ಇನ್ನೇನು ಕೆಲವೇ ದಿನಗಳಲ್ಲಿ 2023ರ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿಯಿಂದ ಟಿಕೆಟ್ ಸಿಗದೇ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣಾ ಕಣಕ್ಕಿಳಿದಿರುವ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿ ಕತ್ತಿ ಮಸೆಯುತ್ತಿದೆ. ಶೆಟ್ಟರ್‌ರನ್ನು ಈ ಬಾರಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲಿಸಲು ಬಿಜೆಪಿ ನಾಯಕರು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದ ಕೇವಲ ಹತ್ತೇ ದಿನದಲ್ಲಿ ಹುಬ್ಬಳ್ಳಿ ಘಟಾನುಘಟಿ ನಾಯಕರುಗಳು ಭೇಟಿ ನೀಡಿ ಸರಣಿ ಸಭೆಗಳನ್ನು ಮಾಡಿದ್ದು, ಜಗದೀಶ್ ಶೆಟ್ಟರ್‌ಅನ್ನ ಸೋಲಿಸಲು ಬೇಕಾದ ಎಲ್ಲಾ ರಣತಂತ್ರಗಳನ್ನು ಹೆಣೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರನ್ನು ಹಾಗೂ ಪಕ್ಷದ ಪದಾಧಿಕಾರಿಗಳನ್ನು ಜಗದೀಶ್ ಶೆಟ್ಟರ್ ಹಿಂದೆ ಹೋಗದಂತೆ ಹಿಡಿದಿಟ್ಟುಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಗಾಳ ಹಾಕುತ್ತಿದ್ದು, ಅಲ್ಲದೇ ಮೊದಲ ಹಂತವಾಗಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮಾಜಿ ಮೇಯರ್ ಪ್ರಕಾಶ್ ಕ್ಯಾರಕಟ್ಟಿ ಅವರನ್ನು ಬಿಜೆಪಿಗೆ ಸೆಳೆಯುವ ಮೂಲಕ ಜಗದೀಶ್ ಶೆಟ್ಟರ್ಗೆ ಶಾಕ್ ಕೊಟ್ಟಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪರೇಶನ್ ಕಮಲ ಯಶಸ್ವಿಯಾಗಿದೆ.