ಬಿಜೆಪಿ ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕಿರುವ ಭಾರತೀಯ ಜನತಾ ಪಾರ್ಟಿ ನಾಯಕರು 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದ್ದಾರೆ. ಟಿಕೆಟ್ ಹಂಚಿಕೆ ವಿಶೇಷ ಅಂದ್ರೆ ಆರ್ ಅಶೋಕ್ ಹಾಗು ಸೋಮಣ್ಣ ಅವರಿಗೆ 2 ಕ್ಷೇತ್ರಗಳಿಂದ ಟಿಕೆಟ್ ಕೊಡಲಾಗಿದೆ. ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷ ಸ್ಪರ್ಧೆ ಮಾಡುವ ಕನಕಪುರ ಕ್ಷೇತ್ರದಿಂದ ಹಾಗು ಹಾಲಿ ಶಾಸಕರಾಗಿರುವ ಪದ್ಮನಾಭನಗರದಿಂದ ಆರ್ ಅಶೋಕ್ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವರುಣಾ ಕ್ಷೇತ್ರ ಹಾಗು ಚಾಮರಾಜನಗರ ಕ್ಷೇತ್ರದಿಂದ ವಿ ಸೋಮಣ್ಣ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಆದರೆ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಬಗ್ಗೆ ಬಿಜೆಪಿ ಇನ್ನೂ ಕೂಡ ಸಸ್ಪೆನ್ಸ್ ಉಳಿಸಿಕೊಂಡಿದೆ. ಸೋಮಣ್ಣ ಎರಡೂ ಕಡೆ ಹೊಸ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಮಾಡಬೇಕಿದೆ.
ಯಡಿಯೂರಪ್ಪ ಮಗನಿಗೆ ಖುಷ್, ಇನ್ನುಳಿದವರಿಗೆ ಮಿಸ್..!
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಂತಿಮವಾಗಿ ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವಂತೆ ಸೂಚನೆ ಕೊಡಲಾಗಿದೆ ಎನ್ನುವ ಸುದ್ಧಿ ಭಾರೀ ಪ್ರಚಾರ ಪಡೆದಿತ್ತು. ಅಂತಿಮವಾಗಿ ಬಿ.ಎಸ್ ಯಡಿಯೂರಪ್ಪ ವರುಣಾದಿಂದ ಸ್ಪರ್ಧೆ ಮಾಡಲ್ಲ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಂತಿಮವಾಗಿ ಶಿಕಾರಿಪುರದಿಂದಲೇ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಚಿವ ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರದಿಂದ ಮಗನಿಗೆ ಟಿಕೆಟ್ ಕೇಳಿದ್ದರು. ಭಾರತೀಯ ಜನತಾ ಪಾರ್ಟಿ ಸ್ವತಃ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ಗೆ ಮಣೆ ಹಾಕಿದೆ. ಚಿತ್ರದುರ್ಗ ಕ್ಷೇತ್ರದಿಂದ ಜಿ.ಹೆಚ್ ತಿಪ್ಪಾರೆಡಿ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದರು. ಅಂತಿಮವಾಗಿ ತಿಪ್ಪಾರೆಡ್ಡಿಗೇ ಬಿಜೆಪಿ ಟಿಕೆಟ್ ಕೊಟ್ಟಿದೆ. ಈಶ್ವರಪ್ಪ ಕೂಡ ಶಿವಮೊಗ್ಗ ಕ್ಷೇತ್ರದಿಂದ ಮಗನಿಗೆ ಟಿಕೆಟ್ ಕೇಳಿದ್ದು, ಇಲ್ಲಿ ಟಿಕೆಟ್ ಘೋಷಣೆಯನ್ನು ಕಾಯ್ದಿರಿಸಿದೆ.
ವಲಸೆ ಶಾಸಕರಿಗೆ ಮಣೆ, ಹಾಲಿ ಶಾಸಕರಿಗೇ ಕೊಕ್..!
ಕಾಂಗ್ರೆಸ್, ಜೆಡಿಎಸ್ನಿಂದ ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಎಲ್ಲಾ ಶಾಸಕರಿಗೂ ಟಿಕೆಟ್ ಕೊಡಲಾಗಿದೆ. ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಟಿಕೆಟ್ ಮಿಸ್ ಆಗಲಿದೆ ಎನ್ನುವ ಸುದ್ಧಿ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಅಂತಿಮವಾಗಿ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗ್ತಿದ್ದ ಎಸ್ಟಿ ಸೋಮಶೇಖರ್ ಹಾಗು ಕೆ.ಸಿ ನಾರಾಯಣಗೌಡಗೂ ಬಿಜೆಪಿ ಟಿಕೆಟ್ ಘೋಷಣೆ ಆಗಿದೆ. ವಿಶೇಷ ಅಂದ್ರೆ ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್ಗೆ ಟಿಕೆಟ್ ಕೈತಪ್ಪಿದ್ದು, ಹಿಜಾಬ್ ವಿವಾದವನ್ನು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದ ಯಶ್ಪಾಲ್ ಸುವರ್ಣಗೆ ಟಿಕೆಟ್ ನೀಡಲಾಗಿದೆ. ಇನ್ನೂ ಕೂಡ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡುವ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಘೋಷಣೆ ಆಗಿಲ್ಲ. ದೆಹಲಿಗೆ ಬರುವಂತೆ ಜಗದೀಶ್ ಶೆಟ್ಟರ್ಗೆ ಬುಲಾವ್ ಬಂದಿದ್ದು, ನಾನು ದೆಹಲಿಗೆ ಬರಲ್ಲ ಎಂದು ಸಡ್ಡು ಹೊಡೆದಿದ್ದಾರೆ ಎನ್ನಲಾಗಿದೆ.
ಕುಟುಂಬಗಳಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್..!
ಭಾರತೀಯ ಜನತಾ ಪಾರ್ಟಿ ನಾಯಕರು ಬಾಯಿ ಬಿಟ್ಟರೆ ಸದಾ ಕಾಲ ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಆದರೆ ಬಿಜೆಪಿ ಕೂಡ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ ಎನ್ನುವುದನ್ನು ಟಿಕೆಟ್ ಪಟ್ಟಿ ಸಾಬೀತು ಮಾಡಿದೆ. ದಿವಂಗತ ಉಮೇಶ್ ಕತ್ತಿ ಸಹೋದರನಿಗೆ ಚಿಕ್ಕೋಡಿ – ಸದಲಗಾ ಕ್ಷೇತ್ರದಿಂದ ರಮೇಶ್ ಕತ್ತಿ ಹಾಗು ಪುತ್ರನಿಗೆ ಹುಕ್ಕೇರಿ ಕ್ಷೇತ್ರದಿಂದ ನಿಖಿಲ್ ಕತ್ತಿಗೆ ಟಿಕೆಟ್ ಘೋಷಣೆ ಆಗಿದೆ. ಇನ್ನು ಬೆಳಗಾವಿಯ ಅರಭಾವಿ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ ಹಾಗು ಗೋಕಾಕ್ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿಗೆ ಟಿಕೆಟ್ ಸಿಕ್ಕಿದೆ. ಅತ್ತ ಸವದತ್ತಿ ಕ್ಷೇತ್ರದಿಂದ ದಿವಂಗತ ಶಾಸಕ ಆನಂದ ಮಾಮನಿ ಪತ್ನಿ ರತ್ನ ವಿ ಮಾಮನಿ, ಕಲಬುರಗಿಯ ಚಿಂಚೋಳಿ ಕ್ಷೇತ್ರದಿಂದ ಸಂಸದ ಉಮೇಶ್ ಜಾಧವ್ ಪುತ್ರ ಡಾ ಅವಿನಾಶ್ ಜಾಧವ್, ಹಾಲಿ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ಗೆ ವಿಜಯನಗರ ಕ್ಷೇತ್ರದ ಟಿಕೆಟ್ ಕೊಟ್ಟಿದ್ದು, ಮಾಜಿ ಸಚಿವ ವಿ ರಾಮಚಂದ್ರಗೌಡ ಅವರ ಪುತ್ರ A.R ಸಪ್ತಗಿರಿಗೌಡಗೆ ಗಾಂಧಿನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.