ಭಾರತ ಕೋವಿಡ್ ಲಸಿಕೆ ಅಭಿಯಾನದಲ್ಲಿ ನೂರು ಕೋಟಿ ಲಸಿಕೆ ನೀಡೋ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಿಳಿಸಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಸಾರ್ಥಕ ಭಾವದಿಂದಲೇ ದೇಶದ ನಿವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಶತಕೋಟಿ ಸಾಧನೆಗೆ ಸಾಕ್ಷಿಯಾಗಿದೆ. ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾದ ಪ್ರತಿಯೊಬ್ಬ ಭಾರತೀಯನಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಈ ಸಾಧನೆ ಪ್ರತಿ ಭಾರತೀಯನ ಸಫಲತೆ ಮತ್ತು ಇತಿಹಾಸದ ಹೊಸ ಅಧ್ಯಾಯ ರಚನೆಯಾಗಿದೆ ಎಂದು ಬಣ್ಣಿಸಿದ್ದಾರೆ.
ನೂರು ಕೋಟಿ ಲಸಿಕೆ ಡೋಸ್ ಇದು ಕೇವಲ ಒಂದು ಆಕೃತಿಯಲ್ಲ. ಇದು ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಇತಿಹಾಸದ ಹೊಸ ಅಧ್ಯಾಯದ ರಚನೆಯಾಗಿದೆ. ಹೊಸ ಭಾರತದ ಚಿತ್ರಣವಾಗಿದೆ ಎಂದಿದ್ದಾರೆ ಮೋದಿ.
ಭಾರತ ಹಲವು ಸವಾಲುಗಳನ್ನ ಮೆಟ್ಟಿ ನಿಂತು, ಅತಿ ಕಡಿಮೆ ಅವಧಿಯಲ್ಲೇ ಶತಕೋಟಿ ಲಸಿಕೆ ನೀಡಿದೆ. ಆದ್ರೆ, ಹಿಂದೊಂದು ದಿನ ಭಾರತದ ಲಸಿಕಾ ಅಭಿಯಾನದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ರು, ಅಂತವರಿಗೆಲ್ಲ ಈಗ ಉತ್ತರ ದೊರಕಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ನೂರು ವರ್ಷಗಳಲ್ಲಿಯೇ ದೊಡ್ಡ ಮಹಾಮಾರಿ ಎದುರಾಗಿತ್ತು. ಆಗ ಭಾರತದಲ್ಲಿ ಸವಾಲುಗಳು ಉದ್ಭವಿಸಿದ್ವು, ಭಾರತ ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳುತ್ತಾ? ಭಾರತಕ್ಕೆ ಬೇರೆ ದೇಶಗಳಿಂದ ಇಷ್ಟೊಂದು ಲಸಿಕೆಗಳನ್ನು ಖರೀದಿಸುವ ದುಡ್ಡು ಎಲ್ಲಿಂದ ಬರುತ್ತೆ? ಭಾರತಕ್ಕೆ ಲಸಿಕೆ ಯಾವಾಗ ಸಿಗುತ್ತೆ? ಭಾರತದ ಜನತೆಗೆ ಲಸಿಕೆ ಸಿಗುತ್ತೋ, ಸಿಗಲ್ವೊ? ಭಾರತಕ್ಕ ಇಷ್ಟೊಂದು ಜನರನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಇದೆಯಾ? ಮೊದಲೇ ಮಹಾಮರಿಗೆ ಕಂಗೆಟ್ಟಿದೆ ಎಂದು ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ವು, ಆದ್ರೆ, ಇದೀಗ ಶತಕೋಟಿ ಲಸಿಕೆ ನೀಡುವ ಮೂಲಕ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ತಿಳಿಸಿದರು ಮೋದಿ.
ವಿಶ್ವದಲ್ಲಿ ಭಾರತ 100 ಕೋಟಿ ಲಸಿಕೆ ನೀಡಿಕೆಯ ಕುರಿತು ಚರ್ಚೆ ಆಗುತ್ತಿದೆ. ಕೊರೊನಾ ಸಂದರ್ಭ ಲಸಿಕೆ ವಿಚಾರದಲ್ಲಿ ಭಾರತ ಬೇರೆ ದೇಶದ ಮೇಲೆ ಡಿಪೆಂಡ್ ಆಗುತ್ತೆ ಅಂತ ಭಾವಿಸಿದ್ರು. ಭಾರತದಲ್ಲಿ ಮಹಾಮಾರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಾ ಅಂತಿದ್ರು. ಹೀಗೆ ಅದೆಷ್ಟೋ ಪ್ರಶ್ನೆಗಳನ್ನ ಹಲವರು ಮಾಡಿರೋದು ಇದೆ. ಈಗ ಅದಕ್ಕೆಲ್ಲಾ ಉತ್ತರವಾಗಿ 100 ಕೋಟಿ ಲಸಿಕೆ ನೀಡಿದ್ದೇವೆ. ಅದೂ ಸಹ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನ ನೀಡಿದ್ದೇವೆ. ಇಂದು ಭಾರತ ಕೊರೊನಾದಿಂದ ಹೆಚ್ಚು ಸುರಕ್ಷಿತ ಅಂತ ಜಗತ್ತು ಒಪ್ಪಿದೆ. ಭಾರತದ ಈ ತಾಕತ್ತನ್ನ ಇವತ್ತು ಇಡೀ ಜಗತ್ತು ನೋಡುತ್ತಿದೆ. ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್‌ಗೆ ಭಾರತ ಇವತ್ತು ಅತೀ ದೊಡ್ಡ ಉದಾಹರಣೆಯಾಗಿದೆ ಎಂದರು.

ಇನ್ನು ಕೊರೊನಾ ಬಂದಾಗಿನಿಂದ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾಸ್ಕ್ ಧರಿಸಿದ್ದ ಫೋಟೋವೊಂದನ್ನ ಫ್ರೊಫೈಲ್ ಫೋಟೋವಾಗಿ ಹಾಕಿಕೊಂಡಿದ್ರು. ಆದ್ರೆ ಇದೀಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಪ್ರೊಫೈಲ್ ಫೋಟೋವನ್ನ ಬದಲಿಸಿದ್ದಾರೆ. 100 ಕೋಟಿ ಡೋಸ್ ಲಸಿಕೆ ನೀಡಿದ್ದಕ್ಕೆ ಅಭಿನಂದನೆಗಳು ಭಾರತ ಎಂದು ಹೇಳುವ ಫೋಟೋವೊಂದನ್ನು ಹಾಕಿಕೊಂಡಿದ್ದಾರೆ.
ಇನ್ನು ಈ ಸಾಧನೆಯನ್ನ ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಭಿನ್ನವಾಗಿ ಆಚರಿಸಿದೆ. ದೇಶದ 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣದ ದೀಪಾಲಂಕಾರ ಮಾಡಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಗೌರವ ಸೂಚಿಸಿದೆ. ಒಟ್ಟಾರೆ ಭಾರತ ಈ ಶತಕೋಟಿ ಸಾಧನೆಯನ್ನ ಸಾರ್ತಕತೆಯ ಭಾವದಿಂದ ಸಂಭ್ರಮಿಸುತ್ತಿದೆ.












