ಬೆಂಗಳೂರು: ಭಾರತವನ್ನು ಜಾಗತಿಕ ನಾಯಕವಾಗಿಸಲು ಪ್ರಧಾನಿಗಳ ಆಶಯದಂತೆ ಕರ್ನಾಟಕ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಹಾಗೂ ರಕ್ಷಣಾ ವಲಯದಲ್ಲಿ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರಿಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಚಾಲನೆಗೊಂಡ ಏರೋ ಇಂಡಿಯಾ ಶೋ 2023 ಕಾರ್ಯಕ್ರಮದಲ್ಲಿ ಪ್ರಧಾನಿಗಳೊಂದಿಗೆ ಪಾಲ್ಗೊಂಡು ಮಾತನಾಡಿದರು.

ಏರೋ ಇಂಡಿಯಾ ಶೋ 14ನೇ ಆವೃತ್ತಿಯು ಗಾತ್ರ, ಪ್ರದರ್ಶನ ಮತ್ತು ಕಾರ್ಯವೈಖರಿಯ ದೃಷ್ಟಿಯಿಂದ ಅತ್ಯಂತ ವಿಶೇಷ ಆವೃತ್ತಿ ಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಏರ್ ಶೋ ಆಗಿದೆ. ರಕ್ಷಣಾ ವಲಯ ಹಾಗೂ ಏರ್ ಶೋ ಪ್ರದರ್ಶನದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ. ಕೋವಿಡ್ ಸಂದರ್ಭದಲ್ಲಿ ಪ್ಯಾರಿಸ್ ಏರ್ ಶೋ ನಡೆಯದಿದ್ದಾಗ, ನಮ್ಮ ಏರ್ ಶೋ ಯಶಸ್ವಿಯಾಗಿ ಜರುಗಿತು. ಈ ಬಾರಿ ವಸ್ತು ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ಕರ್ನಾಟಕ ಹಿಂತಿರುಗಿ ನೋಡಿಲ್ಲ
ಕರ್ನಾಟಕದಲ್ಲಿ 1940 ರಲ್ಲಿ ಹೆಚ್.ಯೇ.ಎಲ್, 1950 ರಲ್ಲಿ ಬಿ ಹೆಚ್.ಇ.ಎಲ್, ಬಿ.ಇ. ಎಲ್, ಡಿ.ಆರ್.ಡಿ ಒ ಸ್ಥಾಪನೆಗೊಂಡವು. 1960 ರಲ್ಲಿ ಇಸ್ರೋ ಕಾರ್ಯಾರಂಭ ಮಾಡಿದರೆ, 1970 ರಲಿ ಮೊದಲ ಸ್ಯಾಟಲೈಟ್ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಲ್ಲಿ ತಯಾರಿಸಲಾಯಿತು. ಅಲ್ಲಿಂದ ನಾವು ಹಿಂತಿರುಗಿ ನೋಡಿಲ್ಲ. ಈಗ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ರಕ್ಷಣಾ ವಲಯದ ಶೇ 65 ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ ಎಂದರು.

45 ಸಾವಿರಕ್ಕೂ ಹೆಚ್ಚು ಯುವಕರ ಬಳಕೆ
ರಾಜ್ಯದಲ್ಲಿ ಏರೋಸ್ಪೇಸ್ ಹಾಗೂ ರಕ್ಷಣಾ ನೀತಿಯು ಜಾರಿಯಲ್ಲಿದ್ದು, ರಕ್ಷಣಾ ಹಾಗೂ ಏರೋಸ್ಪೇಸ್ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು 45 ಸಾವಿರಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಳ್ಳಲಾಗುವುದು ಎಂದರು.
ಕರ್ನಾಟಕ 14 ನೇ ಏರೋ ಶೋ ಆಯೋಜಿಸಲು ಅವಕಾಶ ಮಾಡಿಕೊಟ್ಟಿರುವ ಪ್ರಧಾನಿಗಳು ಹಾಗೂ ರಕ್ಷಣಾ ಸಚಿವರಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು. ರಕ್ಷಣಾ ವಲಯದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಗೆ ಕರ್ನಾಟಕ ತನ್ನ ಕೊಡುಗೆಯನ್ನು ನಿರಂತರವಾಗಿ ನೀಡಲಿದೆ ಎಂದರು.