ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಎಂದರೆ ರೇವಣ್ಣ ರೇವಣ್ಣ ಎಂದರೆ ಜೆಡಿಎಸ್ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹೊಗಳಿಕೆಯ ಮಾತುಗಳನ್ನಾಡಿ ಅಚ್ಚರಿ ಹುಟ್ಟಿಸಿದ್ದಾರೆ. ಇದು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡರಿಗೆ ನೀಡಿದ ಎಚ್ಚರಿಕೆಯೇ ಎಂಬ ಸಂಶಯವೂ ಸ್ಥಳೀಯರಲ್ಲಿ ಮೂಡಿದೆ.
ಜಿಲ್ಲೆಯ ರಾಜಕಾರಣದಲ್ಲಿ ಎಚ್.ಡಿ. ರೇವಣ್ಣ ಅವರಿಗಿರುವ ಶಕ್ತಿಯನ್ನು ನಾನು ಅಲ್ಲಗಳೆಯಲಾರೆ. ರೇವಣ್ಣ ಅವರು ಹಾಸನ ಜಿಲ್ಲೆಯ ರಾಜಕಾರಣವನ್ನು 50 ವರ್ಷಗಳಿಂದ ಬಲ್ಲವರು. ಮಂಡ್ಯದಲ್ಲಿ ನಿಖೀಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸೋತರೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡರು. ರಾಜ್ಯದಲ್ಲಿ ಜೆಡಿಎಸ್ ಗೆದ್ದ ಒಂದು ಲೋಕಸಭಾ ಸ್ಥಾನ ಹಾಸನ ಕ್ಷೇತ್ರ ಎಂದು ಪ್ರೀತಂ ಹೇಳಿದ್ದಾರೆ.
ಹೊಳೆ ನರಸೀಪುರದಲ್ಲಿ ರೇವಣ್ಣ ವಿರುದ್ಧವೂ ಸ್ಪರ್ಧೆಗಿಳಿಯುವದಾಗಿ ಊಹಾಪೋಹಗಳಿದ್ದ ಪ್ರೀತಂ ಗೌಡ ಏಕಾಏಕಿ ರೇವಣ್ಣರನ್ನು ಹೊಗಳಲು ಶುರು ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಎಂಎಲ್ಸಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಸೋತರೂ ಹಾಸನ ಜಿಲ್ಲೆಯಲ್ಲಿ ಸೂರಜ್ ರೇವಣ್ಣ ಅವರನ್ನು ಗೆಲ್ಲಿಸಿಕೊಂಡರು. ರೇವಣ್ಣ ಅವರಿಗಿರುವ ರಾಜಕೀಯ ಶಕ್ತಿಯನ್ನು ಟೀಕೆ ಮಾಡುವವರಿಗೆ ಹಾಸನ ಜಿಲ್ಲೆಯ ರಾಜಕೀಯ ಗೊತ್ತಿಲ್ಲ ಎಂದೇ ಅರ್ಥ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರಿಗಿರುವ ರಾಜಕೀಯ ಶಕ್ತಿಯನ್ನು ಒಪ್ಪಿಕೊಳ್ಳುತ್ತೇನೆ. ಗುಣಕ್ಕೆ ಮತ್ಸರ ಪಡಬಾರದು. ರೇವಣ್ಣ ಅವರ ಶಕ್ತಿಯನ್ನು ಪ್ರಶ್ನಿಸುವುದು ಒಳ್ಳೆಯದಲ್ಲ. ಅವರಿಗೆ ಗೌರವ ಕೊಡಲೇಬೇಕು. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರ ಆಶೀರ್ವಾದ ಇಲ್ಲದ ಜೆಡಿಎಸ್ ಅಭ್ಯರ್ಥಿ ಠೇವಣಿಯನ್ನೂ ಪಡೆಯಲಾರ ಎಂದು ಪ್ರೀತಂ ಹೇಳಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ನೀಡಬೇಕೆಂಬ ರೇವಣ್ಣ ಅವರ ಸತತ ಪ್ರಯತ್ನದ ಹೊರತಾಗಿಯೂ ಕುಮಾರಸ್ವಾಮಿ ಅದನ್ನು ಸ್ವರೂಪ್ ಗೆ ಕೊಡಲು ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರೇವಣ್ಣರಿಗೆ ಸ್ವರೂಪ್ ಮೇಲೆ ಅಸಮಾಧಾನ ಇದೆ ಎನ್ನಲಾಗಿದೆ. ಹೆಚ್‌ಡಿಕೆ ತೆಗೆದ ನಿರ್ಣಯ ತಪ್ಪು ಎಂದು ಸಾಬೀತುಪಡಿಸಲು ಪ್ರೀತಂಗೆ ಹಿಂಬಾಗಿಲ ಬೆಂಬಲ ನೀಡಲಿದ್ದಾರೆ ಎಂಬ ಗುಸುಗುಸುವನ್ನು ರೇವಣ್ಣ ವಿರೋಧಿಗಳು ಮಾತನಾಡುತ್ತಿದ್ದಾರೆ
ಈ ಹಿನ್ನೆಲೆಯಲ್ಲಿ ರೇವಣ್ಣರನ್ನು ಸ್ವರೂಪ್ ಯದ್ವಾ ತದ್ವಾ ಹೊಗಳಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಥವಾ ಇದೊಂದು ಬಿಜೆಪಿಯ ಪ್ಲ್ಯಾನ್ ಆಗಿದ್ದು, ರೇವಣ್ಣ ಪ್ರೀತಂ ಪರ ಇದ್ದಾರೆ ಎಂಬ ಹುಯಿಲೆಬ್ಬಿಸಿ ಜೆಡಿಎಸ್ ಹಾಗೂ ಸ್ವರೂಪ್ ಆತ್ಮಬಲವನ್ನು ಕುಗ್ಗಿಸುವ ತಂತ್ರ ಎಂದೂ ಹೇಳಲಾಗಿದೆ.
ಏನೇ ಆದರೂ, ಈಗಾಗಲೇ ಭವಾನಿ ರೇವಣ್ಣ, ರೇವಣ್ಣ ಸ್ವರೂಪ್ ಗೆ ಬಹಿರಂಗ ಸಭೆಯಲ್ಲೇ ಬೆಂಬಲ ಘೋಷಿಸಿದ್ದಾರೆ. ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಫಲಿತಾಂಶ ಏನಾಗುತ್ತದೆಯೋ ಎನ್ನುವುದು ಕಾದು ನೋಡಬೇಕಿದೆ.