ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದಡಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣ ಸಂಬಂಧಿಸಿದಂತೆ ಮುರುಘಾಶ್ರೀ ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ.

ಮುರುಘಾಶ್ರೀ ಪರವಾಗಿ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು. ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಕೊನೆಯಲ್ಲಿ ನಿರ್ದೋಷಿ ಎಂದು ತೀರ್ಪು ನೀಡಿದೆ. ದಾವಣಗೆರೆಯ ವಿರಕ್ತ ಮಠದಿಂದ ಬಿಗಿ ಭದ್ರತೆಯ ನಡುವೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಮುರುಘಾಶ್ರೀ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕ ಬೆನ್ನಲ್ಲೇ ದಾವಣಗೆರೆಗೆ ವಾಪಸ್ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ ಏನು..?
2022ರ ಆಗಸ್ಟ್ 26ರಂದು ಮೈಸೂರಿನಲ್ಲಿ ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ವೇಳೆ ಮಠದ ವಾರ್ಡನ್ ಸೇರಿದಂತೆ ಐದು ಜನರ ವಿರುದ್ಧ ದೂರು ದಾಖಲಾಗಿತ್ತು. ಬಳಿಕ ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿತ್ತು. ಮೊದಲ ಪ್ರಕರಣದಲ್ಲಿ 2023ರ ನವೆಂಬರ್ 8ರಂದು ಹೈಕೋರ್ಟ್ನಿಂದ ಮುರುಘಾ ಶ್ರೀಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ನವೆಂಬರ್ 16ರಂದು ಬಿಡುಗಡೆಯಾದರು. ಮುರುಘಾ ಶ್ರೀ ವಿರುದ್ಧ ಇನ್ನೊಂದು ಪ್ರಕರಣ ಕೂಡ ದಾಖಲಾಗಿದ್ದು, ಸದ್ಯ ಆ ಪ್ರಕರಣದಲ್ಲಿ ಕೂಡ ಜಾಮೀನು ಪಡೆದುಕೊಂಡಿದ್ದಾರೆ.













