ಮೋದಿ ಸರಕಾರ ದೇಶದ ಎಲ್ಲಾ ಸಾಂವಿಧಾನಿಕ ಮತ್ತು ತನಿಖಾ ಸಂಸ್ಥೆಗಳನನು ಗರಿಷ್ಟ ಮಟ್ಟದಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪ ಮೊದಲಿನಿಂದಲು ಕೇಳಿಬರುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ)ವನ್ನು ಮೋದಿ ಸರಕಾರ ವಿರೋಧ ಪಕ್ಷದ ನಾಯಕರ ಮೇಲೆ ಬಳಸುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮೋದಿ ಸರಕಾರ ಜಾರಿ ನಿರ್ದೇಶನಾಲಯವನ್ನು ಗರಿಷ್ಟ ಮಟ್ಟದಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಸಂಸತ್ತಿನ ಸದನದಲ್ಲಿ ಸಮಂಜಸವಾದ ಮತ್ತು ಅಷ್ಟೇ ಬಲವಾದ ರೀತಿಯಲ್ಲಿ ಪ್ರಾಸ್ತಾಪಿಸಿದ್ದು ಸಮಂಜಸವಾಗಿದೆ.
ಆ ಕುರಿತು ಪತ್ರಕರ್ತ ಅಜಯ್ ಕೆ ಮೆಹ್ರಾ ಅವರು ಜನವರಿ ೦೬, ೨೦೨೩ ರ ‘ದಿ ವೈರ್’ ವೆಬ್ ಜರ್ನ್’ಲ್’ನಲ್ಲಿ ಬರೆದ ವಿಸ್ತ್ರತ ಅಂಕಣವನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಬರಹಗಾರ ಮೆಹ್ರಾ ಅವರು ರಾಜನೀತಿಜ್ಞರಾಗಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಹಿರಿಯ ಸಹವರ್ತಿ, ದಿಲ್ಲಿಯ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯ ಸಿನೀಯರ್ ಫೆಲೊ, ೨೦೧೯-೨೧ ರ ಅವಧಿಗೆ ದಿಲ್ಲಿ ವಿಶ್ವವಿದ್ಯಾಲಯದ ಶಹೀದ್ ಭಗತ್ ಸಿಂಗ್ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ಮಾಡಿದ್ದಾರೆ.
೨೦೨೨-೨೩ರ ಆಯವ್ಯಯದ ಅನುದಾನದ ಪೂರಕ ಬೇಡಿಕೆಗಳು ಮತ್ತು ೨೦೧೯-೨೦ರ ಹೆಚ್ಚುವರಿ ಅನುದಾನದ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆಗೆ, ಡಿಸ್ಸೆಂಬರ್ ೧೩ˌ ೨೦೨೨ ರಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಜಾರಿ ನಿರ್ದೇಶನಾಲಯದ (ಇಡಿ) ದುರುಪಯೋಗ ಮತ್ತು ತನಿಖಾ ಸಂಸ್ಥೆಗಳ ಕಾರ್ಯದಲ್ಲಿ ಮೋದಿ ಸರಕಾರದ ಹಸ್ತಕ್ಷೇಪದ ಪ್ರಶ್ನೆಯನ್ನು ಸದನದಲ್ಲಿ ಎತ್ತಿದ್ದಾರೆ. ಸಂಪೂರ್ಣ “ಸಂಸದೀಯ ಭಾಷೆ” ಯಲ್ಲಿ ಮೊದಿ ಸರಕಾರ ವಿರೋಧಿ ನಾಯಕರ ಮೇಲೆ ಮಾಡುತ್ತಿರುವ ದೃಢವಾಗಿ ಆಕ್ರಮಣವನ್ನು ಆಕೆ ಪೂರಕ ಅಂಕಿಅಂಶಗಳ ಸಮೇತ ಪ್ರಶ್ನಿಸಿದ್ದಾರೆ.
ಮೋಯಿತ್ರಾ ಅವರು ನಿಸ್ಸಂದಿಗ್ಧವಾಗಿ, “ಉದ್ಯಮಿಗಳು ಮತ್ತು ಗೌರವಾನ್ವಿತ ವ್ಯಕ್ತಿಗಳ ಮೇಲೆ ಜಾರಿ ನಿರ್ದೇಶನಾಲಯದ ಕತ್ತಿ ನೇತಾಡುವ ಭಯೋತ್ಪಾದನೆಯ ವಾತಾವರಣ ದೇಶದಲ್ಲಿ ಸೃಷ್ಟಿಸಲಾಗಿದೆ. ಆಡಳಿತ ಪಕ್ಷ ಬಿಜೆಪಿಯು ನೂರಾರು ಕೋಟಿಗೆ ವಿರೋಧ ಪಕ್ಷದ ಶಾಸಕರನ್ನು ಖರೀದಿಸುತ್ತಿದೆ ಮತ್ತು ಅದೇ ವಿರೋಧ ಪಕ್ಷಗಳ ಶೇ. ೯೫% ಸದಸ್ಯರು ಇಡಿ ತನಿಖೆಯನ್ನು ಎದುರಿಸುತ್ತಿದ್ದಾರೆ. ರಾಜಕಾರಣಿಗಳು ಬಲಾಢ್ಯರು, ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು. ಆದರೆ ಬಿಜೆಪಿಯನ್ನು ಬೆಂಬಲಿಸದ ಉದ್ಯಮಿಗಳು ಮತ್ತು ಸಮಾಜದ ಗೌರವಾನ್ವಿತ ವ್ಯಕ್ತಿಗಳನ್ನು ಕೂಡ ಮೋದಿ ಸರಕಾರ ಸಾಫ್ಟ್ ಟಾರ್ಗೆಟ್ ಮಾಡುತ್ತಿದೆ” ಎಂದಿದ್ದಾರೆ ಮೋಯಿತ್ರಾ ಅವರು.
ಕಳೆದ ೧೭ ವರ್ಷಗಳಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇಡಿ ೫,೪೨೨ ತನಿಖೆಗಳನ್ನು ನಡೆಸಿದೆ, ಅದರಲ್ಲಿ ಕೇವಲ ೨೩ ಅಪರಾಧಗಳು, ಅಂದರೆ ಶೇ. ೦.೫% ಕೇಸುಗಳು ಮಾತ್ರ “ಕರುಣಾಜನಕ” ವಾಗಿವೆ ಎಂದು ಸರಕಾರದ ಅಂಕಿಅಂಶಗಳನ್ನು ಮೋಯಿತ್ರಾ ಉಲ್ಲೇಖಿಸಿದ್ದಾರೆ. ೨೦೧೧ ರಿಂದ ಇಡಿ ೧,೬೦೦ ತನಿಖೆಗಳು ಮತ್ತು ೧,೮೦೦ ದಾಳಿಗಳನ್ನು ಮಾಡಿದೆ, ಆದರೆ ಕೇವಲ ೧೦ ಜನರನ್ನು ಮಾತ್ರ ಅಪರಾಧಿಗಳೆಂದು ರುಜುವಾತು ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ. ಹೆಚ್ಚುವರಿ ಕಚೇರಿಗಳು ಮತ್ತು ಸಿಬ್ಬಂದಿ ವಸತಿಗಳನ್ನು ಪ್ರಾರಂಭಿಸಲು ಇಡಿಗಾಗಿ ಸರಕಾರವು ಮಾಡಿದ ಹೆಚ್ಚುವರಿ ಬೇಡಿಕೆಗಳನ್ನು (ಉಲ್ಲೇಖಿಸಲಾದ ರೂ. ೨,೯೦೦ ಕೋಟಿಯ ಅಂಕಿ ಅಂಶವು ತಪ್ಪಾಗಿದೆ; ನಿಖರವಾದ ಅಂಕಿಅಂಶಗಳು ತಿಳಿದಿಲ್ಲ) ಅವರು ಪ್ರಶ್ನಿಸಿದ್ದಾರೆ.
ಇದು ಪ್ರಮುಖ ತನಿಖಾ ಏಜೆನ್ಸಿಯೊಂದರ ಬಗ್ಗೆ ಆಗಿರುವ ತೀವ್ರ ಟೀಕೆಯಾಗಿದೆ ಎನ್ನಲಾಗುತ್ತಿದೆ. ಮೋಯಿತ್ರಾ ಅವರು ಇತ್ತೀಚಿನ ಅಂಕಿಅಂಶಗಳನ್ನು ಉಲ್ಲೇಖಿಸದಿದ್ದರೂ, ಮೊಯಿತ್ರಾ ಹೇಳಿದ್ದರಲ್ಲಿ ಸತ್ಯವಿದೆ. ೨೦೧೪ ರಿಂದ, ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ, ೧೨೧ ರಾಜಕಾರಣಿಗಳ ಮೇಲೆ ಇಡಿ ತನಿಖೆ ನಡೆಸಿದೆ ಮತ್ತು ಅವರಲ್ಲಿ ೧೧೫ (95%) ಜನ ರಾಜಕಾರಣಿಗಳು ವಿರೋಧ ಪಕ್ಷಕ್ಕೆ ಸೇರಿದವರು (೨೪ ಜನ ಕಾಂಗ್ರೆಸ್, ೧೯ ಜನ ತೃಣಮೂಲ ಕಾಂಗ್ರೆಸ್, ೧೧ ಜನ ರಾಷ್ಟ್ರೀಯವಾದಿ ಕಾಂಗ್ರೆಸ್ˌ ೦೮ ಜನ ಶಿವಸೇನೆಯವರು). ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿರೋಧ ಪಕ್ಷದ ನಾಯಕರು ಬಿಜೆಪಿಗೆ ಪಕ್ಷಾಂತರ ಮಾಡಿದಾಗ ಅವರ ಮೇಲಿನ ಪ್ರಕರಣಗಳನ್ನು ಕೈಬಿಡಲಾಗಿದೆ. ಅವರಲ್ಲಿ ಕೆಲವರು ಸರಕಾರ ಮತ್ತು ಆಡಳಿತ ಪಕ್ಷದಲ್ಲಿ ಪ್ರಧಾನ ಸ್ಥಾನಗಳನ್ನು ಸಹ ಪಡೆದ್ದಾರೆಂದು ಅಜಯ್ ಮೆಹ್ರಾ ಬರೆದಿದ್ದಾರೆ.

ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ (FERA), ೧೯೪೭ ರ ಉಲ್ಲಂಘನೆಯ ಪ್ರಕರಣಗಳನ್ನು ತನಿಖೆ ಮಾಡಲು ಇಡಿ ಅನ್ನು ಮೇ ೧, ೧೯೫೬ ರಂದು ಆರ್ಥಿಕ ವ್ಯವಹಾರಗಳ ಇಲಾಖೆಯೊಳಗೆ ಒಂದು ಸಣ್ಣ ಜಾರಿ ಘಟಕವಾಗಿ ಸ್ಥಾಪಿಸಲಾಯಿತು. ೧೯೫೭ ರಲ್ಲಿ, ಬಾಂಬೆ ಮತ್ತು ಕಲ್ಕತ್ತಾದಲ್ಲಿ ಅಸ್ತಿತ್ವದಲ್ಲಿರುವ ಎರಡು ಶಾಖೆಗಳೊಂದಿಗೆ ಮದ್ರಾಸ್ನಲ್ಲಿ ಒಂದು ಶಾಖೆಯನ್ನು ಸೇರಿಸುವುದರೊಂದಿಗೆ ಇದನ್ನು ಜಾರಿ ನಿರ್ದೇಶನಾಲಯ ಎಂದು ಹೆಸರಿಸಲಾಯಿತು. ೧೯೬೦ ರಲ್ಲಿ, ಆಡಳಿತಾತ್ಮಕ ನಿಯಂತ್ರಣವನ್ನು ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಇಡಿಯನ್ನು ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಆಡಳಿತ ಕ್ಷೇತ್ರಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಅದು ನಾಲ್ಕು ವರ್ಷಗಳ ಕಾಲ ಉಳಿಯಿತು. ಇದನ್ನು ೧೯೭೭ ರಲ್ಲಿ ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು ಎನ್ನುವ ಮಾಹಿತಿಯನ್ನು ಮೆಹ್ರಾ ನೀಡಿದ್ದಾರೆ.
ಮೊಯಿತ್ರಾ ಅವರು PMLA (೨೦೦೨) ಅನ್ನು ಉಲ್ಲೇಖಿಸಿದ್ದಾರೆ, ಇದು ಇಡಿ ಒಳಗೊಂಡಿರುವ ಅತ್ಯಂತ ಇತ್ತೀಚಿನ ಆದರೆ ನಿರ್ಣಾಯಕ ಶಾಸನವಾಗಿದ್ದು ಇತ್ತೀಚೆಗೆ ರಾಜಕೀಯ ಉದ್ದೇಶಗಳಿಗಾಗಿ ಹೆಚ್ಚು ಬಳಸಲಾಗುತ್ತಿದೆ ಎನ್ನುತ್ತಾರೆ ಮೆಹ್ರಾ ಅವರು. FERA ಅನ್ನು ೧೯೯೯ ರಲ್ಲಿ ರದ್ದುಗೊಳಿಸಿದ ನಂತರ, ಉದಾರೀಕರಣದ ಆಡಳಿತದ ಹೊಸ ವಿದೇಶಿ ವಿನಿಮಯ ಅಗತ್ಯತೆಗಳನ್ನು ಅನುಸರಿಸಿ, ಜೂನ್ ೧, ೨೦೦೦ ರಿಂದ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) (೧೯೯೯) ಆ ಸ್ಥಾನವನ್ನು ಪಡೆದುಕೊಂಡಿತು. ಎರಡು ವರ್ಷಗಳ ನಂತರ PMLA ಅನ್ನು ಸೇರಿಸಲಾಯಿತು ಎನ್ನುವ ಮಾಹಿತಿ ಕೂಡ ಅಂಕಣಕಾರ ನೀಡಿದ್ದು ವಿಶೇಷ. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯಿದೆ, ೨೦೧೮, ಮತ್ತು ವಿದೇಶಿ ವಿನಿಮಯದ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ, ೧೯೭೪ (COFEPOSA) ನಂತಹ ವಿದೇಶಿ ವಿನಿಮಯ ಕಾನೂನುಗಳ ಸ್ಟ್ರಿಂಗ್ಗಳೊಂದಿಗೆ, ವಿದೇಶಿ ವಿನಿಮಯ ಆಡಳಿತವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಇಡಿ ಅಧಿಕಾರವನ್ನು ಹೊಂದಿದೆ ಎನ್ನುವ ಕುರಿತು ಮೆಹ್ರಾ ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಇದು ಕ್ರಿಮಿನಲ್ ಆಕ್ಟ್ ಆಗಿರುವುದರಿಂದ, PMLA ಬೇರೆಯದೆ ವರ್ಗದ ತನಿಖಾ ಸಂಸ್ಥೆಯಾಗಿದೆ. ಇದು ಅನುಮಾನಾಸ್ಪದ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗಿರುವ ದೊಡ್ಡ ಮೀನುಗಳನ್ನು ಹಿಡಿಯುವ ಉದ್ದೇಶಿಸದಿಂದ ಸ್ಥಾಪಿಸಲಾಗಿದೆ, ಆದರೆ ಖಂಡಿತವಾಗಿಯೂ ಇದು ಭಿನ್ನಾಭಿಪ್ರಾಯ ಹೊಂದಿರುವ ಗೌರವಾನ್ವಿತ ವ್ಯಕ್ತಿಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳನ್ನು ಗುರಿಯಾಗಿಸಲು ಸ್ಥಾಪಿಸಿದ್ದಲ್ಲ ಎನ್ನುತ್ತಾರೆ ಮೆಹ್ರಾ. ಬಹುತೇಕ ರಾಜಕೀಯ ಪಕ್ಷಗಳು ಮತ್ತು ಸಂಸತ್ ಸದಸ್ಯರು ಗಮನ ಹರಿಸದ ಈ ಗಂಭೀರ ವಿಷಯವನ್ನು ಮೊಯಿತ್ರಾ ಅವರು ಲೋಕಸಭೆಯ ಸದನದಲ್ಲಿ ಸಮರ್ಥವಾಗಿ ಮತ್ತು ಬಲವಾದ ರೀತಿಯಲ್ಲಿ ಪ್ರಸ್ತಾಪಿಸುವುದು ಸರಿಯಾಗಿಯೆ ಇದೆ ಎನ್ನುತ್ತಾರೆ ಮೆಹ್ರಾ ಅವರು.
ಕಳೆದ ಎಂಟು ವರ್ಷಗಳಿಂದ ಜನರನ್ನು ಧರ್ಮದ ಆಧಾರದಲ್ಲಿ ವಿಘಟಿಸುತ್ತಿರುವ ಬಿಜೆಪಿಯ ನಡೆಯಿಂದ ದೇಶವನ್ನು ರಕ್ಷಿಸಲು ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯವರು ಕೂಡ ಇಡಿಯಂತಹ ತನಿಖಾ ಸಂಸ್ಥೆಗಳ ದುರ್ಬಳಕೆಯ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎನ್ನುತ್ತಾರೆ ಮೆಹ್ರಾ ಅವರು. ಎರಡನೆಯ ನಿರ್ಣಾಯಕ ಅಂಶವೆಂದರೆ ಸಂಸತ್ತು ಮತ್ತು ಶಾಸಕಾಂಗದ ಸದನಗಳನ್ನು ಬೀದಿ ರಾಜಕೀಯದ ತಂತ್ರಗಳಿಗಿಂತ ಹೆಚ್ಚಿನ ಮಟ್ಟದ ತಿಳುವಳಿಕೆಯಿಂದ ಜ್ವಲಂತ ಸಮಸ್ಯೆಗಳ ಮೇಲಿನ ಚರ್ಚೆಗಳಿಗೆ ಬಳಸುವ ಅಗತ್ಯವಿದೆ ಎನ್ನುವುದು ಮೆಹ್ರಾ ಅವರ ಅಭಿಪ್ರಾಯವಾಗಿದೆ. ಇಡೀ ಅಂಕಣದಲ್ಲಿ ಮೋದಿ ಸರಕಾರ ಸಂವಿಧಾನಿಕ ತನಿಖಾ ಸಂಸ್ಥೆಗಳನ್ನು ವಿರೋಧಿಗಳನ್ನು ಹಣಿಯಲು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರದೃಷ್ಟದ ಸಂಗತಿಯಾಗಿದೆ. ಮೋಯಿತ್ರಾ ಅವರು ಸರಿಯಾದ ಸಂಗತಿಯನ್ನೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ.