರ ಬಳಿ ಹೋಗಲು ಮುಂದಾಗಿದೆ. ಆ ಮೂಲಕ ಕರೋನಾ ನಿಯಂತ್ರಿಸುವಲ್ಲಿ ತನ್ನ ಸರ್ಕಾರ ಮಾಡಿದ ಯಡವಟ್ಟುಗಳ ಕಡೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ.