ಬೆಂಗಳೂರು : ರಾಜ್ಯ ಸರ್ಕಾರವು (State Government) ಎಲ್ಲ ಸರ್ಕಾರಿ ಇಲಾಖೆಗಳಲ್ಲಿ (Government Departments) ತಾತ್ಕಾಲಿಕ ಸಿಬ್ಬಂದಿಯನ್ನು (Temporary Staff) ನೇಮಿಸಿಕೊಳ್ಳಲು ಪೊಲೀಸ್ ಪರಿಶೀಲನಾ ಪ್ರಮಾಣಪತ್ರವನ್ನು (Police Verification Certificate) ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ (Karnataka High Court) ಕ್ರಿಮಿನಲ್ ಅಪೀಲ್ ನಿರ್ದೇಶನದಂತೆ, ವಲಸೆ ಕಾರ್ಮಿಕರ ಹಿನ್ನೆಲೆ ಪರಿಶೀಲನೆ, ಗುರುತು ದೃಢೀಕರಣ, ನೋಂದಣಿ ವ್ಯವಸ್ಥೆ ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸುವ ಸಂಬಂಧ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಗುತ್ತಿಗೆ ಸಿಬ್ಬಂದಿಯ ಪೂರ್ವಾಪರ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ
ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರ ಕಚೇರಿಯಿಂದ ಎಲ್ಲಾ 31 ಜಿಲ್ಲಾ ಉಪ ನಿರ್ದೇಶಕರಿಗೆ ಅಧಿಕೃತ ಸುತ್ತೋಲೆ ರವಾನಿಸಲಾಗಿದೆ. ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧೀನ ಕಚೇರಿಗಳಲ್ಲಿ ಬಾಹ್ಯಮೂಲ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಪಡೆಯುವಾಗ, ಸಂಬಂಧಪಟ್ಟ ನೌಕರರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಪೊಲೀಸ್ ಪರಿಶೀಲನಾ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದ ಬಳಿಕವೇ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೂ ಅನ್ವಯ
ನೇಮಕಾತಿ ಪ್ರಕ್ರಿಯೆಯ ವೇಳೆ ನೌಕರರ ಅಧಿಕೃತ ಗುರುತಿನ ಪುರಾವೆಗಳು, ದಾಖಲಾತಿಗಳು ಹಾಗೂ ತುರ್ತು ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಿಡಬೇಕು. ಅಷ್ಟೇ ಅಲ್ಲದೆ, ಪ್ರಸ್ತುತ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರಿತ ನೌಕರರಿಂದಲೂ ಪೊಲೀಸ್ ಪರಿಶೀಲನಾ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಪಿಎಂ ರಾಹತ್ ಯೋಜನೆಯಡಿ ರಸ್ತೆ ಅಪಘಾತಕ್ಕೊಳಗಾದವರಿಗೆ ಸಿಗಲಿದೆ ₹1.5 ಲಕ್ಷದವರೆಗೆ ಉಚಿತ ನಗದುರಹಿತ ಚಿಕಿತ್ಸೆ






