ಗುಜರಾತ್ ವಿಧಾನಸಭೆಗೆ 14 ಜಿಲ್ಲೆಗಳ 93 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಅದರೊಂದಿಗೆ ನವೆಂಬರ್ 12 ರಂದು ಚುನಾವಣೆ ನಡೆದ ಹಿಮಾಚಲ ಪ್ರದೇಶದ ಚುನಾವಣೋತ್ತರ ಸಮೀಕ್ಷೆಯು ಹೊರಬಿದ್ದಿದ್ದು ಎರಡೂ ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಗುಜರಾತ್ ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು TV9 Gujarati/Republic TV , P-MARQ ಹಾಗೂ TimesNow-ETG ಸಮೀಕ್ಷಾ ವರದಿ ಹೇಳಿವೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಬಹುಮತದ ಸನಿಹಕ್ಕೆ ಬಂದು ನಿಲ್ಲುತ್ತದೆ ಎಂದೂ ಸಮೀಕ್ಷಾ ವರದಿ ಹೇಳಿವೆ.
Jan Ki Baat ಸಮೀಕ್ಷೆ ಗುಜರಾತಿನಲ್ಲಿ ಪ್ರಕಾರ ಬಿಜೆಪಿ 117-140 ಸೀಟುಗಳನ್ನು ಗೆದ್ದರೆ, ಕಾಂಗ್ರೆಸ್ 34-51 ಸ್ಥಾನಗಳನ್ನು ಗೆಲ್ಲಲಿದೆ. ಆದರೆ, ಭಾರೀ ನಿರೀಕ್ಷೆ ಹುಟ್ಟಿಸಿದ್ದ ಎಎಪಿ 6-13 ಸ್ಥಾನಗಳನ್ನಷ್ಟೇ ಗೆಲ್ಲಬಹುದು, 1-2 ಸ್ಥಾನಗಳು ಇತರೆ ಪಾಲಾಗಬಹುದು ಎಂದು ಜನ್ ಕಿ ಬಾತ್ ವರದಿ ಹೇಳಿದೆ.
P-MARQ ಪ್ರಕಾರ ಗುಜರಾತಿನಲ್ಲಿ BJP 128-148 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 30-42 ಸ್ಥಾನಗಳನ್ನು ಗೆಲ್ಲಲಿದೆ, ಇಲ್ಲೂ ಎಎಪಿ 2-10 ಸ್ಥಾನದೊಳಗೆ ತೃಪ್ತಿ ಪಡಲಿದೆ ಎಂದು ವರದಿಯಾಗಿದೆ. 0-3 ಸ್ಥಾನಗಳು ಇತರರ ಪಾಲಾಗಲಿವೆ.
182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತಿನಲ್ಲಿ ಬಹುಮತ ಸಾಧಿಸಲು 92 ಸ್ಥಾನಗಳು ಬೇಕಿರುವುದರಿಂದ ಸದ್ಯ ಹೊರಬಂದಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ.
68 ಕ್ಷೇತ್ರಗಳಿರುವ ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದ್ದು ಇಲ್ಲೂ ಬಿಜೆಪಿ ಬಹುಮತದ ಸನಿಹಕ್ಕೆ ಬಂದು ನಿಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 32-40 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 27-34 ಸ್ಥಾನ ಗೆದ್ದರೆ ಎಎಪಿ 0 ಹಾಗೂ 1-2 ಸ್ಥಾನಗಳು ಇತರೆ ಪಾಲಾಗಬಹುದು ಎಂದು Jan Ki Baat ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಹೆಚ್ಚಿದೆ. ಹಿಮಾಚಲ ಪ್ರದೇಶದ ವಿಷಯದಲ್ಲಿ P-MARQ ಸಮೀಕ್ಷೆ ಕೂಡಾ ಇಂತಹದ್ದೇ ಫಲಿತಾಂಶವನ್ನು ಹೇಳಿದ್ದು, ಬಿಜೆಪಿ 34-39 ಸ್ಥಾನಗಳು ಹಾಗೂ ಕಾಂಗ್ರೆಸ್ 28-33 ಸ್ಥಾನಗಳು ಗೆದ್ದರೆ ಎಎಪಿ 0-1 ಹಾಗೂ ಇತರೆ 1-4 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.
TimesNow-ETG ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 38, ಕಾಂಗ್ರೆಸ್ 28 ಎಎಪಿ 0 ಹಾಗೂ ಇತರೆ 2 ಸ್ಥಾನಗಳನ್ನು ಗೆಲ್ಲಲಿದೆ.






