ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಂದ ಮೇಲೆ ಅನೇಕ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇದರಲ್ಲಿ ಅನೇಕ ಸಾವು-ನೋವುಗಳಾಗಿವೆ ಆರೋಪಿಸಿ ಮೇ 5 ರಂದು ಬಿಜೆಪಿ ದೇಶಾದ್ಯಂತ ಧರಣಿ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರದ ಮಾಹಿತಿ ಪಡೆದುಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮೇ 4 ರಿಂದ ಎರಡು ದಿನಗಳಕಾಲ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 2 ರಂದು ಚುನಾವಣಾ ಫಲಿತಾಂಶ ಬಂದ 24 ಗಂಟೆಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಹಾಗು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೊತೆಗೆ ಪಕ್ಷದ ಅನೇಕ ಕಾರ್ಯಕರ್ತರ ಮನೆ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ.
ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋಲು ಮತ್ತು ರಾಜ್ಯದಲ್ಲಿ ಟಿಎಂಸಿ ಗೆಲುವಿನ ಸಂಭ್ರಮವನ್ನು ಟಿಎಂಸಿ ಗೂಂಡಾಗಳು ಹಿಂಸಾಚಾರ ಹಾಗೂ ರಕ್ತದೋಕುಳಿಯಲ್ಲಿ ವಿಜಯೋತ್ಸವ ಆಚರಿಸುವುದು ಖಂಡನೀಯ ಎಂದು ಬಿಜೆಪಿ ಹೇಳಿದೆ.

ಚುನಾವಣಾ ಫಲಿತಾಂಶ ಪ್ರಕಟಣೆಯ ನಂತರ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ವ್ಯಾಪಕ ಹಿಂಸಾಚಾರದ ವಿರುದ್ಧ ಬಿಜೆಪಿ ಪಕ್ಷ ಮೇ 5 ರಂದು ರಾಷ್ಟ್ರವ್ಯಾಪಿ ಧರಣಿ ನಡೆಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೋವಿಡ್ ಮಾರ್ಗ ಸೂಚಿಸಿ ಅನ್ವಯ ಈ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದೆ.