ಸದನದಲ್ಲಿ ಸಂಡೂರು ಶಾಸಕ ತುಕಾರಾಂ ಹಕ್ಕುಚ್ಯುತಿ ಮಂಡಿಸಲು ಯತ್ನಿಸಿ, ತಹಶೀಲ್ದಾರ್ ಅವರು ಶಿಷ್ಟಾಚಾರ (ಪ್ರೊಟೊಕಾಲ್) ಪಾಲಿಸದೇ ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಆದ ಅವಮಾನ. ನನ್ನ ಹಕ್ಕುಚ್ಯುತಿಯಾಗಿದೆʼ ಎಂದೆಲ್ಲ ಅಲವತ್ತು ಕೊಂಡರು. ಮರುದಿನವೇ ಸಂಡೂರು ತಾಲೂಕಿನ ತಹಶೀಲ್ದಾರ್ ಎಚ್.ಜಿ.ರಶ್ಮಿ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಈ ವರ್ಗಾವಣೆ ಹಿಂದೆ ಸಂತೋಷ್ ಲಾಡ್ ಕೈವಾಡ ಇರಬಹುದೆಂಬ ಮಾತುಗಳು ವ್ಯಕ್ತವಾಗುತ್ತಿವೆ. ಸಂಡೂರು ಶಾಸಕ ತುಕಾರಾಂ ಸಂತೋಷ್ ಆಪ್ತರು. ಸಂಡೂರು ಮೀಸಲು ಕ್ಷೇತ್ರವಾದ ನಂತರ ಸಂತೋಷ್ ಲಾಡ್ ತಮ್ಮ ಗಣಿ ಉದ್ಯಮದಲ್ಲಿ ಮ್ಯಾನೇಜರ್ ಆಗಿದ್ದ ತುಕಾರಾಂರನ್ನು ಕಾಂಗ್ರೆಸ್ನಿಂದ ಗೆಲ್ಲಿಸಿಕೊಂಡು ಬಂದಿದ್ದಾರೆ. ಒಂದು ರೀತಿಯಲ್ಲಿ ಸಂತೋಷ್ ಲಾಡ್ ಸಂಡೂರಿನ ಡಿ-ಫ್ಯಾಕ್ಟೊ ಎಂಎಲ್ಎ ಇದ್ದಂತೆ. ಭೂ ಮಂಜೂರಾತಿ ರದ್ದಿಗೆ ಆದೇಶಿಸಿದ ತಹಶೀಲ್ದಾರ್ ಅವರಿಗೆ ವರ್ಗಾವಣೆ ಶಿಕ್ಷೆ ನೀಡುವ ಮೂಲಕ ಶಾಸಕ ತುಕಾರಾಂ ಸ್ವಾಮಿನಿಷ್ಠೆ ಮೆರೆದಿದ್ದಾರೆ ಎನ್ನಲಾಗುತ್ತಿದೆ.
ತಹಶೀಲ್ದಾರ್ ವರದಿಯಲ್ಲಿ ಏನಿದೆ?
ಆಗಸ್ಟ್ 2, 2021ರಂದು ಬಳ್ಳಾರಿ ಜಿಲ್ಲೆಯ ಸಹಾಯಕ ಆಯುಕ್ತರಿಗೆ ತಹಶೀಲ್ದಾರ್ ವರದಿ ಸಲ್ಲಿಸಿದ್ದು, ಸಂಡೂರು ತಾಲೂಕಿನ ಮಾಳಾಪುರ ಗ್ರಾಮದ ಸರ್ವೆ ನಂಬರ್ 123 ರಲ್ಲಿರುವ 4763 ಎಕರೆ ಭೂಮಿಯನ್ನು ಹನುಮನಮಗ ಹೊನ್ನೂರ್ ಅವರ ಹೆಸರಿಗೆ ಮಂಜೂರು ಮಾಡಲಾಗಿದೆ. ಭೂ ಮಂಜೂರಾತಿ ನಿಯಮದ ಪ್ರಕಾರ ಇದು ಅಕ್ರಮವಾಗಿದೆ. ಹೀಗಾಗಿ ಈ ಮಂಜೂರಾತಿಯನ್ನು ರದ್ದು ಮಾಡಿ ಜಮೀನನ್ನು ಸರ್ಕಾರ ಮರುವಶ ಮಾಡಿಕೊಳ್ಳಬೇಕು,ʼ ಎಂದು ಸೂಚಿಸಿದ್ದರು. ರಾಜಕುಮಾರ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಕೇಳಿದಾಗ ಈ ಮಾಹಿತಿ ಲಭ್ಯವಾಗಿದೆ.
ಈ ಜಮೀನನ್ನು ಹೊನ್ನೂರ್ ಅವರಿಂದ ಸಂತೋಷ್ ಲಾಡ್ ಕುಟುಂಬ 1992ರಲ್ಲಿ ಖರೀದಿಸಿತ್ತು. ತಹಶೀಲ್ದಾರ್ ಸೂಚನೆಯಂತೆ ತೋರಣಗಲ್ಲು ಕಂದಾಯ ನಿರೀಕ್ಷಕರು ದಾಖಲೆಗಳನ್ನು ಪರಿಶೀಲಿಸಿ, ಉಲ್ಲೇಖಿತ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ವರದಿ ನೀಡಿದ್ದರು. ಈ ವರದಿ ಆಧಾರದಲ್ಲಿ ತಹಶೀಲ್ದಾರ್ ರಶ್ಮಿ ಭೂ ಮಂಜೂರಾತಿ ರದ್ದುಗೊಳಿಸಿ ಎಂದು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.
ಆಗಿನಿಂದಲೇ ರಶ್ಮಿ ಅವರು ಭೂ ಮಂಜೂರಾತಿ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದ್ದರು. ಅದು ಸರ್ಕಾರಿ ಭೂಮಿ ಎಂದು ಅದನ್ನು ಹೊನ್ನೂರ್ ಎಂಬ ಏಕ ವ್ಯಕ್ತಿಗೆ ಮಂಜೂರು ಮಾಡಿದ್ದು ಭೂ ಮಂಜೂರಾತಿ ಕಾಯ್ದೆಯ ಉಲ್ಲಂಘನೆ ಎಂದು ನಿರೂಪಿಸಲು ಅಗತ್ಯವಾದ ದಾಖಲೆಗಳನ್ನು ಕ್ರೋಢೀಕರಣ ಮಾಡಿದ್ದರು. ಇನ್ನೇನು ಇಡೀ ಪ್ರಕ್ರಿಯೆ ಮುಗಿಯುವ ಹಂತದಲ್ಲಿತ್ತು. ಈ ಸಂದರ್ಭದಲ್ಲೇ ನಾಟಕೀಯ ಬೆಳವಣಿಗೆಯಲ್ಲಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ವಿವಾದಿತ ಜಮೀನು ಲಾಡ್ ಕುಟುಂಬದ ಹೆಸರಲ್ಲಿ ಇರುವುದರಿಂದ ಈ ವರ್ಗಾವಣೆಯ ಹಿಂದೆ ಸಂತೋಷ್ ಲಾಡ್ ಹಿತಾಸಕ್ತಿ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ.
1982ರವರೆಗೂ ಕೈ ಬರಹದ ಪಹಣಿಯಲ್ಲಿ ಮಾಳಾಪುರದ 123 ಸರ್ವೆ ನಂಬರಿನ 47.63 ಎಕರೆ ಜಮೀನು ಸರ್ಕಾರಿ ಜಮೀನು ಎಂದೇ ಉಲ್ಲೇಖವಾಗಿದೆ. 1982-83ರ ಪಹಣಿಯಲ್ಲಿ ಹನುಮನಮಗ ಹೊನ್ನೂರ್ ಅವರ ಹೆಸರು ಕಂಡು ಬರುತ್ತದೆ. ಪರಿಶಿಷ್ಟ ಸಮುದಾಯದವರಿಗೆ ಸರ್ಕಾರ ಜಮೀನು ಮಂಜೂರು ಮಾಡುತ್ತದೆ, ನಿಜ. ಆದರೆ,47.63 ಎಕರೆ ಜಮೀನನ್ನು ಒಬ್ಬರೇ ಒಬ್ಬರಿಗೆ ಮಂಜೂರು ಮಾಡುವುದು ಕಾನೂನುಬಾಹಿರ.
ಇಲ್ಲಿ ಸಂಶಯ ಕಾಡುವುದು ಏನೆಂದರೆ ಲಾಡ್ ಜುಟುಂಬ ಹೊನ್ನೂರ್ ಅವರ ಹೆಸರಿಗೆ ಮಂಜೂರು ಮಾಡಿಸಿ, ಹತ್ತು ವರ್ಷದ ನಂತರ ಖರೀದಿ ಪತ್ರ ಮಾಡಿಸಿಕೊಂಡಿತೇ?
1982-83ರಿಂದ 1990-91ರವರೆಗೂ ಪಹಣಿ ದಾಖಲೆಗಳಲ್ಲಿ ಹೊನ್ನೂರ್ ಅವರ ಹೆಸರೇ ಇದೆ. 1992-93ರಲ್ಲಿ ಪಹಣಿಯಲ್ಲಿ ಲಾಡ್ ಕುಟುಂಬದ ಹೆಸರುಗಳು ಕಾಣಿಸಿಕೊಂಡಿವೆ. ಹೊನ್ನೂರ್ ಅವರಿಂದ ತಾವು ಜಮೀನು ಖರೀದಿಸಿದ್ದಾಗಿ ಲಾಡ್ ಕುಟುಂಬ ಹೇಳಿದೆ. ಅಶೋಕ್ ಲಾಡ್, ವಿನಾಯಕ್ ಲಾಡ್. ಸಂತೋಷ್ ಲಾಡ್, ಶಿವಾಜಿರಾವ್ ಪೋಳ್, ರೂಪಾ ಲಾಡ್ ಹೆಸರಲ್ಲಿ ಭೂಮಿ ಖಾತೆ ಆಗಿದೆ. ಶಿವಾಜಿರಾವ್ ಅವರ ಹೆಸರಲ್ಲಿ 7.63 ಎಕರೆ ಇದ್ದು, ಉಳಿದವರ ಹೆಸರಲ್ಲಿ ತಲಾ 8 ಎಕರೆ ಭೂಮಿಯಿದೆ.
ಸರ್ಕಾರ ಮಂಜೂರು ಮಾಡಿದ ಜಮೀನನ್ನು ಮಾರುವಂತಿಲ್ಲ. ಮಾರಣಾಂತಿಕ ಕಾಯಿಲೆ ಇದ್ದಾಗ ಚಿಕಿತ್ಸೆಗೆಂದು ಮಾರಬಹುದು. ಇಲ್ಲಿ ಹೊನ್ನೂರ್ ಅವರಿಗೆ ಅಂತಹ ಕಾಯಿಲೆ ಇತ್ತೇ? ಇದ್ದಿದ್ದರೆ, ಚಿಕಿತ್ಸೆಗೆ 47 ಎಕರೆ ಭೂಮಿ ಮಾರಾಟವ ಅಗತ್ಯವಿತ್ತೆ? ಎಂಬ ಪ್ರಶ್ನೆಗಳು ಏಳುತ್ತವೆ.
ಅಂದಂತೆ 1981ರವರೆಗೂ ಸುಮಾರು 50 ವರ್ಷ ಕಾಲ ಈ ಜಮೀನಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೊನ್ನೂರ್ಸ್ವಾಮಿ, ಮಾರಕ್ಕ, ಬಸಾಪುರ ಹನುಮಂತ, ಚೌಡಯ್ಯ, ಲಕ್ಷ್ಮಿ, ದೊಡ್ಡ ಮಾರಣ್ಣ, ಮಹೇಶ್, ಜಗದೀಶ್ ಮಾರಣ್ಣ, ದುರ್ಗಮ್ಮ, ಅಲ್ಲಾಭಕ್ಷಿ ಮತ್ತು ಓದಣ್ಣ- ಹೀಗೆ 16 ಕುಟುಂಬಗಳು ಸಾಗಿವಳಿ ಮಾಡುತ್ತಿದ್ದವು. 1982-83ರಲ್ಲಿ ಹೊನ್ನೂರ್ ಹೆಸರಿಗೆ ಈ ಜಮೀನು ಖಾತೆ ಆಗಿದೆ.
ಈ ಕುರಿತು ತಹಶೀಲ್ದಾರ್ ರಶ್ಮಿ ಅವರನ್ನು ʼಪ್ರತಿಧ್ವನಿʼ ಸಂಪರ್ಕಿಸಿದಾಗ ಈ ವಿಷಯದ ಬಗ್ಗೆ ಮಾತನಾಡಲು ನಿರಾಕರಿಸಿದರು.
ʼಪ್ರತಿಧ್ವನಿʼ ಜೊತೆ ಮಾತನಾಡಿದ ಸಂಡೂರು ಬಿಜೆಪಿ ಮಂಡಲದ ಅಧ್ಯಕ್ಷ ಟಿ. ಪಂಪಾಪತಿ, ʼತಹಶೀಲ್ದಾರ್ ವರ್ಗಾವಣೆ ಹಿಂದೆ ಸಂತೋಷ್ ಲಾಡ್ ಮತ್ತು ಶಾಸಕ ತುಕಾರಾಂ ಕೈವಾಡವಿದೆ. ಹಿಂದೆ ಸಾಗುವಳಿ ಮಾಡುತ್ತಿದ್ದ ಕುಟುಂಬಗಳಿಗೆ ಜಮೀನು ಖಾತೆ ಮಾಡಿಸುವುದಾಗಿ ಸಂತೋಷ್ ಲಾಡ್ ಭರವಸೆ ಕೊಡುತ್ತ ಬಂದಿದ್ದಾರೆ. ಕಳೆದ ವರ್ಷ ಈ ಕುಟುಂಬಗಳು ತಹಸೀಲ್ದಾರ್ ಮೊರೆ ಹೋದ ನಂತರ ಜಮೀನಿನ ಕುರಿತು ವಿಚಾರಣೆ ಆರಂಭವಾಯಿತು. ಈಗ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಹಂತ ಬಂದಿದೆ. ಹೀಗಾಗಿ ತಹಶೀಲ್ದಾರ್ ರಶ್ಮಿ ಅವರನ್ನು ವರ್ಗಾವಣೆ ಮಾಡಲಾಗಿದೆʼ ಎಂದು ಆರೋಪಿಸಿದರು.
ಈ ಕುರಿತು ಸಂತೋಷ್ ಲಾಡ್ ಅವರನ್ನು ʼಪ್ರತಿಧ್ವನಿʼ ಸಂಪರ್ಕಿಸಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಶಾಸಕ ತುಕಾರಾಂ ಕೂಡ ಕರೆಯನ್ನು ಸ್ವೀಕರಿಸಲಿಲ್ಲ.