ಸಂಘ ಪರಿವಾರ ಬಹಳ ಹಿಂದಿನಿಂದಲೂ ಮದರ್ ಥೆರೆಸಾ ಬಗ್ಗೆ ಒಂದು ಅಸಹನೆಯನ್ನು ಬೆಳೆಸಿಕೊಂಡೇ ಬಂದಿದೆ. ಹಿಂದುತ್ವ ಪರ ಲೇಖಕ ಎಸ್.ಎಲ್. ಭೈರಪ್ಪ ಆದಿಯಾಗಿ ಅನೇಕ ಆರ್ಎಸ್ಎಸ್ ಪಡಸಾಲೆಯ ಲೇಖಕರು ಅವರನ್ನು ಮತಾಂತರಿ ಎಂದು ಜರೆಯುತ್ತಲೇ ಬಂದಿದ್ದಾರೆ. ಆದರೆ 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು ಅತಿರೇಕಕ್ಕೆ ಹೋಯಿತು. ‘ಘರ್ ವಾಪ್ಸಿ’ ಅಭಿಯಾನದ ಉತ್ತುಂಗದಲ್ಲಿ, ರಾಜಸ್ಥಾನದ ಭರತ್ಪುರದಲ್ಲಿ ಮಹಿಳಾ ಸದನವನ್ನು ಉದ್ಘಾಟಿಸಿ ಮಾತನಾಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ “ಅವರ ಸೇವೆಯು ದೊಡ್ಡದಾಗಿರಬಹುದು ಆದರೆ ಅವರ ಸಾಮಾಜಿಕ ಕಾರ್ಯದ ಹಿಂದೆ ಒಂದು ಉದ್ದೇಶವಿತ್ತು. ಅವರು ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಬಯಸಿದ್ದರು” ಎಂದಿದ್ದರು.
ಆನಂತರ ಉತ್ತರ ಪ್ರದೇಶದ ಗೋರಖ್ಪುರದಲ್ಲಿ, ಆಗಿನ ಸಂಸತ್ ಸದಸ್ಯ ಮತ್ತು ಪ್ರಸ್ತುತ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಥೆರೇಸಾ ಭಾರತವನ್ನು ಕ್ರಿಸ್ತೀಕರಣಗೊಳಿಸುವ ಪಿತೂರಿಯ ಭಾಗವಾಗಿದ್ದರು. ಜನರು ತಮ್ಮ ರೋಗಗಳಿಗೆ ವೈದ್ಯಕೀಯ ನೆರವು ಪಡೆಯಲು ಅಸಮರ್ಥರಾದಾಗ ಮಿಷನರಿಗಳು ಅವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಾರೆ. ಮತ್ತು ಆ ಅವಧಿಯಲ್ಲಿ ಅವರು ಬ್ರೈನ್ ವಾಶ್ ಮಾಡಿ ಕ್ರೈಸ್ತರನ್ನಾಗಿ ಪರಿವರ್ತಿಸುತ್ತಾರೆ” ಎಂದಿದ್ದರು.
ಕೋಮು ಧ್ರುವೀಕರಣದ ಈ ಅಜೆಂಡಾದ ಮುಂದುವರಿದ ಭಾಗವಾಗಿ ಡಿಸೆಂಬರ್ 25 ರಂದು ನರೇಂದ್ರ ಮೋದಿ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಮಿಷನರೀಸ್ ಆಫ್ ಚಾರಿಟಿಯ ನೋಂದಣಿಯನ್ನು ನವೀಕರಿಸುವ ಅವಕಾಶವನ್ನು ನಿರಾಕರಿಸಿದೆ. ಈ ಮೂಲಕ ಕ್ರಿಸ್ಮಸ್ ಸಂಭ್ರಮದಲ್ಲಿದ್ದವರಿಗೆ ಮಾನವೀಯತೆಗೆ ಅಪಚಾರವೆಸಗುವಂತಹ ಕೊಡುಗೆ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವಾಲಯವು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010 ಮತ್ತು ವಿದೇಶಿ ಕೊಡುಗೆ ನಿಯಂತ್ರಣ ನಿಯಮಗಳು 2011 ರ ಅಡಿಯಲ್ಲಿ ಅರ್ಹತಾ ಷರತ್ತುಗಳನ್ನು ಮಿಷನರೀಸ್ ಪೂರೈಸಲು ವಿಫಲವಾದ ಕಾರಣಕ್ಕಾಗಿ ಸಂಸ್ಥೆಯ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “MoCಯ ನವೀಕರಣ ಅರ್ಜಿಯನ್ನು ಪರಿಗಣಿಸುವಾಗ, ಕೆಲವು ವ್ಯತಿರಿಕ್ತ ಮಾಹಿತಿಗಳನ್ನು ಗಮನಿಸಲಾಗಿದೆ” ಎಂದೂ ಸಚಿವಾಲಯ ಹೇಳಿದೆ.
ಥೆರಸಾ ಜಾತಿ ಧರ್ಮ, ರಾಷ್ಟ್ರೀಯತೆ, ಜನಾಂಗ ಅಥವಾ ಸ್ಥಳವನ್ನು ಲೆಕ್ಕಿಸದೆ ಬಡವರಿಗೆ, ಅಶಕ್ತರಿಗೆ ಸೇವೆ ಸಲ್ಲಿಸಿದವರು. ಬಡವರು, ಹಸಿದವರು, ಬಾಯಾರಿದವರು, ಬೆತ್ತಲೆಗಳು, ನಿರಾಶ್ರಿತರು, ಅಜ್ಞಾನಿಗಳು, ಬಂಧಿತರು, ಅಂಗವಿಕಲರು, ಕುಷ್ಠರೋಗಿಗಳು, ಮದ್ಯವ್ಯಸನಿಗಳು, ಸಾಯುತ್ತಿರುವವರು ಮತ್ತು ಅನಾರೋಗ್ಯ ಪೀಡಿತರು, ಪರಿತ್ಯಕ್ತರು, ಬಹಿಷ್ಕೃತರು, ಮಾನವ ಸಮಾಜಕ್ಕೆ ಹೊರೆಯಾಗಿರುವ ಎಲ್ಲರೂ, ಜೀವನದಲ್ಲಿ ಎಲ್ಲಾ ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಂಡಿದ್ದಾಗ ಅವರ ಬದುಕಿನಲ್ಲಿ ದೇವತೆಯಂತೆ ಅವತರಿಸಿದವರು ಥೆರೆಸಾ. ಕಲ್ಕತ್ತಾದ ಬೀದಿ ಬೀದಿಗಳಿಗೂ ಅವರ ಸೇವೆಯ ಕಥೆ ಗೊತ್ತು.

ಕಲ್ಕತ್ತಾ ಮಾತ್ರವಲ್ಲದೆ ಭಾರತದಾದ್ಯಂತ, MoC ಅನಾಥರು, ನಿರ್ಗತಿಕರು ಮತ್ತು ಏಡ್ಸ್ ರೋಗಿಗಳಿಗೆ 240 ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಈ ಮನೆಗಳನ್ನು ನಡೆಸುತ್ತಿರುವ ಸಿಸ್ಟರ್ಗಳ ಆಸ್ತಿಗಳೆಂದರೆ: ಮೂರು ಸೀರೆಗಳು, ಒಂದು ಕವಚ, ಒಂದು ಜೋಡಿ ಚಪ್ಪಲಿಗಳು, ಒಂದು ಶಿಲುಬೆ, ಜಪಮಾಲೆ, ಕೆಲವು ಚಾಕುಕತ್ತರಿಗಳು, ಬಟ್ಟೆ ಕರವಸ್ತ್ರ, ಕ್ಯಾನ್ವಾಸ್ ಚೀಲ ಮತ್ತು ಪ್ರಾರ್ಥನೆಯ ಪುಸ್ತಕ. ಈ ಸಿಸ್ಟರ್ಗಳು ಬಡವರಿಗೆ ಪೂರ್ಣ ಹೃದಯದಿಂದ ಉಚಿತ ಸೇವೆಯನ್ನು ನೀಡುವ ಪ್ರತಿಜ್ಞೆಗೆ ಬದ್ಧರಾಗಿರಬೇಕು.
ಮೋದಿ ಸರ್ಕಾರವು ನವೀಕರಿಸಲು ನಿರಾಕರಿಸಿರುಬ MoC ನ ನೋಂದಣಿಯು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ ಮತ್ತು ಅದರ ನಂತರ FCRA ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲಾಗುವುದಿಲ್ಲ. ಡಿಸೆಂಬರ್31ರ ನಂತರ MoCಯು ಹಣವನ್ನು ಬಳಸಿಕೊಳ್ಳುವುದನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಅದರ ಎಲ್ಲಾ ಸೇವೆಗಳನ್ನು ಮತ್ತು ಚಟುವಟಿಕೆಗಳನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗುತ್ತದೆ. ಸರ್ಕಾರವು ಗಮನಿಸಿದೆ ಎಂದು ಹೇಳಿಕೊಳ್ಳುವ ‘ವ್ಯತಿರಿಕ್ತ ಮಾಹಿತಿ’ ಏನೆಂಬುದರ ಬಗ್ಗೆ ಇದುವರೆಗೂ ಸರ್ಕಾರದ ಕಡೆಯಿಂದ ಯಾವ ಸ್ಪಷ್ಟತೆಯೂ ಬಂದಿಲ್ಲ.
ಆದರೆ ಅಸಹ್ಯದ ಬೆಳವಣಿಗೆಯೆಂಬಂತೆ ದೇಶಾದ್ಯಂತ ಕ್ರಿಸ್ಮಸ್ ಸಮಯದಲ್ಲೇ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚಾಗಿವೆ. ಹರಿಯಾಣದ ಗುರುಗ್ರಾಮ ಮತ್ತು ಕರ್ನಾಟಕದ ಪಾಂಡವಪುರದಲ್ಲಿ ಕ್ರೈಸ್ತರು ನಡೆಸುವ ಎರಡು ಶಾಲೆಗಳಲ್ಲಿ ಹಿಂದುತ್ವದ ಉಗ್ರಗಾಮಿಗಳು ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಅದಾಗಿ ಒಂದೇ ದಿನದಲ್ಲಿ ಹರಿಯಾಣದ ಅಂಬಾಲಾದ ಹೋಲಿ ರಿಡೀಮರ್ ಚರ್ಚ್ನಲ್ಲಿದ್ದ ಯೇಸುಕ್ರಿಸ್ತನ ಪ್ರತಿಮೆಯನ್ನು ಹಿಂದುತ್ವದ ಗುಂಪುಗಳು ಧ್ವಂಸಗೊಳಿಸಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಜಿ20 ಸಮ್ಮೇಳನದಲ್ಲಿ ಭಾಗವಹಿಸಲು ರೋಮ್ಗೆ ತೆರಳಿದ್ದಾಗ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡಿದ್ದರು. ಪೋಪ್ ಅವರನ್ನು ಪ್ರಧಾನಿ ತಬ್ಬಿಕೊಂಡಿರುವ ಫೊಟೋ ಇಂಟರ್ನೆಟ್ನಾದ್ಯಂತ ಸಂಚಲನ ಸೃಷ್ಟಿಸಿತ್ತು. ಭಾರತದೊಳಗೆ ಕ್ರಿಶ್ಚಿಯನ್ನರ ಮೇಲಿನ ದಬ್ಬಾಳಿಕೆ, ಆಕ್ರಮಣಗಳು ಈ ಮೂಲಕವಾದರೂ ನಿಲ್ಲಬಹುದು ಎಂದು ಪ್ರಜ್ಞಾವಂತರು ಆಶಾಭಾವ ವ್ಯಕ್ತಪಡಿಸಿದ್ದರು. ಆದರೆ ಈಗ ಸೇವೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡಿರುವ ಮಿಷನರೀಸ್ ನೋಂದಣಿಯ ನವೀಕರಣವನ್ನೇ ನಿರಾಕರಿಸುವ ಮೂಲಕ ಭೇಟಿ, ಆಹ್ವಾನ ಎರಡೂ ಕೇವಲ ಅಂತರರಾಷ್ಟ್ರೀಯವಾಗಿ ಗಮನ ಸೆಳೆಯಲು ಮಾಡಿರುವ ಸ್ಟಂಟ್ ಎಂಬಂತೆ ಭಾಸವಾಗುತ್ತದೆ.