ಬೆಂಗಳೂರು: ರಾಜ್ಯ ಬಿಜೆಪಿ ಮಾಜಿ ವಕ್ತಾರ ಎಂ.ಜಿ. ಮಹೇಶ್ ಅವರನ್ನು ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಈ ಕುರಿತು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧಿಕೃತ ಆದೇಶ ಹೊರಡಿಸಿದೆ.

ಜೂನ್ 19ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಂ.ಜಿ. ಮಹೇಶ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ನಡೆ ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ ಎಂದು ಶಿಸ್ತು ಸಮಿತಿ ತಿಳಿಸಿದೆ. ಈ ಸಂಬಂಧ ಅವರಿಗೆ ನೋಟಿಸ್ ನೀಡಿ ಸ್ಪಷ್ಟಿಕರಣ ಕೇಳಲಾಗಿತ್ತು. ಆದರೆ ಅವರು ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಹೀಗಾಗಿ ಎಂ.ಜಿ. ಮಹೇಶ್ ಅವರನ್ನು ತಕ್ಷಣದಿಂದಲೇ ಎಲ್ಲಾ ಪಕ್ಷದ ಹುದ್ದೆಗಳು ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಎಂ.ಜಿ. ಮಹೇಶ್ ಕಾಂಗ್ರೆಸ್‌ನತ್ತ ಮುಖ ಮಾಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.






