ಮಾರಕ ಕೊರೋನಾ ಎರಡು ವರ್ಷಗಳ ಕಾಲ ಬೆಂಬಿಡದೆ ಕಾಡುತ್ತಿರುವ ಪರಿಣಾಮ ದೇಶದ ಆರ್ಥಿಕ ಚಟುವಟಿಕೆಗಳು ಬುಡಮೇಲು ಆಗಿವೆ. ಜನ ಅಂತೂ ಕೆಲಸವಿಲ್ಲದೆ ಪ್ರತಿನಿತ್ಯ ಪರದಾಡುತ್ತಿದ್ದಾರೆ. ಇದು ಸಾಲದು ಎಂಬತೆ ಕೇಂದ್ರ ಸರ್ಕಾರ ದಿನನಿತ್ಯ ಬಳಕೆಗಳ ವಸ್ತುಗಳು ಸೇರಿದಂತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದ್ದು, ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೈಲ ಬೆಲೆ ಏರಿಕೆ, ಎಲ್ಪಿಜಿ ಸಿಲಿಂಡರ್ ಗ್ಯಾಸ್ ದರ ಹೆಚ್ಚಳದಿಂದ ಜನಸಾಮಾನ್ಯರು ತಲೆ ಮೇಲೆ ಕೈ ಹಿಡಿದುಕೊಂಡು ಕೂತಿದ್ದಾರೆ. ನಿತ್ಯವೂ ಜೀವನ ಸಾಗಿಸೋದು ಹೇಗಪ್ಪ ಎಂದು ತಲೆಕೆಡಿಸಿಕೊಂಡಿದ್ದಾರೆ. ಈ ಎಲ್ಲವೂ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದರಲ್ಲಿ ಮತ್ತು ರಾಜಕೀಯ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ.
ಹೌದು, ರಾಜ್ಯದಲ್ಲಿ ಪೆಟ್ರೋಲ್ ದರ ರಾಜ್ಯದಲ್ಲಿ ಶತಕ ಬಾರಿಸಿದ್ದಾಗಿದೆ. ಡೀಸೆಲ್ ದರ ಶತಕದ ಬಳಿಗೆ ಮುನ್ನುಗ್ಗುತ್ತಿದೆ. ಇನ್ನೂ ಗ್ಯಾಸ್ ರೇಟ್ ಅಂತೂ ಕೇಳಂಗಿಲ್ಲ. ಮೊನ್ನೆಯಷ್ಟೇ 25 ರೂಪಾಯಿ ಹೆಚ್ಚಾಗಿದೆ. ಇಷ್ಟೆಲ್ಲಾ ಬೆಲೆ ಏರಿಕೆ ಬಿಸಿಯಿಂದ ಜನರ ಜೀವನ ಕಠೋರವಾಗುತ್ತಾ ಸಾಗುತ್ತಿದೆ. ಆದರೆ, ಇದ್ಯಾವುದರ ಪರಿಜ್ಞಾನವೇ ಇಲ್ವೇನೋ ಎಂಬಂತಿದೆ ನಮ್ಮ ಜನಪ್ರತಿನಿಧಿಗಳ ಭಾಷಣ.
ಇತ್ತೀಚೆಗೆ ಬೆಲೆ ಹೆಚ್ಚಳದ ಬಗ್ಗೆ ಸಚಿವ ನಾರಾಯಣ ಗೌಡ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಬೆಲೆ ಏರಿಕೆಯಿಂದ ಯಾರೂ ಬೀದಿಗೆ ಬಂದಿಲ್ಲ. ನಿಜವಾದ ಗ್ಯಾಸ್ ಬಳಕೆದಾರರು ಯೂರೂ ಹೋರಾಟ ಮಾಡ್ತಿಲ್ಲ. ಇದು ಕೇವಲ ವಿರೋಧ ಪಕ್ಷದವರ ಪಿತೂರಿ ಎಂದು ಬೆಲೆ ಏರಿಕೆಯನ್ನ ವಿರೋಧ ಪಕ್ಷಗಳ ತಲೆಗೆ ಕಟ್ಟಿದ್ದಾರೆ.
ಇನ್ನೊಂದೆಡೆ ಮತ್ತೊಬ್ಬ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಪ್ರಕಾರ ತೈಲ ಬೆಲೆ ಏರಿಕೆಗೆ ತಾಲಿಬಾನಿಗಳು ಕಾಣವಂತೆ. ಕಚ್ಚಾ ತೈಲ ಸರಿಯಾಗಿ ಬರ್ತಿಲ್ಲ, ಹೀಗಾಗಿ ದರ ಏರಿಕೆಯಾಗಿದೆ ಎನ್ನುತ್ತಿದ್ದಾರೆ. ತಾಲಿಬಾನಿ ಸಮಸ್ಯೆಗೂ ಮುನ್ನ ತೈಲ ಬೆಲೆ ಶತಕ ಬಾರಿಸಿದ್ದು, ಶಾಸಕರಿಗೆ ಗೊತ್ತಿಲ್ಲವೇ ಎಂಬಂತೆ ಬೇಜವಾಬ್ದಾರಿ ಮಾತುಗಳನ್ನು ಆಡಿದ್ದಾರೆ.
ಇನ್ನು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಎಲ್ಪಿ ಗ್ಯಾಸ್ ದರ ಗಗನಕ್ಕೇರಿದೆ. ಲೀಟರ್ ಪೆಟ್ರೋಲ್ಗೆ 105 ರೂ., ಲೀಟರ್ ಡೀಸೆಲ್ಗೆ 95 ರೂ. ಆಗಿದೆ. ಎಲ್ಪಿಜಿ ಗ್ಯಾಸ್ ದರ ಅಂತೂ 863 ರೂ. ಆಗಿದೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ಹೋರಾಟ ಮಾಡುವಷ್ಟು ಬೆಲೆ ಏರಿಕೆಯಾಗಿಲ್ಲ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ. ಇಡೀ ಜಗತ್ತು ಕೊರೋನಾದಿಂದ ತತ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂದೂ ಭ್ರಷ್ಟಾಚಾರ ಮಾಡುವುದಿಲ್ಲ ಎಂಬ ಜನರಿಗೆ ಇದೆ. ಬೆಲೆ ಏರಿಕೆ ವಿರುದ್ಧ ಜನರೇ ಹೋರಾಟ ಮಾಡುತ್ತಿಲ್ಲ, ಕಾಂಗ್ರೆಸ್ ಹೋರಾಟದ ಹಿಂದೆ ರಾಜಕೀಯ ಉದ್ದೇಶವಿದೆ. ಕಾಂಗ್ರೆಸ್ಗೆ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುವ ನೈತಿಕತೆ ಇಲ್ಲ ಎಂದಿದ್ದಾರೆ.
ಇನ್ನು, ಬಿಜೆಪಿ ಹೈಕಮಾಂಡ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ. ಹಾಗಾಗಿ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾದರೂ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾದರೂ ಬೇಕಂತಲೇ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.