2023 ವಿಧಾನಸಭೆ ಚುನಾವಣೆಗೆ ಅಡಿಪಾಯ; ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿಗೆ ಹೈಕಮಾಂಡ್ ಮೆಗಾ ಪ್ಲಾನ್

ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆ ವಿಚಾರವೀಗ ಭಾರೀ ಚರ್ಚೆಯಾಗುತ್ತಿದೆ. ವಿರೇಶೈವ ಲಿಂಗಾಯತ ಸಮುದಾಯದ ನಾಯಕರು ಯಡಿಯೂರಪ್ಪ ಬದಲಾವಣೆ ಮಾಡಿದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದರೂ ಹೈಕಮಾಂಡ್ ಕ್ಯಾರೇ ಎನ್ನುತ್ತಿಲ್ಲವಂತೆ. ಬದಲಿಗೆ ಕರ್ನಾಟಕ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಬದಲಾವಣೆ ಮಾಡಲು ಮುಂದಾಗಿದೆ. 2023 ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಕೇವಲ ಸರ್ಕಾರದಲ್ಲಿ ಮಾತ್ರವಲ್ಲದೇ ಪಕ್ಷದಲ್ಲೂ ಮೇಜರ್ ಸರ್ಜರಿಗೆ ಅಗತ್ಯ ತಯಾರಿ ನಡೆಸಿಕೊಂಡಿದೆ ಎನ್ನುತ್ತಿವೆ ಉನ್ನತ ಮೂಲಗಳು.

ಬಿಜೆಪಿ ಹೈಕಮಾಂಡ್ ನಿರೀಕ್ಷೆಯಂತೆಯೇ ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಸಿಎಂ ಗದ್ದುಗೆಯಿಂದ ಬಿಎಸ್ ಯಡಿಯೂರಪ್ಪರನ್ನು ಕೆಳಗಿಳಿಸಲಿದ್ದಾರೆ. ಬಿ.ಎಸ್ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗುವ ಸಿಎಂ ಸ್ಥಾನಕ್ಕೆ ಹೊಸ ನಾಯಕನನ್ನು ತಂದು ಕೂರಿಸಲು ಹೈಕಮಾಂಡ್ ಸರ್ಕಸ್ ಮಾಡುತ್ತಿದೆ. ಹೀಗಿರುವಾಗ ಸಿಎಂ ಸ್ಥಾನಕ್ಕಾಗಿ ಕಮಲ ಪಾಳಯದಲ್ಲಿ ತೆರೆಮರೆಯ ಸಿದ್ಧತೆ ಜೋರಾಗಿದೆ. ತಮ್ಮನ್ನು ಸಿಎಂ ಮಾಡುವಂತೆ ಹಲವರು ಹೈಕಮಾಂಡ್ ಬೆನ್ನ ಹಿಂದೆ ಬಿದ್ದಿದ್ದಾರೆ. ಇದರ ನಡುವೆಯೇ ಸರ್ಕಾರ ಮಾತ್ರವಲ್ಲ, ಪಕ್ಷದಲ್ಲೂ ಭಾರೀ ಬದಲಾವಣೆ ಮಾಡಲು ಹೈಕಮಾಂಡ್ ಪ್ಲಾನ್ ರೂಪಿಸಿದೆ.

2023ರಲ್ಲಿ ಎದುರಾಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಭಾರೀ ಸರ್ಕಸ್ ಮಾಡಬೇಕಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆ, ಕರೋನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಸೇರಿದಂತೆ ಹಲವು ವಿಚಾರಗಳ ಕಾರಣಕ್ಕೆ ಬಿಜೆಪಿ ಜನ ವೋಟ್ ಮಾಡುವುದು ಕಷ್ಟಸಾಧ್ಯ. ಸಿಎಂ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ 2023ರ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಪಕ್ಷ ಸಂಘಟನೆ ಕೂಡ ಮುಖ್ಯ ಎಂಬುದು ಹೈಕಮಾಂಡ್ ಆಲೋಚನೆ.

ಸದ್ಯ ಈ ನಿಟ್ಟಿನಲ್ಲಿ ಒಂದಷ್ಟು ಕಾರ್ಯತಂತ್ರಗಳನ್ನ ರೂಪಿಸಿರುವ ಹೈಕಮಾಂಡ್ ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿ ಮಾಡಲಿದೆ. ಅದಕ್ಕೆ ಬೇಕಾಗಿರುವ ಅಗತ್ಯ ತಯಾರಿ ನಡೆಸಿಕೊಂಡಿದೆ. ಸಿಎಂ ಬದಲಾವಣೆ ನಡುವೆ ಪರ್ಯಾಯ ತಂತ್ರ ರೂಪಿಸಿರುವ ಹೈಕಮಾಂಡ್, ಹೊಸ ನಾಯಕರ ಹುಡುಕಾಟದಲ್ಲಿದೆ. ಹೀಗಾಗಿ ಪಕ್ಷದ ಪ್ರಮುಖ ಬದಲಾಣೆ ಮಾಡುವ; ಸಂಘಟನಾತ್ಮಕ ಹುದ್ದೆಗಳಿಗೆ ಮೇಜರ್ ಸರ್ಜರಿ ಮಾಡುವ ಅಗತ್ಯ ಇದೆ. ಸಂಘಟನೆಯನ್ನ ಬಲಿಷ್ಠಗೊಳಿಸುವ ಉದ್ದೇಶದಿಂದ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಮುಂದಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಪಕ್ಷದಲ್ಲೂ ಬದಲಾವಣೆ ಬಿರುಗಾಳಿ ಬೀಸುತ್ತಿದೆ. ಪಕ್ಷದಲ್ಲಿ ಯಾವ ರೀತಿ ಸಮತೋಲನತ ಇರಬೇಕು ಎಂಬ ನಿಟ್ಟಿನಲ್ಲಿ ಸೂತ್ರವೊಂದು ಸಿದ್ಧವಾಗಿದೆ. ಇದಕ್ಕಾಗಿ ಪ್ರಾಂತ್ಯ ಮತ್ತು ಸಮುದಾಯವಾರು ಪ್ರಾತಿನಿಧ್ಯ ಫಾರ್ಮುಲಾ ಜಾರಿಗೊಳಿಸಲು ಮುಂದಾಗಿದೆ ಹೈಕಮಾಂಡ್.

ಸಿಎಂ ಬದಲಾವಣೆಯಾದ ಕೂಡಲೇ ಪ್ರಾಂತ್ಯ ಮತ್ತು ಸಮುದಾಯವಾರು ಪ್ರಾತಿನಿಧ್ಯ ಫಾರ್ಮುಲಾ ಜಾರಿ ಮಾಡೋದು ಹೈಕಮಾಂಡ್ ಪ್ಲಾನ್. ಹೇಗಾದರೂ ಮಾಡಿ ರಾಜ್ಯದ ಪ್ರಮುಖ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತರನ್ನು ಬ್ಯಾಲೆನ್ಸ್ ಮಾಡಬೇಕು ಎಂಬ ಲೆಕ್ಕಚಾರದಲ್ಲಿ ಈ ಪ್ಲಾನ್ ಮಾಡಲಾಗಿದೆ. ಇದಕ್ಕಾಗಿ ಬಿಜೆಪಿ ವರಿಷ್ಠರು, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರ ಓಲೈಕೆಗೆ ತಂತ್ರ ಹೆಣೆದಿದ್ದಾರೆ.

ಎರಡು ಸಮುದಾಯಗಳ ನಾಯಕರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸ್ಥಾನಮಾನ ನೀಡುವ ಸಾಧ್ಯತೆ ಇದೆ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕರುಗಳಾದ ಅಶ್ವತ್ಥ್ ನಾರಾಯಣ್, ಆರ್. ಅಶೋಕ್, ಸಿ.ಟಿ ರವಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ಆದ್ಯತೆ ನೀಡುವ ಲೆಕ್ಕಚಾರ ಇದೆ. ಹಾಗೆಯೇ ಲಿಂಗಾಯುತ ಸಮುದಾಯದ ಅರವಿಂದ್ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿಗೂ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಲಿದ್ದಾರಂತೆ.

ಸರ್ಕಾರದಲ್ಲಿ ಉನ್ನತ ಸ್ಥಾನ ಸಿಗದವರಿಗೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗುವುದು. ಇದಕ್ಕಾಗಿ ರಾಜ್ಯ ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಕೆಲವರಿಗೆ ಕೋಕ್ ಕೊಡಬೇಕಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಹೆಸರಿನಲ್ಲಿ ಚುನಾವಣೆ ಗೆಲ್ಲಬೇಕೆ ಹೊರತು ಯಡಿಯೂರಪ್ಪ ವರ್ಚಸ್ಸಿನಿಂದಲ್ಲ. ಇದಕ್ಕೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯ ಎಂಬುದು ಹೈಕಮಾಂಡ್ ಆಲೋಚನೆ.

Please follow and like us:

Related articles

Share article

Stay connected

Latest articles

Please follow and like us: