
ಬೀದರ್: ಕರ್ನಾಟಕ ಲೋಕಸೇವಾ ಆಯೋಗದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಜಿಲ್ಲೆಯ 28 ಕೇಂದ್ರಗಳಲ್ಲಿ ನಡೆಯಲಿದ್ದು, ಅಕ್ರಮ ತಡೆಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೋಮವಾರ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆ ನಡೆಯದಂತೆ ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದರಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝಿರಾಕ್ಸ್, ಟೈಪಿಂಗ್, ಕಂಪ್ಯೂಟರ್ ಅಂಗಡಿಗಳನ್ನು ಬಂದ್ ಇಡಬೇಕು. ಪರೀಕ್ಷೆಯಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು ಹಾಗೂ ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರ ಪ್ರವೇಶ ನಿರ್ಬಂಧಿಸಲಾಗಿದೆ. ಕೇಂದ್ರಗಳ ಸುತ್ತ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.