ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ ಹೇಳಿಕೆ ಖಂಡಿಸಿ, ದಿಲ್ಲಿಯ ಕೇಜ್ರಿವಾಲ್ ನಿವಾಸದ ಎದುರು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಾರವಾಗಿ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಮಾತನಾಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಯ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ಮನೆಯ ಎದುರಿನ ಗೇಟ್ನ್ನು ಧ್ವಂಸಗೊಳಿಸಿದ್ದಾರೆ. ಭದ್ರತೆಗಾಗಿ ಹಾಕಿದ್ದ ಬ್ಯಾರಿಕೇಡ್ಗಳು, ಕೇಜ್ರಿವಾಲ್ ಮನೆಯ ಬಳಿಯಿದ್ದ ಸಿಸಿಟಿವಿ ಕ್ಯಾಮರಾಗಳೆಲ್ಲ ನಾಶಗೊಂಡಿವೆ. ಇಷ್ಟೆಲ್ಲ ಆದರೂ ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಂಡಿಲ್ಲ, ಅವರು ಅಷ್ಟೆಲ್ಲ ದಾಂಧಲೆ ಎಬ್ಬಿಸುತ್ತಿದ್ದರೂ, ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ಆರೋಪಿಸಿದ್ದಾರೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ ಕೂಡ ಟ್ವೀಟ್ ಮಾಡಿದೆ.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಬೆಂಬಲಿಗರು ಪ್ರತಿಭಟನಾಕಾರರು ಕೇಜ್ರಿವಾಲ್ ನಿವಾಸದ ಎದುರು ಧರಣಿ ನಡೆಸಿದ್ದಾರೆ. ಇದನ್ನೆಲ್ಲ ನೋಡಿಕೊಂಡು ದೆಹಲಿ ಪೊಲೀಸರು ಸುಮ್ಮನಿದ್ದಾರಲ್ಲ ಎಂಬ ಟೀಕೆಯೂ ಕೇಳಿಬರುತ್ತಿದೆ.
ಬಿಜೆಪಿ (BJP) ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆಯ ವೇಳೆ ಸಿಎಂ ನಿವಾಸದ ಮೂರು ಬ್ಯಾರಿಕೇಡ್ಗಳನ್ನು ದಾಟಿ ಮುಖ್ಯದ್ವಾರ ತಲುಪಿದ್ದಾರೆ. ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಇತರ ಎಲ್ಲಾ ಕಾರ್ಯಕರ್ತರು ಮುಖ್ಯ ದ್ವಾರದಲ್ಲಿ ಕುಳಿತು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದಾದ ಬಳಿಕ ದೆಹಲಿ ಪೊಲೀಸರು ಎಲ್ಲರನ್ನು ಬಲವಂತವಾಗಿ ಎಬ್ಬಿಸಿ, ಅಲ್ಲಿಂದ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಕಳೆದ ವಾರ ದಿಲ್ಲಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ರಹಿತ ಸೌಲಭ್ಯ ನೀಡಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಯೂಟ್ಯೂಬ್ನಲ್ಲಿ ಚಿತ್ರದ ಪ್ರದರ್ಶನಕ್ಕೆ ಏರ್ಪಾಡು ಮಾಡಲಿ ಎಂದು ಸವಾಲೆಸೆದಿದ್ದರು.






