ನವದೆಹಲಿ : ಕ್ಯಾನ್ಸರ್ (Cancer) ಚಿಕಿತ್ಸೆಗೆ ಬಳಸುವ 1,364 ಔಷಧ ಸೂತ್ರೀಕರಣಗಳ (anti-cancer formulations) ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆಗಳು (MRP) ಇಂದಿನಿಂದ ಜಾರಿಗೆ ಬಂದಿದ್ದು, ಇದರಿಂದಾಗಿ ಗ್ರಾಹಕರಿಗೆ ವಾರ್ಷಿಕವಾಗಿ ಅಂದಾಜು ₹3,540.38 ಕೋಟಿ ರೂಪಾಯಿಗಳಷ್ಟು ಹಣ ಉಳಿತಾಯವಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಔಷಧ ಇಲಾಖೆಯ (Department of Pharmaceuticals) ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (National Pharmaceutical Pricing Authority – NPPA), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ 137 ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯ ಮೇಲಿನ ವ್ಯಾಪಾರ ಮಾರ್ಜಿನ್‌ಗೆ ಮಿತಿ ಹೇರಿದೆ.
ಶೇಕಡಾ 96ರವರೆಗೆ ಭಾರಿ ದರ ಕಡಿತ
ಕೇಂದ್ರ ರಾಸಾಯನಿಕ ಸಚಿವಾಲಯದ ಪ್ರಕಾರ, 85 ಔಷಧ ತಯಾರಿಕಾ ಕಂಪನಿಗಳು ಒಟ್ಟು 121 ಔಷಧಿಗಳಿಗೆ ಸಂಬಂಧಿಸಿದ 1,364 ಕ್ಯಾನ್ಸರ್ ಔಷಧ ಸೂತ್ರೀಕರಣಗಳ ಪರಿಷ್ಕೃತ ದರಗಳನ್ನು ವರದಿ ಮಾಡಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ 679 ಬ್ರ್ಯಾಂಡ್‌ಗಳ ಔಷಧಗಳ ಬೆಲೆಯಲ್ಲಿ ಶೇಕಡಾ 50ಕ್ಕೂ ಹೆಚ್ಚು ಇಳಿಕೆಯಾಗಿದ್ದು, ಗರಿಷ್ಠ ಬೆಲೆ ಕಡಿತವು ಶೇಕಡಾ 96.45ರವರೆಗೆ ದಾಖಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಹಣ ವಸೂಲಿಗೆ ಕಟ್ಟುನಿಟ್ಟಿನ ನಿಷೇಧ
ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ದರವನ್ನು ಯಾವುದೇ ಮೆಡಿಕಲ್ ಶಾಪ್ ಅಥವಾ ಆಸ್ಪತ್ರೆಯ ಔಷಧಾಲಯಗಳು ರೋಗಿಗಳಿಂದ ವಸೂಲಿ ಮಾಡುವಂತಿಲ್ಲ ಎಂದು ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಗ್ರಾಹಕರು ಔಷಧಗಳ ಪ್ಯಾಕ್‌ಗಳ ಮೇಲೆ ಮುದ್ರಿಸಲಾದ ಪರಿಷ್ಕೃತ ಎಂಆರ್‌ಪಿ, ‘ಫಾರ್ಮಾ ಸಹಿ ದಾಮ್’ ಮೊಬೈಲ್ ಅಪ್ಲಿಕೇಶನ್ ಅಥವಾ ಎನ್‌ಪಿಪಿಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಖರ ದರವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ದೂರು ಸಲ್ಲಿಕೆಗೆ ಟೋಲ್-ಫ್ರೀ ಸಂಖ್ಯೆ ಲಭ್ಯ
ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡಿದರೆ ಅಥವಾ ಔಷಧಗಳ ಬೆಲೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಹಕರು ‘ಫಾರ್ಮಾ ಜನ್ ಸಮಾಧಾನ್’ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು. ಇದಲ್ಲದೆ 1800-111-255 ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕವೂ ತಮ್ಮ ದೂರುಗಳನ್ನು ಸಲ್ಲಿಸಲು ಎನ್‌ಪಿಪಿಎ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ.






