ರಾಜ್ಯ ರಾಜಕೀಯದಲ್ಲೀಗ ಬಿಟ್‌ಕಾಯಿನ್ ಬಿರುಗಾಳಿ ಎದ್ದಿದೆ. ಹ್ಯಾಕರ್ ಶ್ರೀಕಿಯಿಂದ ಶುರುವಾದ ಈ ಸುಂಟರಗಾಳಿ ಕ್ಷಣಕ್ಷಣಕ್ಕೂ ರೋಚಕ ಟ್ವಿಸ್ಟ್ ಮತ್ತು ಟರ್ನ್‌ಗಳನ್ನ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಸದ್ದು ಮಾಡಿದ್ದ ಹ್ಯಾಕರ್ ಶ್ರೀಕೃಷ್ಣನ ಲೀಲೆಗಳು ಸದ್ಯ ಪ್ರಧಾನಿ ಮೋದಿವರೆಗೂ ತಲುಪಿವೆ. ಇದುವೇ ಈಗ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಕ್ರಿಪ್ಟೋ ಕರೆನ್ಸಿ ಹಗರಣದಲ್ಲಿ ರಾಜಕಾರಣಿಗಳ ಕೈಚಳಕವಿರೋ ಬಗ್ಗೆ ಮಾಧ್ಯಮಗಳು ರಿವೀಲ್ ಮಾಡಿದ್ದವು. ಜೊತೆಗೆ ಬಿಟ್‌ಕಾಯಿನ್ ಬಗೆಗಿನ ಮಾಹಿತಿಗಳನ್ನ ಒಂದೊಂದಾಗಿ ಬಯಲು ಮಾಡಿತ್ತು. ಇದೀಗ ಬಿಟ್ ಕಾಯಿನ್ ಬಯಲಾಟದಲ್ಲಿ ಹ್ಯಾಕರ್ ಶ್ರೀಕೃಷ್ಣನ ಲೀಲೆಗಳು ದಿನದಿನಕ್ಕೂ ಹೊಸ ಅವತಾರಗಳಾಗಿ ಬದಲಾಗ್ತಿವೆ. ಅಲ್ಲದೇ ಖತರ್ನಾಕ್ ಶ್ರೀಕೃಷ್ಣನ ಕಳ್ಳಾಟಗಳು ದೇಶದ ಪ್ರಧಾನಿವರೆಗೂ ತಲುಪಿವೆ. ಹ್ಯಾಕರ್ ಶ್ರೀಕಿಯ ಬಿಟ್ ಕಾಯಿನ್ ರಂಗಿನಾಟದ ಬಗ್ಗೆ ವಿಷಲ್ ಬ್ಲೋವರ್ ಕಾಯ್ದೆಯಡಿ ಪ್ರಧಾನಿ ಮೋದಿಗೆ ದೂರನ್ನ ನೀಡಲಾಗಿದೆ. ಇದೇ ದೂರಿನ ವಿವರಗಳನ್ನ ಕಾಂಗ್ರೆಸ್ನ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಿದ್ದಾರೆ.
ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಗ್ಗೆ ಖುದ್ದು ಪ್ರಧಾನಿ ಮೋದಿಗೆ ದೂರನ್ನ ನೀಡಲಾಗಿದೆ. ಶ್ರೀಕಿ ತನ್ನ ಹ್ಯಾಕಿಂಗ್ ಕೈಚಳಕ ತೋರಿಸಿದ್ದರ ಬಗ್ಗೆ ದೂರನ್ನ ಕೊಡಲಾಗಿದೆ. ಇವನು ಮಾಡಿರೋ ಅಂತರಾಷ್ಟ್ರೀಯ ದೋಖಾ, ಬಿಟ್ಕಾಯಿನ್ ಹ್ಯಾಕಿಂಗ್ ಬಗ್ಗೆ ಸವಿವರವಾಗಿ ದೂರುದಾರರು ಉಲ್ಲೇಖಿಸಿದ್ದಾರೆ. ಅಲ್ಲದೇ ದೂರಿನಲ್ಲಿ ಕರ್ನಾಟಕದ ರಾಜಕಾರಣಿಗಳ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಇನ್ನು ದೂರಿನ ಪ್ರತಿಯನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್, ಪ್ರಧಾನಿಯ ರಾಜಕೀಯ ಕಾರ್ಯದರ್ಶಿ, ಇ.ಡಿ ಮತ್ತು ಇಂಟೆಲಿಜೆನ್ಸ್‌ಗೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಿರೋ ದೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಹೆಸರನ್ನ ಉಲ್ಲೇಖ ಮಾಡಲಾಗಿದೆ. ಜೊತೆಗೆ ಅವರು ಶ್ರೀಕಿ ಜೊತೆ ಸೇರಿ ಮಾಡಿರೋ ಹ್ಯಾಕಿಂಗ್ ದೋಖಾದ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಪ್ರಧಾನಿಗೆ ನೀಡಿರೋ ದೂರಿನಲ್ಲಿ ರಾಜಕಾರಣಿಗಳ ಹೆಸರು ಕೂಡಾ ಉಲ್ಲೇಖವಾಗಿದೆ. ಕಾಂಗ್ರೆಸ್ ನಾಯಕರೊಬ್ಬರ ಪುತ್ರನ ಜೊತೆ ಶ್ರೀಕೃಷ್ಣನ ಸಂಪರ್ಕವಿರೋದನ್ನ ದೂರಿನಲ್ಲಿ ರಿವೀಲ್ ಮಾಡಲಾಗಿದೆ. ಅಲ್ಲದೇ ಕೈ ನಾಯಕನ ಪುತ್ರ ಬಿಟ್ ಕಾಯಿನ್ ಮೂಲಕ ₹120 ಕೋಟಿ ರೂಪಾಯಿ ಹವಾಲಾ ಹಣ ಪಡೆದಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ, ಈ ಪ್ರಕರಣದ ತನಿಖೆಯಿಂದ ಕೈ ನಾಯಕನ ಪುತ್ರನನ್ನ ಪೊಲೀಸರು ಕೈಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದಷ್ಟೇ ಅಲ್ಲ ಬಿಜೆಪಿಯ ಹಿರಿಯ ನಾಯಕರೊಬ್ಬರ ಪುತ್ರನ ವಿರುದ್ಧವೂ ಬಿಟ್ ಕಾಯಿನ್ ಆರೋಪ ಕೇಳಿಬಂದಿದೆ. ಶ್ರೀಕಿ ಜೊತೆ ಸೇರಿ ಸಿಂಪಲ್ ಪ್ರೋಸಸ್ ಮೂಲಕ ತಿಂಗಳಿಗೆ ₹160 ಕೋಟಿ ರೂಪಾಯಿ ಸಂಪಾದನೆ ಮಾಡಿರೋ ಆರೋಪವನ್ನ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಶ್ರೀಕಿಯನ್ನ ನ್ಯಾಯಾಂಗ ಬಂಧನದಿಂದ ಬಿಜೆಪಿ ನಾಯಕರೇ ಬಿಡಿಸಿದ್ದಾರೆ ಅನ್ನೋದು ದೂರುದಾರರ ಆರೋಪವಾಗಿದೆ.
ಇನ್ನು ಪ್ರದಾನಿಗೆ ನೀಡಿರೋ ದೂರಿನಲ್ಲಿ ಶ್ರೀಕಿ ಜೊತೆ ಮಾಜಿ ಐಪಿಎಸ್ ಅಧಿಕಾರಿಯ ಪುತ್ರನೂ ಪಾಲುದಾರನಾಗಿದ್ದ ಎಂಬ ಆರೋಪ ಉಲ್ಲೇಖಿಸಲಾಗಿದೆ. ಅಲ್ಲದೇ ಸಿಸಿಬಿ ಅಧಿಕಾರಿಗಳು ವಂಚನೆಯ ಹಣದಲ್ಲಿ ಕೊಳ್ಳೆ ಹೊಡೆದಿರೋದನ್ನೂ ಪ್ರಧಾನಿಯ ಗಮನಕ್ಕೆ ತರಲಾಗಿದೆ.
ಸಿಸಿಬಿ ಅಧಿಕಾರಿಗಳೂ ಶಾಮೀಲು?
ಮೊದಲಿಗೆ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಬಂಧನವಾಗಿತ್ತು. ಈ ವೇಳೆ ಪೊಲೀಸರು ಕಸ್ಟಡಿಗೆ ಪಡೆದಾಗ ಶ್ರೀಕಿ ಖಾತೆಯಲ್ಲಿ 19 ಕೋಟಿ ರೂಪಾಯಿ ಹಣವಿತ್ತು ಎನ್ನಲಾಗಿದೆ. ಆಗ ಈ ಹಣವನ್ನ ಎನ್ಜಿಒವೊಂದಕ್ಕೆ ವರ್ಗಾವಣೆ ಮಾಡುವಂತೆ ಪೊಲೀಸರು ಒತ್ತಡ ಹೇರಿದ್ರು ಎನ್ನಲಾಗಿದೆ. ಸಿಸಿಬಿಯ ಇಬ್ಬರು ಹಿರಿಯ ಅಧಿಕಾರಿಗಳ ಗಮನಕ್ಕೂ ಈ ವಿಷಯ ಇತ್ತು ಎಂದು ದೂರಲ್ಲಿ ಉಲ್ಲೇಖವಾಗಿದೆ.
ಒಟ್ಟಾರೆ, ಬಿಟ್ ಕಾಯಿನ್ ಬಲೆಯಲ್ಲಿ ಕಾಂಗ್ರೆಸ್, ಬಿಜೆಪಿಯ ನಾಯಕರು, ಅಧಿಕಾರಿಗಳು ಶಾಮೀಲಾಗಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದನ್ನೆಲ್ಲಾ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಾ? ಆರೋಪ ಹೊತ್ತವರ ವಿರುದ್ಧ ಕ್ರಮ ಕೈಗೊಳ್ಳುತ್ತಾ? ನೋಡಬೇಕು.