2023ರ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ಈಗಿನಿಂದಲೇ ಭಾರೀ ಸರ್ಕಸ್ ಮಾಡುತ್ತಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆ, ಕರೋನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಸೇರಿದಂತೆ ಹಲವು ವಿಚಾರಗಳು ಈ ಬಾರಿ ಬಿಜೆಪಿಗೆ ಮುಳುವಾಗುವ ಸಾಧ್ಯತೆಯೇ ಹೆಚ್ಚು. ಜನರು ಬಿಜೆಪಿಯನ್ನು ತೀರಸ್ಕರಿಸುವ ಲೆಕ್ಕಾಚಾರಗಳು ಪಕ್ಷದ ಆಂತರಿಕ ವಲಯದಲ್ಲೇ ಕೇಳಿಬರುತ್ತಿವೆ. ಈಗಾಗಲೇ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕವಂತೂ ಪ್ರಬಲ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರವಾದಂತೆ ಕಾಣುತ್ತಿದೆ. ಇದು ಹೀಗೆ ಮುಂದುವರೆದರೆ ಬಿಜೆಪಿ ಚುನಾವಣೆಯಲ್ಲಿ ಮುಗ್ಗರಿಸುವ ಮುನ್ಸೂಚನೆ ಅರಿತ ನಾಯಕರು ಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಾಯಕತ್ವದಲ್ಲಿ ಪಕ್ಷ ಸಂಘಟಿಸಲು ಹೈಕಮಾಂಡ್ ಮುಂದಾದಂತೆ ಕಾಣುತ್ತಿದೆ.
ಸದ್ಯ ಈ ನಿಟ್ಟಿನಲ್ಲಿ ಒಂದಷ್ಟು ಕಾರ್ಯತಂತ್ರಗಳನ್ನ ರೂಪಿಸಿರುವ ಹೈಕಮಾಂಡ್ ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿ ಮಾಡಲಿದೆ. ಅದಕ್ಕೆ ಬೇಕಾಗಿರುವ ಅಗತ್ಯ ತಯಾರಿ ಕೂಡ ನಡೆಸಿಕೊಂಡಿದೆ. ಸಿಎಂ ಬದಲಾವಣೆ ನಡುವೆ ಪರ್ಯಾಯ ತಂತ್ರ ರೂಪಿಸಿರುವ ಹೈಕಮಾಂಡ್, ಹೊಸ ನಾಯಕರ ಹುಡುಕಾಟದಲ್ಲಿದೆ. ಹೀಗಾಗಿ ಪಕ್ಷದ ಪ್ರಮುಖ ಹುದ್ದೆಗಳ ಬದಲಾಣೆ ಮಾಡುವ; ಸಂಘಟನಾತ್ಮಕ ಹುದ್ದೆಗಳಿಗೆ ಮೇಜರ್ ಸರ್ಜರಿ ಮಾಡುವ ಮೂಲಕ ಸಂಘಟನೆಯನ್ನ ಬಲಿಷ್ಠಗೊಳಿಸುವ ಉದ್ದೇಶದಿಂದ ಹೈಕಮಾಂಡ್ ಈ ಬಾರಿ ಹೊಸ ಪ್ರಯೋಗಕ್ಕೆ ಸಿದ್ಧವಾದಂತೆ ಕಂಡುಬರುತ್ತದೆ.
ಪಕ್ಷದಲ್ಲೂ ಬದಲಾವಣೆ ಬಿರುಗಾಳಿ ಬೀಸುತ್ತಿದೆ. ಪಕ್ಷದಲ್ಲಿ ಯಾವ ರೀತಿ ಸಮತೋಲನತ ಇರಬೇಕು ಎಂಬ ನಿಟ್ಟಿನಲ್ಲಿ ಸೂತ್ರವೊಂದು ಸಿದ್ಧವಾಗಿದೆ. ಇದಕ್ಕಾಗಿ ಪ್ರಾಂತ್ಯ ಮತ್ತು ಸಮುದಾಯವಾರು ಪ್ರಾತಿನಿಧ್ಯ ಫಾರ್ಮುಲಾ ಜಾರಿಗೊಳಿಸಲು ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಪಕ್ಷದ ಸಾರಥಿಯನ್ನೇ ಬದಲಿಸಲು ಯೋಚನೆಯಲ್ಲಿದೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ಕೊಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಸ್ಥಾನಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯನ್ನ ನೇಮಕ ಮಾಡೋ ಸಾಧ್ಯತೆ ಹೆಚ್ಚು ಇದೆ.
ಕಟೀಲ್ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಬಿಜೆಪಿ ಪಾಳಯದೊಳಗೇ ಅಸಮಾಧಾನದ ಮಾತುಗಳು ಕೇಳಿಬಂದಿವೆ. ಇನ್ನೂ ಸಿ.ಟಿ ರವಿ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ನಳಿನ್ ಕಟೀಲ್ ಪ್ರತಿನಿಧಿಸುವ ಬಂಟ ಸಮುದಾಯ ರಾಜ್ಯದಲ್ಲಿ ಚಿಕ್ಕ ಸಮುದಾಯ. ರಾಜ್ಯದಲ್ಲಿ ಬಂಟ ಸಮುದಾಯಕ್ಕಿಂತ ಒಕ್ಕಲಿಗ ಮತಗಳೇ ಹೆಚ್ಚು. ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿಗೆ ಈಗಾಗಲೇ ಸಿಎಂ ಸ್ಥಾನ ನೀಡಲಾಗಿದೆ. ಒಕ್ಕಲಿಗ ಸಮುದಾಯದ ಮತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಹಂಚಿಹೋಗುತ್ತಿವೆ. ಬಿಜೆಪಿ ಪರ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಸೆಳೆಯಲು ಒಕ್ಕಲಿಗ ನಾಯಕನನ್ನು ಸಾರಥಿ ಮಾಡಲು ಚಿಂತನೆ ನಡೆಸಿದಂತೆ ತೋರುತ್ತಿದೆ.
ಸಿ.ಟಿ ರವಿಗೆ ಶಾಸಕರಾಗಿ, ಸಚಿವರಾಗಿಯೂ, ಪಕ್ಷ ಸಂಘಟನೆ ಮಾಡಿ ಅನುಭವವಿದೆ. ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕ. ಈಗಾಗಲೇ ಲಿಂಗಾಯತ ನಾಯಕರಾದ ಬೊಮ್ಮಾಯಿಗೆ ಸಿಎಂ ಪಟ್ಟ ಕೊಟ್ಟಿರೋ ಕೇಸರಿ ಪಡೆ, ಅಧ್ಯಕ್ಷ ಸ್ಥಾನವನ್ನ ಸಿ.ಟಿ ರವಿ ಹೆಗಲಿಗೇರಿಸಿ ಎರಡು ಸಮುದಾಯದ ಮತದಾರರನ್ನ ಸೆಳೆಯುವ ಯೋಚನೆ ಬಿಜೆಪಿಯದ್ದು.
ಹೀಗಾಗಿ ಎರಡು ಸಮುದಾಯಗಳ ನಾಯಕರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರುಗಳಾದ ಅಶ್ವತ್ಥ್ ನಾರಾಯಣ್, ಆರ್. ಅಶೋಕ್, ಸಿ.ಟಿ ರವಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ಆದ್ಯತೆ ನೀಡುವ ಲೆಕ್ಕಚಾರ ಇದೆ. ಹಾಗೆಯೇ ಲಿಂಗಾಯುತ ಸಮುದಾಯದ ಅರವಿಂದ್ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿಗೂ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ.
ಸರ್ಕಾರದಲ್ಲಿ ಉನ್ನತ ಸ್ಥಾನ ಸಿಗದವರಿಗೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ವಹಿಸಬಹುದು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಕೆಲವರಿಗೆ ಕೋಕ್ ಸಿಗಬಹುದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಹೆಸರಿನಲ್ಲಿ ಚುನಾವಣೆ ಗೆಲ್ಲಬೇಕೆ ಹೊರತು ಯಡಿಯೂರಪ್ಪ ವರ್ಚಸ್ಸಿನಿಂದಲ್ಲ ಎಂಬ ಸೂಚನೆ ಹೈಕಮಾಂಡ್ ನಿಂದ ರಾಜ್ಯ ಬಿಜೆಪಿಗೆ ರವಾನೆಯಾಗಿರಬಹುದು. ಹೀಗಾಗಿ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂಬ ಸಂದೇಶವನ್ನು ಈಗಾಗಲೇ ಪ್ರಮುಖ ನಾಯಕರು ಸಾರಿದ್ದಾರೆ. ಒಟ್ಟಾರೆ ಮುಂದಿನ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಸಕಲ ಸಿದ್ದತೆಯಲ್ಲಿ ತೊಡಗಿರುವುದಂತು ಸತ್ಯ.