ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವಧಿಗೂ ಮುನ್ನವೇ ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ. ಡಿಜಿ ಐಜಿಪಿ ಪ್ರವೀಣ್ ಸೂದ್ಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಭಾಸ್ಕರ್ ರಾವ್, ವೈಯಕ್ತಿಕ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ರಾಜೀನಾಮೆ ಪಡೆಯುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತಾನು ನೀಡಿರುವ ಅರ್ಜಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
1990ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಹಾಲಿ ರೈಲ್ವೇ ಇಲಾಖೆಯ ಎಡಿಜಿಪಿ. ಇದಕ್ಕೂ ಮುನ್ನ ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಈಗ ರಾಜಕೀಯ ಸೇರುವ ಇರಾದೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ತನ್ನ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿರುವ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕೀಯ ರಂಗ ಪ್ರವೇಶ ಫಿಕ್ಸ್ ಆಗಿದೆ. ಮೊನ್ನೆ ತಾನೆ ಐಪಿಎಸ್ ವೃತ್ತಿಗೆ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಕೆ ಮಾಡಿರುವ ಭಾಸ್ಕರ್ರಾವ್ ರಾಜಕಾರಣದ ಅಖಾಡಕ್ಕಿಳಿಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಮುಂಬರುವ ರಾಜ್ಯಸಭಾ ಬೈ ಎಲೆಕ್ಷನ್ನಲ್ಲೆ ರಾಜಕೀಯ ಭವಿಷ್ಯದ ಅಗ್ನಿಪರೀಕ್ಷೆಗೆ ಮುಂದಾಗಲಿದ್ದಾರೆ ಎನ್ನಲಾಗ್ತಿದೆ.
ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್. ರಾಜ್ಯದ ವಿವಿಧ ಹುದ್ದೆಗಳನ್ನ ಅಲಂಕರಿಸಿ ಸದ್ಯ ರೈಲ್ವೇ ವಿಭಾಗದ ಎಡಿಜಿಪಿ ಆಗಿದ್ದಾರೆ. ದಿಢೀರ್ ಐಪಿಎಸ್ ವೃತ್ತಿಗೆ ಸ್ವಯಂ ನಿವೃತ್ತಿಗೆ ಅರ್ಜಿ ಹಾಕುವ ಮೂಲಕ ಕುತೂಹಲ ಕೆರಳಿಸಿರುವ ಇವರು, ಅಣ್ಣಾಮಲೈರಂತೆ ರಾಜಕೀಯ ಪ್ರವೇಶಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಇನ್ನು ರಾಜಕೀಯ ಪ್ರವೇಶಕ್ಕೆ ಮುಂದಡಿ ಇಡುತ್ತಿರುವ ಭಾಸ್ಕರ್ ರಾವ್ ಅವರು ಕಾಂಗ್ರೆಸ್ನತ್ತ ಚಿತ್ತ ನೆಟ್ಟಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭಾ ಬೈ ಎಲೆಕ್ಷನ್ನಲ್ಲೇ ಭಾಸ್ಕರ್ ರಾವ್ ಸ್ಪರ್ಧೆಗೆ ಸಿದ್ಧರಾಗ್ತಿದ್ದಾರೆ. ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್ ನೀಡಬೇಕೆಂಬ ವಿಚಾರದಲ್ಲೂ ಭಾಸ್ಕರ್ ರಾವ್ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಭಾಸ್ಕರ್ ರಾವ್ ತಯಾರಿ ನಡೆಸಿದ್ದು, ಆಸ್ಕರ್ ಫರ್ನಾಂಡಿಸ್ ನಿಧನದಿಂದ ತೆರವಾಗಿರುವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯದಲ್ಲಿ ಎದುರಾಗಲಿರೋ ರಾಜ್ಯಸಭಾ ಸ್ಥಾನದ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭಾಸ್ಕರ್ರಾವ್ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಉಪ ಚುನಾವಣೆ ಘೋಷಣೆಗೂ ಮುನ್ನವೇ ಭಾಸ್ಕರ್ ರಾವ್ ರಾಜಕೀಯದ ಸುಳಿವು ಕೊಟ್ಟಿದ್ದಾರೆ.
ಒಟ್ನಲ್ಲಿ ಐಪಿಎಸ್ ಹುದ್ದೆಗೆ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ಭಾಸ್ಕರ್ ರಾವ್ ಅಧಿಕೃತವಾಗಿ ರಾಜಕೀಯಕ್ಕೆ ದುಮುಕುವ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯಸಭಾ ಬೈ ಎಲೆಕ್ಷನ್ ಮೂಲಕವೇ ರಾಜಕೀಯ ಭವಿಷ್ಯದ ಪರೀಕ್ಷೆಗೆ ಇಳಿಯಲು ಭಾಸ್ಕರ್ ರಾವ್ ಸಿದ್ಧವಾಗಿದ್ದು, ರಾಜಕಾರಣ ಅವರ ಕೈಹಿಡಿಯುತ್ತಾ ನೋಡಬೇಕು.
ಕಳೆದ ವರ್ಷ ಎಡಿಜಿಪಿ ಸಂಜಯ್ ಸಹಾಯ್ ಹಾಗೂ ಅಣ್ಣಾಮಲೈ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿದ್ದರು. ಇನ್ನು ಮೂರು ವರ್ಷಗಳ ಕಾಲ ಭಾಸ್ಕರ್ ರಾವ್ ಸೇವಾ ಅವಧಿ ಇದೆ. ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿ ಒಳ್ಳೆಯ ಹೆಸರು ಪಡೆದಿದ್ದರು. ಜೊತೆಗೆ ರೈಲ್ವೆ ಇಲಾಖೆಯಲ್ಲಿದ್ದಾಗಲೂ ಸೋನುಸೂದ್ ಜೊತೆ ಕೈ ಜೋಡಿಸಿ ಕೋವಿಡ್-19 ಸಂದರ್ಭದಲ್ಲಿ ಕಷ್ಟದ ಕುಟುಂಬಗಳಿಗೆ ಸಹಾಯ ಮಾಡಿದ್ದರು. ಈಗ ಧಿಡೀರ್ ಸ್ವಯಂ ನಿವೃತ್ತಿಗೆ ಮುಂದಾಗಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯ ಸ್ನೇಹಿತರ ವರ್ಗದಲ್ಲೂ ರಾಜಕೀಯಕ್ಕೆ ಹೋಗ್ತಾರೆ ಎಂದು ಮಾತುಗಳು ಸಹ ಕೇಳಿ ಬರುತ್ತಿವೆ.