ಬೆಂಗಳೂರಿಗೆ ಹಿಡಿದಿರುವ ಕಟ್ಟಡ ಕುಸಿಯುವ ಗ್ರಹಣ ಮುಗಿಯುವ ಹಾಗೆ ಕಾಣುತ್ತಿಲ್ಲ. ಒಂದರ ಹಿಂದೆ ಒಂದು ಕಟ್ಟಡಗಳು ಕುಸಿಯುತ್ತಿವೆ. ಕೆಲವು ಕುಸಿಯುವ ಭೀತಿ ಹುಟ್ಟಿಸುತ್ತಿವೆ. ಈಗಾಗಲೇ ನಗರದಲ್ಲಿ ಸಾಲು ಸಾಲು ಕಟ್ಟಡಗಳು ಕುಸಿದಿವೆ. ಇದೀಗ ನಗರದ ಬಿನ್ನಿಪೇಟೆ ಬಳಿ ಇರುವ ಪೊಲೀಸ್ ವಸತಿ ಸಮುಚ್ಛಯ ಕೂಡ ವಾಲಿ, ಕುಸಿಯುವ ಭೀತಿ ಹುಟ್ಟಿಸಿದೆ. ಇದರ ನಡುವೆ ಬಿಬಿಎಂಪಿಯ ರ್ಯಾಪಿಡ್ ಬಿಲ್ಡಿಂಗ್ ಸರ್ವೇ ತ್ವರಿತವಾಗಿ ನಡೆಯುತ್ತಿದೆ.
ನಗರದಲ್ಲಿ ವಾಲಿದ ಏಳು ಮಹಡಿ ಕಟ್ಟಡ.. ಕುಸಿಯುವ ಆತಂಕ!
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಲು ಸಾಲಾಗಿ ಕಟ್ಟಡಗಳು ನೆಲಕ್ಕಚ್ಚುತ್ತಿದೆ. ವಿಲ್ಸನ್ ಗಾರ್ಡನ್ನಿಂದ ಆದಿಯಾಗಿ ಶುರುವಾದ ಕಟ್ಟಡ ಕುಸಿಯುವ ಗ್ರಹಣ ಇದೀಗ ನಗರದ ಪೊಲೀಸ್ ಕ್ವಾಟರ್ಸ್ ಗೆ ಬಂದು ನಿಂತಿದೆ. ನಗರದ ಬಿನ್ನಿಪೇಟೆ ಬಳಿ ಇರುವ ಪೊಲೀಸ್ ವಸತಿ ಸಮುಚ್ಛಯದ ಬಿ ಬ್ಲಾಕ್ ಕಟ್ಟಡ ತನ್ನ ಬಲಭಾಗಕ್ಕೆ ವಾಲಿಕೊಂಡಿದೆ. ಇದು ಈಗ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಮೂರು ವರ್ಷಗಳ ಹಿಂದೆ ರಾಜ್ಯ ಗೃಹ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಕ್ವಾಟರ್ಸ್ ಪೊಲೀಸ್ ಸಿಬ್ಬಂದಿಗಳಿಗೆ ಕೊಡಮಾಡಿರುವ ಮನೆಗಳು. ಇಲ್ಲಿ ಒಟ್ಟು 6 ಕಟ್ಟಡಗಳಿವೆ. ಒದೊಂದು ಕಟ್ಟಡದಲ್ಲಿ ಸುಮಾರು 36 ಮನೆಗಳಿವೆ. ಈ ಪೈಕಿ ಈ ಕ್ವಾಟರ್ಸ್ನ ಬಿ ಬ್ಲಾಕ್ ಬಲ ಭಾಗಕ್ಕೆ ವಾಲಿಕೊಂಡಿದೆ. ಸಿ ಬ್ಲಾಕ್ ಗೆ ಅಂಟಿಕೊಂಡೇ ಇರುವ ಈ ಬಿ ಬ್ಲಾಕ್ ಸಿ ಬ್ಲಾಕ್ ನಿಂದ ಸುಮಾರು ಆರುವರೆ ಇಂಚಿನಷ್ಟು ಬೇರ್ಪಟ್ಟು ಆತಂಕ ಹುಟ್ಟಿಸಿದೆ.
ಕೆರೆಗೆ ಮಣ್ಣು ತುಂಬಿ ಈ ಕ್ವಾಟರ್ಸ್ ನಿರ್ಮಾಣ!
ಸದ್ಯ ಪೊಲೀಸ್ ಕ್ವಾಟರ್ಸ್ ಇರುವ ಈ ಜಾಗ ಮೊದಲು ಕೆರೆಯಾಗಿತ್ತು. ಬಿಬಿಎಂಪಿ ಇದನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಿಕೊಂಡಿತ್ತು. ಆದರೆ ನಗರದ ಹೃದಯ ಭಾಗದಲ್ಲೇ ಪೊಲೀಸ್ ಇಲಾಖೆಗೆ ಒಂದು ಕ್ವಾಟರ್ಸ್ ಬೇಕು ಎನ್ನುವ ಕಾರಣಕ್ಕೆ ಕೆರೆ ಮಣ್ಣು ತುಂಬಿ ಈ ಕ್ವಾಟರ್ಸ್ ಅನ್ನು ನಿರ್ಮಾಣ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಿಸುವ ವೇಳೆಯಲ್ಲೇ ಈ ಕಟ್ಟಡದ ಬಗ್ಗೆ ಸಾಕಷ್ಟು ತಗಾದೆ ಕೇಳಿ ಬಂದಿತ್ತು. ಆದರ ನಡುವೆ ಗೃಹ ಇಲಾಖೆ ಈ ಕ್ವಾಟರ್ಸ್ ನಿರ್ಮಿಸಿತ್ತು. ಅದಾಗಿ ಈಗ ಕಟ್ಟಡದ ವಾಲಿ ಆತಂಕ ಮೂಡಿಸಿದೆ. ಇನ್ನು ಕಟ್ಟಡ ವಾಲಿರುವ ಸುದ್ದಿ ಗಾಳಿಯಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ ಮಾಧ್ಯಮಗಳ ಮೂಲಕ ಈಗ ಸುದ್ದಿ ತಿಳಿದಿದೆ. ಸ್ಥಳಕ್ಕೆ ಭೇಟಿ ಕೊಟ್ಟು ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದುಕೊಂಡು ಬೇಕಾಗಿರುವ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಒಂದು ವಾರದ ಹಿಂದೆ ಸ್ಥಳಕ್ಕೆ ಭೇಟಿಕೊಟ್ಟಿದ್ದ ಪೊಲೀಸ್ ಕಮಿಷ್ನರ್!
ಇನ್ನು ವಾಲಿರುವ ಸುದ್ದಿ ತಿಳಿದು ಒಂದು ವಾರದ ಹಿಂದೆಯೇ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಬಿರುಕಿನ ಬಗ್ಗೆ ಮಾಹಿತಿ ಪಡೆದುಕೊಂಡು ಈ ಕಟ್ಟಡದಲ್ಲಿರುವ 36 ಕುಟುಂಬಗಳನ್ನು ಬೇರಡೆಗೆ ಸ್ಥಳಾಂತರಿಸಿ ಕಟ್ಟಡದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ದಿನ ಏಳಾದರೂ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲಾಗಿಲ್ಲ. ವಾಲಿರುವ ಕಟ್ಟಡದಲ್ಲೇ 36 ಕುಟುಂಬಗಳು ಬದುಕು ಕಟ್ಟಿಕೊಳ್ಳುವ ಅನಿರ್ವಾಯಸ್ಥಿತಿಯಲ್ಲಿದ್ದಾರೆ.
ಇನ್ನೊಂದೆಡೆಯಿಂದ ಬಿಬಿಎಂಪಿಯಿಂದ ನಡೆಸುತ್ತಿರುವ ರ್ಯಾಪಿಡ್ ಬಿಲ್ಡಿಂಗ್ ಸರ್ವೇ ಕಾರ್ಯ ಕೂಡ ಬಿರುಸಿನಿಂದ ನಡೆಯುತ್ತಿದ್ದು ಈವರೆಗೆ ಒಟ್ಟು ನಗರದಲ್ಲಿ 581 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ ಎಂದು ಪಾಲಿಕೆ ಗೊತ್ತು ಮಾಡಿಕೊಂಡಿದೆ. ಒಟ್ಟಾರೆ ದಿನದಿಂದ ದಿನಕ್ಕೆ ನಗರದಲ್ಲಿ ಕಟ್ಟಡ ಕುಸಿಯುವ ಆತಂಕ ಇಮ್ಮಡಿಯಾಗುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳದೇ ಹೋದರೆ ಅಮಾಯಕ ಜೀವಗಳು ಬಲಿಯಾಗಲಿದೆ.