ಯಾದಗಿರಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಿರುವಾಗ ಯಾವ ಅಭ್ಯರ್ಥಿಗಳು ಯಾವ್ಯಾವ ಕ್ಷೇತ್ರದಲ್ಲಿ ನಿಲ್ತಾರೆ ಎಂಬ ಕುತೂಹಲ ಜೋರಾಗಿದೆ. ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಮತ ಎಲ್ಲಿ ಜಾಸ್ತಿ ಇದೆಯೋ ಅಂತಹ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮುಸ್ಲಿಮರನ್ನು ಕಾಂಗ್ರೆಸ್ ತಮ್ಮ ವೋಟ್ ಬ್ಯಾಂಕ್ ಎಂದು ಭಾವಿಸುತ್ತಿದ್ದರೆ ಇಲ್ಲೊಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿ ಬಿಜೆಪಿಗೆ ನನ್ನ ಬೆಂಬಲ ಎಂದಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು. ಸುರಪುರದಲ್ಲಿ ರಾಜುಗೌಡ ಗೆಲ್ಲಬೇಕು ಎಂದು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಕೇಸರಿ ಶಾಲು ಮತ್ತು ಟೋಪಿಯನ್ನು ಧರಿಸಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಮಹಮದ್ ಖಾಜಿ ಎಂಬವರು ಈ ಮಾತನ್ನು ಹೇಳಿದ್ದಾರೆ.
ದೇಶದ ಸಲುವಾಗಿ ಕೇಸರಿ ಹಾಕಿದ್ದೇನೆ, ಧರ್ಮಕ್ಕೆ ಬೆಂಬಲ ನೀಡಲು ತಲೆಗೆ ಟೋಪಿ ಹಾಕಿದ್ದೇನೆ. ನಾನು ಬಿಜೆಪಿಗೆ ಮತ ಹಾಕುತ್ತೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು. ರಾಜುಗೌಡ ಬಂದಮೇಲೆ ಸುರಪುರ ಕ್ಷೇತ್ರ ಅಭಿವೃದ್ಧಿಯಾಗಿದೆ. ಮೊದಲು ಇಲ್ಲಿ ಕುಡಿಯಲು ನೀರು ಇರಲಿಲ್ಲ. ಆದರೆ ಈಗ ನಮಗೆ ನೀರಿನ ಸಮಸ್ಯೆಯಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ಹಣ ಕೂಡ ಸಿಗ್ತಿದೆ ಅಂತಾ ಖಾಜಿ ಹೇಳಿದ್ದಾನೆ.
ಎರಡು ದಿನಗಳ ಹಿಂದೆಯಷ್ಟೇ ಮುಸ್ಲಿಂ ಟೋಪಿ ಧರಿಸಿದ್ದ ಖಾಜಿ ಬಿಲಾಲ್ ಮಸೀದಿ ಭೂಮಿ ಪೂಜೆ ಮಾಡಿದ್ದರು. ಈ ವೇಳೆ ಮುಸ್ಲಿಮರ ಟೋಪಿ ಧರಿಸಿ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಬಿಜೆಪಿ ಶಾಸಕ ರಾಜುಗೌಡ ಸಾರಿದ್ದರು. ಇದಾದ ಬಳಿಕ ಟೋಪಿ ಜೊತೆಗೆ ಕೇಸರಿ ಶಾಲು ಹಾಕಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಅಂತಾ ಖಾಜಿ ಹೇಳಲು ಆರಂಭಿಸಿದ್ದಾನೆ ಎನ್ನಲಾಗಿದೆ.