ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಹಿಂದುತ್ವವಾದಿ ಬಿಜೆಪಿಯೊಂದಿಗೆ ಮೈತ್ರಿಯಾಗಿರುವ ನಿತೀಶ್ ಕುಮಾರ್ ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬೋಚಹಾನ್ ಉಪಚುನಾವಣೆಯಲ್ಲಿ ಆರ್‌ಜೆಡಿ ಜಯಗಳಿಸಿದ ಕೆಲವು ದಿನಗಳ ನಂತರ, ತೇಜಸ್ವಿ ಯಾದವ್ ಅವರು ಈ ಇಫ್ತಾರ್ ಕೂಟವನ್ನು ಶಕ್ತಿ ಪ್ರದರ್ಶನವಾಗಿ ಆಯೋಜಿಸಿದ್ದಾರೆ ಹೇಳಲಾಗಿದೆ.
ಇಫ್ತಾರ್ ಕೂಟಕ್ಕಾಗಿ ಆರ್‌ಜೆಡಿ ನಾಯಕನ ಪಾಟ್ನಾ ಮನೆಗೆ ಬಂದ ಇತರರಲ್ಲಿ ಬಿಜೆಪಿ ನಾಯಕರಾದ ಅವಧೇಶ್ ನಾರಾಯಣ ಸಿಂಗ್ ಮತ್ತು ಸೈಯದ್ ಶಾನವಾಜ್ ಹುಸೇನ್, ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ತೇಜಸ್ವಿ ಯಾದವ್ ಅವರ ಒಡಹುಟ್ಟಿದ ತೇಜ್ ಪ್ರತಾಪ್ ಯಾದವ್ ಮತ್ತು ಮಿಸಾ ಭಾರತಿ ಮತ್ತು ಅವರ ತಾಯಿ ರಾಬ್ರಿ ದೇವಿ ಕೂಡಾ ಸೇರಿದ್ದಾರೆ.
ಐದು ವರ್ಷಗಳ ನಂತರ ತೇಜಸ್ವಿ ಯಾದವ್ ಅವರ ಮನೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ನಿತೀಶ್ ಕುಮಾರ್ ಭಾಗವಹಿಸಿದ್ದರು. ಕೊನೆಯದಾಗಿ 2017 ರಲ್ಲಿ ಬಿಹಾರದ ಮಹಾಮೈತ್ರಿಕೂಟವನ್ನು ತ್ಯಜಿಸಿದ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದ್ದು. ಆಗ ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಕುಟುಂಬದ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿತ್ತು.
“ನಾನು ಮತ್ತು ಸುಶೀಲ್ ಮೋದಿ ಜಿ ಇಫ್ತಾರ್ ಆಯೋಜಿಸಿದ್ದೆವು, ಆಗ ನಿತೀಶ್ ಕುಮಾರ್ ಕೂಡ ಅಲ್ಲಿಗೆ ಬಂದಿದ್ದರು. ಇದೀಗ ಇಲ್ಲಿ ತೇಜಸ್ವಿ ಯಾದವ್ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ನಮಗೆ ಆಹ್ವಾನವಿದೆ, ಆದ್ದರಿಂದ ನಾವು ಬಂದಿದ್ದೇವೆ, ಇದನ್ನು ಯಾವುದೇ ರಾಜಕೀಯ ವಿಷಯ ಮಾಡುವ ಅಗತ್ಯವಿಲ್ಲ” ಎಂದು ಸೈಯದ್ ಶಾನವಾಜ್ ಹುಸೇನ್ ಹೇಳಿದ್ದಾರೆ. .
ನಿತೀಶ್ ಕುಮಾರ್ ಅವರನ್ನು ದೆಹಲಿಗೆ ಕಳುಹಿಸುವ ಮತ್ತು ಬಿಹಾರಕ್ಕೆ ಮತ್ತೊಬ್ಬ ಮುಖ್ಯಮಂತ್ರಿಯನ್ನು ಪಡೆಯುವ ಬಿಜೆಪಿಯ ಉದ್ದೇಶದ ಬಗ್ಗೆ ಇತ್ತೀಚಿಗೆ ಎದ್ದ ವದಂತಿಗಳ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಮಾಜಿ ಮಹಾಮೈತ್ರಿಕೂಟದ ಪಾಲುದಾರರ ಆತಿಥ್ಯ ವಹಿಸಿರುವುದು ಗಮನಾರ್ಹವಾಗಿದೆ. ನಿತೀಶ್ ಕುಮಾರ್ ನವೆಂಬರ್ 2020 ರಲ್ಲಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾದರು, ಅವರ ಜೆಡಿಯು 43 ಸ್ಥಾನಗಳನ್ನು ಗೆಲ್ಲುವ ಮೂಲಕ ನೀರಸ ಪ್ರದರ್ಶನ ನೀಡಿದ ಹೊರತಾಗಿಯೂ ಬಿಜೆಪಿಯ 74 ಸ್ಥಾನಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು.
ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಬಿಜೆಪಿಯ ಅಭ್ಯರ್ಥಿ ಮುಖ್ಯಮಂತ್ರಿಯಾಗಬೇಕು ಎಂದು ಕೆಲವು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ, ರಾಷ್ಟ್ರಪತಿ ಚುನಾವಣೆಗೆ ಅಥವಾ ರಾಜ್ಯಸಭೆಗೆ ನಿತೀಶ್ ಕುಮಾರ್ ರನ್ನು ಕಳುಹಿಸುವ ಉತ್ಸಾಹದಲ್ಲಿ ಬಿಜೆಪಿ ಇದೆ ಎಂಬ ಊಹಾಪೋಹಗಳು ಬಿಹಾರ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬಂದಿದೆ.