ಪಟಿಯಾಲದ ಮೂಲದ ಇವರಿಗೆ 64 ವರ್ಷ. ಕೆಲ ಕಾಲ ಸರ್ಕಾರಿ ಸೇವೆಯಲ್ಲಿದ್ದು, ಕೃಷಿಯತ್ತ ಹೊರಳಿದರು. ದೀರ್ಘ ಕಾಲ ರೈತ ಸಮಸ್ಯೆಗಳ ಪರ ದನಿಯಾಗಿ ದುಡಿದ ಈ ವ್ಯಕ್ತಿ ವಿಶ್ವದೆಲ್ಲೆಡೆಯಿಂದ ಬೆಂಬಲ ಪಡೆಯುತ್ತಿರುವ ರೈತ ಹೋರಾಟಕ್ಕೆ ಇವರೇ ಚಾಲನೆ ನೀಡಿದರು.
ಇವರ ಹೆಸರು ಜಗಮೋಹನ್ ಸಿಂಗ್ ಪಟಿಯಾಲ. 64 ವರ್ಷದ ಇವರು ಒಂದು ಕಾಲದಲ್ಲಿ ಅಕ್ಯುಪಂಕ್ಚರಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಪಂಜಾಬ್ ಸಹಕಾರ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದರು.
ಆದರೆ ಅವರ ಮೂಲಸೆಳೆತವಿದ್ದು ಕೃಷಿಯೆಡೆಗೆ. ಭಾರತೀಯ ಕಿಸಾನ್ ಯೂನಿಯನ್ ಏಕ್ತಾದ ಸಕ್ರಿಯ ಕಾರ್ಯಕರ್ತರಾಗಿ ಹದಿನೈದು ವರ್ಷಗಳ ಕಾಲ ಶ್ರಮಿಸಿದ ಅವರು ನಂತರ ಭಾರತಿ ಕಿಸಾನ್ ಯೂನಿಯನ್ (ದಕೌಂಡ) ರಚಿಸಿ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಪಂಜಾಬಿ ರೈತರ ಪರ ಹೋರಾಟಗಳನ್ನು ಸಂಘಟಿಸುತ್ತಾ, ಕೃಷಿ ಸಮಸ್ಯೆಗಳಿ ರಾಜಕೀಯ ಪರಿಹಾರಗಳನ್ನು ಒದಗಿಸುವುದಕ್ಕೆ ಶ್ರಮಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದವರು ಮತ್ತು ಪ್ರತಿಭಟಿಸಿದವರು ಜಗಮೋಹನ್ ಅವರು. ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ಹತ್ತು ಕೃಷಿ ಸಂಘಟನೆಗಳು ಒಟ್ಟಾಗಿ ಈ ಮೂರು ಕಾನೂನುಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದರು.
ಈ ಪ್ರಕ್ರಿಯೆಯಲ್ಲಿ 31 ರೈತ ಗುಂಪುಗಳನ್ನು ಕಿಸಾನ್ ಸಮಿತಿಯಡಿ ತಂದು ಸೆಪ್ಟೆಂಬರ್ ಹೊತ್ತಿಗೆ ಹೋರಾಟವನ್ನು ಮತ್ತಷ್ಟು ತೀವ್ರವಾಗಿಸಿದರು. ರೈತ ಸಂಘಟನೆಗಳ ನಡುವೆ ಇರುವ ಸಣ್ಣ ಭಿನ್ನಾಭಿಪ್ರಾಯಗಳಿಂದಾಗಿ ಒಡೆದು ಹೋಗಿರಬಹುದಾಗಿದ್ದ ಸಂಘಟನೆಗಳನ್ನು ಒಂದುಗೂಡಿಸಿದ್ದು ಜಗ್ಮೋಹನ್ ಅವರ ಸಂಘಟನಾ ಚಾತುರ್ಯ.
ರೈತ ಸಮಸ್ಯೆಗಳಿಗೆ ಇರಬಹುದಾದ ಏಕೈಕ ಸಮಸ್ಯೆ ರೈತ ವಿರೋಧಿ ಸರ್ಕಾರ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ಜಗಮೋಹನ್ ಸಿಂಗ್ ಪಟಿಯಾಲ ಅವರು ದೆಹಲಿಯ ಗಡಿಯಲ್ಲಿ ದಿನದಿನಕ್ಕೂ ರೈತ ಹೋರಾಟವನ್ನು ತೀವ್ರಗೊಳಿಸುತ್ತಿದ್ದಾರೆ.