ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರದ ಅವಧಿ ಮುಕ್ತಾಯವಾಗಿ 4 ವರ್ಷಗಳೇ ಕಳೆಯುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರ ಸ್ಪಷ್ಟ ಬಹಮತದೊಂದಿಗೆ ಅಧಿಕಾರದಲ್ಲಿದ್ದು, ಶೀಘ್ರವಾಗಿಯೇ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. “ಪ್ರತಿಧ್ವನಿ” ಗೆ ಸರ್ಕಾರದ ಉನ್ನತ ಮಟ್ಟದ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಈ ಬಾರಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಅಷ್ಟಕ್ಕೂ ಸರ್ಕಾರ ಹೀಗೆ ಏಕಾಏಕಿ ಬಿಬಿಎಂಪಿ ಮೇಲೆ ನಿಗಾವಹಿಸಲು ಸಾಲು ಸಾಲು ಕಾರಣಗಳು ಕೂಡ ಇದೆ.
- ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.
- ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆಗಳು ನಡೆದ ಬಳಿಕ ಸರ್ಕಾರ ಇನ್ನಷ್ಟು ಆ್ಯಕ್ಟೀವ್ ಆಗಬೇಕಿದೆ.
- ಮುಂದಿನ 4 ವರ್ಷಗಳ ಬಳಿಕ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲೂ ಈಗಿನ ಮಾದರಿಯಲ್ಲಿಯೇ ಅಧಿಕಾರ ಹಿಡಿಯಬೇಕಿದೆ.
- ಈ ಪ್ರಕ್ರಿಯೆ ಆಗಬೇಕು ಅಂದರೆ, ರಾಜ್ಯದ ರಾಜಧಾನಿ ನಗರ ಕಾಂಗ್ರೆಸ್ ಕೈಯಲ್ಲಿರಬೇಕು.
- ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ, ಬಿಬಿಎಂಪಿ ಚುನಾವಣೆ ಮಾಡಲು ವಿಫಲವಾಗಿದೆ.
- ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಂಚ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದು, ಜನ ಅದರ ಪ್ರತಿಫಲ ಊಟ ಮಾಡುತ್ತಿದ್ದಾರೆ.
- ಈಗಷ್ಟೇ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಬೆಂಗಳೂರು ನಗರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದೆ. ಇದನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದಿಕ್ಕಬೇಕು ಅಂದರೆ ಪಾಲಿಕೆ ಚುನಾವಣೆ ಆಗಲೇಬೇಕು.
- ಪಾಲಿಕೆ ಚುನಾವಣೆ ಮಾಡಿ, ಅಲ್ಲೂ ಕೂಡ ಕಾಂಗ್ರೆಸ್ ಅಧಿಕಾರ ಹಿಡಿದಿದ್ದೇ ಆದ್ರೆ, ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟ ಹಾಗೇ ಆಗುತ್ತದೆ.
- ಜೊತೆಗೆ ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ ಕೊಟ್ಟಂತಾಗುತ್ತದೆ.
- ಇನ್ನು ಮುಂದೆ 5 ವರ್ಷ ಬೆಂಗಳೂರಿನಲ್ಲೂ ಅಧಿಕಾರ ಹಿಡಿದು, ಬ್ರ್ಯಾಂಡ್ ಬೆಂಗಳೂರು ಕನಸು ಸಾಕಾರಗೊಳಿಸುತ್ತಾ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಾ, ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಗಳಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎನ್ನಲಾಗುತ್ತಿದೆ.
ಹೀಗೆ ಸಾಲು ಸಾಲು ಕಾರಣಗಳನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆಯನ್ನು ದಸರಾ ಸಂದರ್ಭದಲ್ಲಿ ನಡೆಸಲು ವೇದಿಕೆಯನ್ನು ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿಕೊಳ್ಳುತ್ತಿದೆ.
ಇನ್ನು ಈಗಾಗಲೇ ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇಲ್ಲದೇ ನಾಲ್ಕು ವರ್ಷ ಕಳೆದಿದ್ದು, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಿಗಾವಹಿಸುವುದು ಅತ್ಯವಶ್ಯಕವಾಗಿರುವ ಕಾರಣ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಬೆಂಗಳೂರು ನಗರದ ಉಸ್ತುವಾರಿಯೂ ಆಗಿರುವ ಕಾರಣ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬರುತ್ತಿದೆ ಎನ್ನಲಾಗಿದೆ.