ಬೆಂಗಳೂರು:ಮಾ.25: ನಿನ್ನೆ ಸಿಎಂ ಬೊಮ್ಮಾಯಿ ಅವರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ತೀರ್ಮಾನ ಪರಿಶಿಷ್ಟ ಜಾತಿಯನ್ನು ಅಪಹಾಸ್ಯ ಮಾಡುವ ಪ್ರಯತ್ನವಾಗಿದೆ ಎಂದು ದಲಿತ ನಾಯಕರು ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾತನಾಡಿದ ದಲಿತ ಮುಖಂಡರು, ಇದು ಸದಾಶಿವ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿರುವ ಪ್ರಸ್ತಾವನೆಯ ಮೀಸಲಾತಿ ಸದಸ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಆದೇಶವಾಗಿ ಜಾರಿಯಾಗಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮಂಕುಬೂದಿ ಎರಚುವ ಪ್ರಯತ್ನವಾಗಿದೆ. ಇದನ್ನು ಪರಿಶಿಷ್ಟ ಜಾತಿ ಸಮುದಾಯದ ಎಲ್ಲರ ಪರವಾಗಿ ಖಂಡಿಸುತ್ತೇವೆ ಎಂದು ಸುದಾಮ್ ದಾಸ್ ಹೇಳಿದರು..
ಈ ವಿಚಾರವಾಗಿ ದಶಕಗಳಿಂದ ಪರಿಶಿಷ್ಟ ಜಾತಿ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡುತ್ತಾ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕೊನೆಯ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಕಳುಹಿಸುವ ನಾಟಕವಾಡುತ್ತಿದೆ. ಒಳ ಮೀಸಲಾತಿ ವಿಚಾರ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ.
ತಮಿಳುನಾಡು, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಬಾಕಿ ಇದೆ. 2004ರಲ್ಲಿ ಸಂತೋಷ್ ಹೆಗಡೆ ಅವರ ನೇತೃತ್ವದಲ್ಲಿ ಸಂವಿಧಾನ ಪೀಠವು ರಾಜ್ಯ ಸರ್ಕಾರ ಸಭೆಗಳು ಹಾಗೂ ರಾಜ್ಯ ಸರ್ಕಾರ ತೀರ್ಮಾನಿಸುವ ಶಿಫಾರಸ್ಸಿನ ಮೇಲೆ ಈ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ತೀರ್ಪು ಪರಿಶಈಲನೆ ಕುರಿತಂದೆ 2007ರಲ್ಲಿ ಯುಪಿಎ ಸರ್ಕಾರ ಉಷಾ ಮೆಹ್ರಾ ಸಮಿತಿ ನೇಮಿಸಿತ್ತು. ಇದನ್ನು ಕಾನೂನಾತ್ಮಕ ಜಾರಿಗೆ ವರದಿ ನೀಡುವಂತೆ ಸೂಚಿಸಿತ್ತು. 2008ರಲ್ಲಿ ಈ ಸಮಿತಿ ವರದಿ ಸಲ್ಲಿಸಿದೆ. ಇದರಲ್ಲಿ 2 ಮಾರ್ಗೋಪಾಯ ಸೂಚಿಸಿದ್ದು, ಐದು ಸದಸ್ಯರ ಸಂವಿಧಾನ ಪೀಠ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಏಳು ಸದಸ್ಯರ ಸಂವಿಧಾನ ಪೀಠ ಪರಿಶೀಲಿಸಿ ಜಾರಿಗೆ ಪೂರಕವಾಗಿ ಆದೇಶ ಬಂದರೆ ಜಾರಿ ಮಾಡಬಹುದು. ಇನ್ನು ಪರಿಚ್ಛೆಧ 341ಗೆ ತಿದ್ದುಪಡಿ ತಂದು ರಾಜ್ಯಪಾಲರ ಅನುಮೋದನೆ ಪಡೆದರೆ ಜಾರಿ ಮಾಡಬಹುದು. ಇದನ್ನು ಮಾಡಲು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ಯಾವುದೇ ಉದ್ದೇಶವಿಲ್ಲ. ಇಡಬ್ಲ್ಯೂಎಸ್ ಮೀಸಲಾತಿ ಹೆಚ್ಚಿಸುವಾಗ 2019ರ ಜನವರಿ7ರಂದು ಲೋಕಸಭೆ, 8ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಿ ಹಾಗೂ 12ರಲ್ಲಿ ರಾಷ್ಟ್ರಪತಿಗಳ ಅನುಮೋದನೆ ಪಡೆಯುತ್ತದೆ. ಇಷ್ಟೇ ಆಸಕ್ತಿ ಪರಿಶಿಷ್ಟರ ಒಳಮೀಸಲಾತಿ ನೀಡುವ ವಿಚಾರದಲ್ಲಿ ಇದ್ದರೆ, ಅದನ್ನು ಸಾಬೀತುಪಡಿಸಲಿ. ಈ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡುವ ಯಾವುದೇ ಆಸಕ್ತಿ ಇಲ್ಲವಾಗಿದೆ.
ಇಡಬ್ಲ್ಯೂಸಿ ಮೀಸಲಾತಿ ವಿಚಾರದಲ್ಲಿ ಯಾರೂ ಮನವಿ ಸಲ್ಲಿಸದಿದ್ದರೂ ನಾಗಪುರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಇಷ್ಟು ಆಸಕ್ತಿಯಿಂದ ಜಾರಿಗೆ ತಂದರು. ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ಪ್ರಕಟವಾದ ನಂತರ ಸಂಸತ್ತು ಎಷ್ಟು ಚುರುಕಾಗಿ ಅವರ ಸದಸ್ಯತ್ವವನ್ನು ರದ್ದು ಮಾಡಿತ್ತೊ ಅದೇ ಆಸಕ್ತಿಯನ್ನು ಪರಿಶಿಷ್ಟರ ಒಳ ಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ತೋರಿಸಲಿ. ಇವರು ಕೇವಲ ಚುನಾವಣೆ ಸಮಯದಲ್ಲಿ ಪರಿಶಿಷ್ಟರ ಸೆಳೆಯುವ ಪ್ರಯತ್ನವಾಗಿದೆ.
ಈ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ವರ್ಗದವರ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸುತ್ತಾರೆ. ಇದನ್ನು ಘೋಷಣೆ ಮಾಡಿ ಮೂರು ತಿಂಗಳಾದರೂ ಅದರ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಲ್ಲ. ಆಮೂಲಕ ಈ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲು ಮುಂದಾಗಿಲ್ಲ. ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ಹೋರಾಟಕ್ಕೆ ಮುಂದಾದ ನಂತರ ನಿನ್ನೆ ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾರೆ. ಸದ್ಯ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಬಾರದು ಎಂದು ಆದೇಶದಲ್ಲಿದೆ. ಇಡಬ್ಲ್ಯೂಎಸ್ ನಲ್ಲಿ ಮೇಲ್ಜಾತಿಗಳಿಗೆ ಶೇ.10-ರಷ್ಟು ನೀಡಿದ್ದಾರೆ. ಆಮೂಲಕ ಶೇ.49 ಹಾಗೂ ಈ ಶೇ.10 ಸೇರಿ 59% ಆಗಿದೆ. ಈಗ ಪರಿಶಿಷ್ಟರಿಗೆ ಹೆಚ್ಚು ಮಾಡಿದರೆ ಇದರ ಪ್ರಮಾಣ ಶೇ.64ಕ್ಕೆ ಏರಿಕೆಯಾಗಲಿದೆ. ಆದರೆ ಇದಕ್ಕೆ ಕಾನೂನಿನ ಒಪ್ಪಿಗೆ ಇರುವುದಿಲ್ಲ. ಹೀಗಾಗಿ ಈ ಮೀಸಲಾತಿ ಹೆಚ್ಚಳ ಕಾರ್ಯಸಾಧುವಾಗುವುದಿಲ್ಲ.
ಇನ್ನು ಸದಾಶಿವ ಆಯೋಗ ವರದಿಯನ್ನು ತರಾತುರಿಯಲ್ಲಿ ಜಾರಿಗೆ ನಿನ್ನೆ ಪ್ರಯತ್ನಿಸಿದ್ದಾರೆ. ಸದಾಶಿವ ಆಯೋಗ ಶೇ.15ರಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡಲು ಹೇಳಿತ್ತು. ಇವರು ಶೇ.17ರಲ್ಲಿ ಹಂಚಿಕೆ ಮಾಡಲು ಶಿಫಾರಸ್ಸು ಮಾಡಿದ್ದಾರೆ. ಅಂದರೆ ನಮ್ಮ ಬಳಿ 15 ಬಿಸ್ಕೆಟ್ ಗಳಿದ್ದು, ಆದರೆ ಬಿಜೆಪಿಯವರು 17 ಬಿಸ್ಕೆಟ್ ಇರುವಂತೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಇನ್ನು ಉಳಿದ ಶೇ.2ರಷ್ಟು ಮೀಸಲಾತಿಯನ್ನು ಎಲ್ಲಿಂದ ತರುತ್ತಾರೆ. ಈ ಮೂಲಕ ಇವರು ಪರಿಶಿಷ್ಟರನ್ನು ವ್ಯಂಗ್ಯ ಮಾಡುವ ಪ್ರಯತ್ನ ಮಾಡಿದ್ದಾರೆ. ಭೂಮಿ ಉತ್ತುವ ಮೊದಲೆ ಬೆಳೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಅವರ ಉದ್ದೇಶ ಇದು ಜಾರಿಯಾಗುವುದಿಲ್ಲ ಎಂದು ಗೊತ್ತಿದ್ದರೂ, ಪರಿಶಿಷ್ಟರನ್ನು ವಂಚಿಸಿ ಮತ ಬ್ಯಾಂಕಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ.
ಇವರಿಗೆ ಮೀಸಲಾತಿ ಜಾರಿ ಮಾಡುವ ಆಸಕ್ತಿ ಇದ್ದರೆ ನಾಲ್ಕು ವರ್ಷಗಳ ಕಾಲ ಸುಮ್ಮನೆ ಕೂರುತ್ತಿರಲಿಲ್ಲ. ಈಗ ಚುನಾವಣೆ ಸಮಯದಲ್ಲಿ ಕುತಂತ್ರ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದವರು ಬಿಜೆಪಿಯನ್ನು ನಂಬಬಾರದು ಎಂದು ಮನವಿ ಮಾಡುತ್ತೇನೆ.
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಸಂಚಿವ ಸಂಪುಟದ ತೀರ್ಮಾನ ಅವೈಜ್ಞಾನಿಕವಾಗಿದ್ದು, ಕಳೆದ 30 ವರ್ಷಗಳಿಂದ ಸದಾಶಿವ ಆಯೋಗ ನೀಡಿರುವ ವರದಿ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಸದಾಶಿವ ಆಯೋಗ ನೀಡಿರುವ ವರದಿಯಲ್ಲಿ 6,3,5,1ರಂತೆ ಒಳ ಮೀಸಲಾತಿ ನೀಡಬೇಕಿತ್ತು. ಇನ್ನು 2020ರಲ್ಲಿ ನ್ಯಾಯಾಲಯದ ತೀರ್ಪಿನಲ್ಲಿ ರಾಜ್ಯ ಮಟ್ಟಿಗಿನ ಒಳ ಮೀಸಲಾತಿ ರಾಜ್ಯ ಸರ್ಕಾರದ ಮಟ್ಟದಲ್ಲೇ ಜಾರಿ ಮಾಡಬಹುದು ಎಂದು ಹೇಳಿದೆ. ಆದರೆ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇಲ್ಲದಿರುವ ಪರಿಶಿಷ್ಟ ಜಾತಿಯವರಿಗೆ ಶೇ.17ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗ ಅಸ್ತಿತ್ವದಲ್ಲಿ ಇರುವುದು ಕೇವಲ ಶೇ.15ರಷ್ಟು ಮೀಸಲಾತಿ ಮಾತ್ರ. ಅಷ್ಟರೊಳಗೆ ಒಳ ಮೀಸಲಾತಿ ಜಾರಿಗೆ ಪ್ರಸ್ತಾವನೆ ನೀಡಿದ್ದರೆ ಇದನ್ನು ಜಾರಿ ಮಾಡಬಹುದಿತ್ತು. ಆದರೆ ಅಸ್ತಿತ್ವದಲ್ಲಿ ಇಲ್ಲದ ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡಲು ಮುಂದಾಗಿದ್ದಾರೆ.