• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಭಾರತ್‌ ಜೋಡೋ-ಅನಿವಾರ್ಯತೆಯೂ ಆದ್ಯತೆಗಳೂ

ನಾ ದಿವಾಕರ by ನಾ ದಿವಾಕರ
September 24, 2022
in ಅಂಕಣ, ಅಭಿಮತ
0
ರಾಜಕೀಯಕ್ಕಾಗಿ ಮಕ್ಕಳ ದುರುಪಯೋಗ: ರಾಹುಲ್‌ ಗಾಂಧಿ, ಭಾರತ್‌ ಜೋಡೋ ಯಾತ್ರೆ ವಿರುದ್ಧ ಎನ್‌ಸಿಪಿಸಿಆರ್ ಆಕ್ರೋಶ
Share on WhatsAppShare on FacebookShare on Telegram

ಮುಂದಡಿ ಇಡುವ ಮುನ್ನ ಕಾಂಗ್ರೆಸ್ ಹಿಂದಿನ ಹೆಜ್ಜೆಗಳ ಮರುವಿಮರ್ಶೆಗೂ ಮುಂದಾಗಬೇಕಿದೆ

2023ರ ಕರ್ನಾಟಕದ ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಗಳು ಶತಮಾನದ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಲಿವೆ. ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ವಿರೋಧಪಕ್ಷ ಮುಕ್ತ ಮಾಡಲು ತನ್ನದೇ ಆದ “ರಾಜಕೀಯ-ರಣತಾಂತ್ರಿಕ-ಮಾರುಕಟ್ಟೆ” ಕಾರ್ಯತಂತ್ರಗಳನ್ನು ಅನುಸರಿಸುತ್ತಿರುವ ಬಿಜೆಪಿ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿಯೊಂದಿಗೆ ಒಂದು ಪಕ್ಷದ ಆಧಿಪತ್ಯವನ್ನೂ ಸಾಕಾರಗೊಳಿಸಲು ಸಜ್ಜಾಗುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯೊಳಗಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಈ ನೆಲೆಯಲ್ಲೇ ರೂಪುಗೊಂಡಿರುವ ರಾಜಕೀಯ ಅನಿವಾರ್ಯತೆಗಳು ಈ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಲಿದೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿರುವ ವಾತಾವರಣದಲ್ಲಿ ಬಂಡವಾಳ ಮತ್ತು ಮಾರುಕಟ್ಟೆ ಭಾರತದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಈ ಎರಡು ವಿದ್ಯಮಾನಗಳೇ ಒಕ್ಕೂಟ ವ್ಯವಸ್ಥೆಯ ವಿಭಿನ್ನ ಭಾಗಿದಾರರನ್ನು ಪ್ರಾದೇಶಿಕತೆಯ ಮೂಲಕ ಉತ್ತೇಜಿಸುತ್ತವೆ. ಹಾಗಾಗಿಯೇ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ಮಿತೆಯ ರಾಜಕಾರಣದಿಂದ ಹೊರಬಂದು, ಮಾರುಕಟ್ಟೆ ಕೇಂದ್ರಿತ ಬಂಡವಳಿಗ ಪಕ್ಷಗಳಾಗಿ ಅಧಿಕಾರ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿವೆ.

ADVERTISEMENT

ಈ ಸಂದರ್ಭದಲ್ಲೇ ದೇಶದ ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್‌ ತನ್ನ ಪುನಶ್ಚೇತನಕ್ಕಾಗಿ 3500 ಕಿಲೋಮೀಟರ್‌ ಪಾದಯತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದೆ. ಜಾತಿ, ಮತ, ಮತಧರ್ಮಗಳ ಭಾವನಾತ್ಮಕ ಅಸ್ಮಿತೆಗಳು ರಾಜಕೀಯ ನೆಲೆಯಲ್ಲಿ ಜನಸಮುದಾಯಗಳನ್ನು ಧೃವೀಕರಿಸುತ್ತಿರುವಂತೆಯೇ ಸಾಂಸ್ಕೃತಿಕ ನೆಲೆಯಲ್ಲಿ ವಿಘಟಿತಗೊಳಿಸುತ್ತಿವೆ. ಜಾತಿ ರಾಜಕಾರಣ ಮತ್ತು ಮತಧರ್ಮ ರಾಜಕಾರಣ ಪರಾಕಾಷ್ಠೆ ತಲುಪಿರುವ ಈ ಹೊತ್ತಿನಲ್ಲಿ ಈ ಎರಡೂ ಸೂಕ್ಷ್ಮ ನೆಲೆಗಳು ಅಧಿಕಾರ ರಾಜಕಾರಣದ ಮೇಲಾಟದ ಅಸ್ತ್ರಗಳಾಗಿರುವುದರಿಂದಲೇ, ತಳಮಟ್ಟದಲ್ಲಿ ಜನಸಮುದಾಯಗಳ ನಡುವೆ ಸಾಮಾಜಿಕ-ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವುದು ದುಸ್ತರವಾಗುತ್ತಿದೆ. ಆರ್ಥಿಕ ನೆಲೆಯಲ್ಲಿ ಕಾರ್ಪೋರೇಟ್‌ ಬಂಡವಾಳಶಾಹಿಯ ಕುಣಿಕೆ ಬಿಗಿಯಾಗುತ್ತಿರುವ ವರ್ತಮಾನದ ಸಂದರ್ಭದಲ್ಲಿ ಸಮಾಜದ ತಳಸಮುದಾಯಗಳು, ಶೋಷಿತರು, ಅವಕಾಶವಂಚಿತರು ಮತ್ತು ಅಭಿವೃದ್ಧಿಯ ಚೌಕಟ್ಟಿನಿಂದ ಹೊರಗುಳಿಯುವ ಬೃಹತ್‌ ಸಂಖ್ಯೆಯ ಸಾಮಾನ್ಯ ಜನರು ತಮ್ಮ ಸಾಂಸ್ಕೃತಿಕ ಬೇಲಿಗಳನ್ನು ತೊಡೆದು, ಸಾಮಾಜಿಕ ಮಡಿವಂತಿಕೆಯನ್ನು ಬದಿಗಿಟ್ಟು, ಮಾರುಕಟ್ಟೆಯ ವಿರುದ್ಧ ಹೋರಾಡಬೇಕಿದೆ.

ಏಕೆಂದರೆ ಮಾರುಕಟ್ಟೆ ಆರ್ಥಿಕತೆ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಮೂಲಕ ಸಾಮಾನ್ಯ ಜನತೆಯ ಬದುಕಿನ ಪ್ರತಿಯೊಂದು ಹೆಜ್ಜೆಯನ್ನೂ ನಿಯಂತ್ರಿಸಲು ಸಜ್ಜಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ, ಕಾರ್ಮಿಕ ಸಂಹಿತೆಗಳು, ಕೃಷಿ ಮತ್ತು ಅರಣ್ಯ ನೀತಿಗಳು ಇದನ್ನೇ ಸೂಚಿಸುತ್ತವೆ. ಆರ್ಥಿಕ ನೆಲೆಯಲ್ಲಿ ಸಕಲ ಸಂಪತ್ತು ಮತ್ತು ಸಂಪನ್ಮೂಲಗಳೂ ಖಾಸಗಿ ವಲಯದ ನಿಯಂತ್ರಣಕ್ಕೆ ಒಳಪಡುತ್ತಿರುವುದರಿಂದ ಸಾಮಾಜಿಕ ಮೇಲ್‌ ಚಲನೆ , ಸಾಂಸ್ಕೃತಿಕ ಕ್ರಿಯಾಶೀಲತೆ ಮತ್ತು ಆರ್ಥಿಕ ಮುನ್ನಡೆ ಈ ಮೂರೂ ಪ್ರಕ್ರಿಯೆಗಳು ತಮ್ಮ ಸಾರ್ವಭೌಮತ್ವದ ನೆಲೆಗಳನ್ನು ಕಳೆದುಕೊಳ್ಳುತ್ತವೆ. ದುಡಿಮೆಯ ವಲಯದ ಕಾರ್ಪೋರೇಟೀಕರಣದ ಜೊತೆಯಲ್ಲೇ, ಇದರ ಮುಂದುವರೆದ ಭಾಗವಾಗಿ ಶೈಕ್ಷಣಿಕ ವಲಯದಲ್ಲೂ ಮಾರುಕಟ್ಟೆ ತನ್ನದೇ ಆದ ಸಾಂಸ್ಥಿಕ ಏಜೆಂಟರನ್ನು ನೇಮಿಸುತ್ತದೆ. ಈಗಾಗಲೇ ಭಾರತದ ಉತ್ಪಾದನೆಯ ನೆಲೆಗಳೆಲ್ಲವೂ ಖಾಸಗಿ ಪಾಲಾಗಿವೆ. ಸರಕು ಸಾಗಾಣಿಕೆಯ ಹೊಸ ನೀತಿಯನ್ನೂ ಜಾರಿಗೊಳಿಸಲಾಗುತ್ತಿದ್ದು, ವಿಮಾನಯಾನ, ಬಂದರು, ರಸ್ತೆ ಸಾರಿಗೆ ಮತ್ತು ಹಣಕಾಸು ವಲಯಗಳು 2024ರ ವೇಳೆಗೆ ಸಂಪೂರ್ಣವಾಗಿ ಕಾರ್ಪೋರೇಟ್‌ ಹಿಡಿತದಲ್ಲಿರುತ್ತವೆ.

ಮಾರುಕಟ್ಟೆ ಮತ್ತು ಬಂಡವಾಳದ ಜಗನ್ನಾಥ ರಥಚಕ್ರದಡಿ ಸಿಲುಕುವ ಶ್ರಮಜೀವಿ ವರ್ಗಗಳು ಅಭಿವೃದ್ಧಿಯಿಂದ ವಂಚಿತರಾಗುವುದೇ ಅಲ್ಲದೆ ಸಾಮಾಜಿಕ ಅಸ್ಥಿರತೆಯನ್ನೂ ಎದುರಿಸಲಿವೆ. ಈ ಅಸ್ಥಿರತೆಯಿಂದ ಸಾಮಾನ್ಯ ಜನತೆಯಲ್ಲಿ ಸೃಷ್ಟಿಯಾಗಬಹುದಾದ ಅಸಮಾಧಾನ ಮತ್ತು ಆಕ್ರೋಶಗಳನ್ನು ನಿಯಂತ್ರಿಸುವ ಸಾಧನಗಳನ್ನು ರಾಜಕೀಯ ಪಕ್ಷಗಳು ಜಾತಿ, ಮತಧರ್ಮ ಮತ್ತು ಇತರ ಅಸ್ಮಿತೆಗಳಲ್ಲಿ ಕಂಡುಕೊಳ್ಳುತ್ತವೆ. ಬಂಡವಾಳಶಾಹಿ ಅರ್ಥವ್ಯವಸ್ಥೆ ಸೃಷ್ಟಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಥಿರತೆಯನ್ನು ಪ್ರಶ್ನಿಸುವ, ವಿರೋಧಿಸುವ ಮತ್ತು ಪ್ರತಿಭಟಿಸುವ ಜನಸಮುದಾಯಗಳ ಹಕ್ಕುಗಳನ್ನು ಹತ್ತಿಕ್ಕುವ ದಮನಕಾರಿ ಆಡಳಿತ ನೀತಿಗಳು ಹೋರಾಟದ ನೆಲೆಗಳನ್ನು ಕ್ರಮೇಣ ನಿಷ್ಕ್ರಿಯಗೊಳಿಸುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಈ ಅಸ್ಥಿರತೆ ಮತ್ತು ಕಾನೂನು ಭೀತಿಯೇ ಜನರನ್ನು ಮೂಲಭೂತವಾದ ಮತ್ತು ಕೋಮುವಾದದ ಕರಾಳ ಕೂಪಕ್ಕೆ ದೂಡುತ್ತದೆ. ಬಾಹ್ಯ ಜಗತ್ತಿಗಿಂತಲೂ ತಮ್ಮದೇ ಆದ ಜಾತಿ-ಮತಧರ್ಮಗಳ ನೆಲೆಯಲ್ಲಿ ಸಾಂತ್ವನದ ನೆಲೆಗಳನ್ನು ಕಂಡುಕೊಳ್ಳುವ ಅನಿವಾರ್ಯತೆಯನ್ನು ತಳಸಮುದಾಯಗಳೂ ಎದುರಿಸುತ್ತವೆ. ಹಾಗಾಗಿಯೇ ಹಿಂದುತ್ವ, ಹಿಂದೂ ಮೂಲಭೂತವಾದ, ಮುಸ್ಲಿಂ ಮೂಲಭೂತವಾದ ಮತ್ತು ಆಧ್ಯಾತ್ಮಿಕ ಸಾಂಸ್ಥಿಕ ನೆಲೆಗಳು ಹೆಚ್ಚು ಅಪ್ಯಾಯಮಾನವಾಗುತ್ತವೆ.

ಮೌಲ್ವಿಗಳು, ಮಠಾಧೀಶರು, ಪಾದ್ರಿಗಳು, ಸ್ವಾಮೀಜಿಗಳು ಅಕ್ಷರಶಃ ಸಾಮಾಜಿಕ ನಿರೂಪಕರಾಗಿ, ಸಾಂಸ್ಕೃತಿಕ ಸಂರಕ್ಷಕರಾಗಿ ತಮ್ಮ ಮತಧಾರ್ಮಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಾರೆ. ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಸರ್ಕಾರಗಳ ಮಾರುಕಟ್ಟೆ ನೀತಿಗಳು ಈ ಮತಧಾರ್ಮಿಕ-ಆಧ್ಯಾತ್ಮಿಕ ಸಾಂಸ್ಥೀಕರಣಕ್ಕೆ ಒತ್ತಾಸೆಯಾಗಿ ನಿಲ್ಲುವುದರಿಂದ, ಕೋಮು ಧೃವೀಕರಣದ ಹಾದಿಗಳು ಸುಗಮವಾಗುತ್ತವೆ. ಅಧಿಕಾರ ರಾಜಕಾರಣ ಮತ್ತು ಮಾರುಕಟ್ಟೆ ನಡುವಿನ ಅವಿನಾಭಾವ ಸಂಬಂಧಗಳು ಈ ಸಾಂಸ್ಥೀಕರಣವನ್ನು ಮತ್ತಷ್ಟು ಘನೀಕರಿಸುತ್ತವೆ. ಹಾಗಾಗಿಯೇ ಮುರುಘಾ ಮಠದಲ್ಲಿ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಬಾಲಕಿಯರೂ ಸಹ ನ್ಯಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ. ಶ್ರೇಷ್ಠತೆಯ ಅಹಮಿಕೆ ಮತ್ತು ದ್ವೇಷ ಮನೋಭಾವಗಳು ಮತಧರ್ಮಗಳ, ಜಾತಿಗಳ ನೆಲೆಯಲ್ಲಿ ಘನೀಕೃತಗೊಂಡಂತೆಲ್ಲಾ ಶೋಷಣೆಯ ಆಯಾಮಗಳೂ ಸೂಕ್ಷ್ಮವಾಗುತ್ತಲೇ ಹೋಗುತ್ತವೆ. ಮುಸ್ಲಿಂ ಮತಾಂಧರ ದಾಳಿಗೆ ಬಲಿಯಾಗುವ ಹಿಂದೂ ಯುವಕರು, ಹಿಂದೂ ಮತಾಂಧರ ಆಕ್ರಮಣಗಳಿಗೆ ಬಲಿಯಾಗುವ ಮುಸ್ಲಿಂ ಸಮುದಾಯ, ಶೂದ್ರ ಸಮುದಾಯದಿಂದಲೇ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ದಲಿತ ಮಹಿಳೆಯರು ಮತ್ತು ಅಸ್ಪೃಶ್ಯತೆಗೀಡಾಗುವ ತಳಸಮುದಾಯಗಳು ತಮ್ಮ ಮೇಲಿನ ದಾಳಿಗಳನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಮಾತ್ರವೇ ಕಾಣುತ್ತವೆಯೇ ಹೊರತು, ಆರ್ಥಿಕ ಸ್ಥಿತ್ಯಂತರಗಳನ್ನು ಗಮನಿಸುವುದೇ ಇಲ್ಲ. ಹಾಗಾಗಿಯೇ ಕಾರ್ಪೋರೇಟ್‌ ಮಾರುಕಟ್ಟೆ ತನ್ನ ಕಬಂಧ ಬಾಹುಗಳನ್ನು ಮುಕ್ತವಾಗಿ ಚಾಚುತ್ತಾ ಕಟ್ಟಕಡೆಯ ವ್ಯಕ್ತಿಯನ್ನೂ ಆವರಿಸಿಕೊಳ್ಳುತ್ತಿದೆ.

ಭಾರತೀಯ ಸಮಾಜ ಇಂದು ಎದುರಿಸುತ್ತಿರುವ ಸಾಮಾಜಿಕಾರ್ಥಿಕ-ಸಾಂಸ್ಕೃತಿಕ ಸಮಸ್ಯೆಗಳನ್ನು ಈ ತಾತ್ವಿಕ ನೆಲೆಯಲ್ಲಿ ನಿಷ್ಕರ್ಷೆ ಮಾಡದೆ ಹೋದರೆ, ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ಕೇವಲ ಚುನಾವಣಾ ರಾಜಕಾರಣದ ಒಂದು ಅಸ್ತ್ರವಾಗಿ ಪರ್ಯವಸಾನ ಹೊಂದುತ್ತದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಹಿತವಲಯದ ಒಂದು ವರ್ಗ ತಾವು ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಂಡ ಸಂಭ್ರಮದಲ್ಲಿದ್ದರೆ ಶೋಷಿತ ವಲಯವು ಏಳು ದಶಕಗಳಲ್ಲಿ ಪಡೆದುಕೊಂಡದ್ದನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿರುವ ಆತಂಕದಲ್ಲಿದೆ. ಇದಕ್ಕೆ ಕಾರಣ ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆ ಮತ್ತು ತೀಕ್ಷ್ಣವಾಗುತ್ತಿರುವ ಮತೀಯ ರಾಜಕಾರಣ. ಸಮಗ್ರ ನೆಲೆಯಲ್ಲಿ ನಿಂತು ನೋಡಿದಾಗ, ಕುಸಿಯುತ್ತಿರುವ ಆರ್ಥಿಕ ನೆಲೆಗಳ ಹಿಂದೆ ಕ್ಷೀಣಿಸುತ್ತಿರುವ ಸಾಂಸ್ಕೃತಿಕ ಸೇತುವೆಗಳನ್ನೂ ಕಾಣಲು ಸಾಧ್ಯ. ಮಂದಿರ, ಮಸೀದಿ, ಹಿಜಾಬ್‌, ಹಲಾಲ್‌, ತಲಾಖ್‌ ಈ ಎಲ್ಲ ಜ್ವಲಂತ ಸಮಸ್ಯೆಗಳ ಹಿಂದೆ ಕಾರ್ಪೋರೇಟ್‌ ಮಾರುಕಟ್ಟೆಯ ರಾಜಕೀಯ ಸೂಕ್ಷ್ಮಗಳು ಅಡಗಿರುವುದನ್ನು ಗಮನಿಸಬೇಕಿದೆ. ಈ ಸಮಸ್ಯೆಗಳಿಂದಲೇ ಸಮಾಜದಲ್ಲಿ ಸೃಷ್ಟಿಯಾಗುವ ಸಾಂಸ್ಕೃತಿಕ ಕಂದರಗಳು ಮಾರುಕಟ್ಟೆಯ ವಿಸ್ತರಣೆಗೆ ಪೂರಕವಾಗಿ ಪರಿಣಮಿಸುತ್ತವೆ.

ಹಾಗಾಗಿಯೇ ಇಂದು ಶೋಷಿತ-ದಮನಿತ ಸಮುದಾಯಗಳು, ಅವಕಾಶವಂಚಿತ ಸಮಾಜವೂ ಸಹ ಶೋಷಕ ವ್ಯವಸ್ಥೆಯ ಪ್ರೇರಕ ಶಕ್ತಿಯನ್ನು ಗುರುತಿಸುವುದರಲ್ಲಿ ವಿಫಲವಾಗುತ್ತಿದೆ. ಮಾರುಕಟ್ಟೆಯ ರಮ್ಯತೆಗೆ ಶರಣಾಗಿ ಭ್ರಮಾಧೀನರಾಗಿರುವ ಬೃಹತ್‌ ಯುವ ಸಮುದಾಯ ನಮ್ಮ ನಡುವೆ ಜೀವಂತಿಕೆಯಿಂದಿದೆ. ಈ ಯುವ ಸಮುದಾಯವೇ ಅಧಿಕಾರ ರಾಜಕಾರಣದ ವಿಸ್ತರಣೆಗೆ ಮತ್ತು ಬಲವರ್ಧನೆಗೆ ಆಧಾರವೂ ಆಗಿದೆ. ಮತಧಾರ್ಮಿಕ-ಜಾತಿ ಅಸ್ಮಿತೆಗಳ ಭೂಮಿಕೆಯಲ್ಲೇ ಧೃವೀಕರಣವಾಗುತ್ತಿರುವ ಯುವ ಸಮುದಾಯಗಳಿಗೆ, ಶತಮಾನದ ಪೀಳಿಗೆಗೆ ತಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಪರಿಜ್ಞಾನವೂ ಇಲ್ಲದಂತಾಗಿದೆ. ತಮ್ಮ ಶತ್ರುಗಳನ್ನು ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಭ್ರಷ್ಟ ಅಧಿಕಾರ ರಾಜಕಾರಣದಲ್ಲಿ ಕಾಣಲು ನಿರಾಕರಿಸಿ, ʼಅನ್ಯʼ ಜಾತಿ ಮತ್ತು ಮತಧರ್ಮಗಳಲ್ಲಿ ಕಾಣುವ ಮೂಲಕ ಯುವ ಸಮುದಾಯ ಸಾಮಾಜಿಕ ವಿಘಟನೆಯ ಕಾಲಾಳುಗಳಾಗಿ ಬಳಕೆಯಾಗುತ್ತಿದೆ. ಈ ವಿಘಟನೆಯ ಪ್ರಕ್ರಿಯೆಯನ್ನು ತಡೆಗಟ್ಟುವ ಮೂಲಕ, ಲೌಕಿಕ ಜಗತ್ತಿನ ಜ್ವಲಂತ ಸಮಸ್ಯೆಗಳ ನೆಲೆಯಲ್ಲಿ ಶೋಷಿತ ಮತ್ತು ಅವಕಾಶವಂಚಿತರನ್ನು ಧೃವೀಕರಿಸುವುದು-ಕ್ರೋಢೀಕರಿಸುವುದು ಭಾರತ್‌ ಜೋಡೋ ಪಾದಯಾತ್ರೆಯ ಧ್ಯೇಯ ಆಗಬೇಕಿದೆ.

ಈ ನಡುವೆಯೇ ನವ ಭಾರತದ ಸಾಮಾಜಿಕ ವಲಯದಲ್ಲಿ ಪ್ರತಿರೋಧದ ದನಿಗಳು ಕ್ಷೀಣಿಸುತ್ತಿರುವುದನ್ನೂ ಗಂಭೀರವಾಗಿ ಗಮನಿಸಬೇಕಿದೆ. ಕಿತ್ತುತಿನ್ನುವ ಬಡತನ, ಹಸಿವು, ನಿರುದ್ಯೋಗ, ಅತ್ಯಾಚಾರ, ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಸಮಸ್ಯೆಗಳು ನಿತ್ಯ ಸುದ್ದಿಯಾಗುತ್ತಿದ್ದರೂ, ಆಡಳಿತ ವಿರುದ್ಧ ಸಾಮೂಹಿಕವಾದ ಒಂದು ಪ್ರತಿರೋಧದ ಧ್ವನಿ ವ್ಯಕ್ತವಾಗುತ್ತಿಲ್ಲ. ಮೇಲೆ ಹೇಳಿದಂತೆ, ಯುವ ಸಮೂಹಗಳನ್ನು ಆವರಿಸಿರುವ ಅಸ್ಮಿತೆಯ ಚೌಕಟ್ಟುಗಳು ಇದಕ್ಕೆ ಒಂದು ಕಾರಣವಾದರೆ ಮತ್ತೊಂದು ಕಾರಣ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮತ್ತು ದಮನಕಾರಿ ಕಾಯ್ದೆಗಳು. ವ್ಯಾಪಕವಾಗಿ ಬೇರೂರಿರುವ ಹಣಕಾಸು ಭ್ರಷ್ಟಾಚಾರ ಆಡಳಿತ ಯಂತ್ರದ ಎಲ್ಲ ಮಜಲುಗಳನ್ನೂ ಆವರಿಸಿದ್ದರೂ ಸಹ ಕರ್ನಾಟಕದಲ್ಲಿ ಯುವ ಸಮೂಹದ ಪ್ರತಿರೋಧ ವ್ಯಕ್ತವಾಗಿಲ್ಲ ಎಂದರೆ ಈ ನಿಷ್ಕ್ರಿಯತೆಯ ಕಾರಣಗಳನ್ನು ಶೋಧಿಸಬೇಕಿದೆ.  “ ಭ್ರಷ್ಟಾಚಾರ ಮುಕ್ತ-ಅಪರಾಧ ಮುಕ್ತ-ದೌರ್ಜನ್ಯ ಮುಕ್ತ ಭಾರತ” ಯಾವುದೇ ಬಂಡವಳಿಗ ಪಕ್ಷಗಳ ಮೂಲ ಪ್ರಣಾಳಿಕೆಯಲ್ಲಿ ಕಾಣುವ ಸಾಧ್ಯತೆಗಳೇ ಇಲ್ಲವಾಗಿವೆ. ಭಾರತ್‌ ಜೋಡೋ ಪಾದಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಈ ಪ್ರಣಾಳಿಕೆಯನ್ನು ಜನತೆಯ ಮುಂದಿಡಬೇಕಿದೆ.

ಸಾಂವಿಧಾನಿಕ ಸಂಸ್ಥೆಗಳ ದುರ್ಬಲೀಕರಣ ಮತ್ತು ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಪರಂಪರೆಗೆ ನಾಂದಿ ಹಾಡಿದ ಕಾಂಗ್ರೆಸ್‌ ತಾನು ಕ್ರಮಿಸಿದ ಹಾದಿಯನ್ನೇ ಗಮನಿಸುತ್ತಾ ಮುನ್ನಡೆದರೆ, ಇಂದು ತಳಸಮುದಾಯಗಳು, ಶೋಷಿತ ಜನತೆ ಎದುರಿಸುತ್ತಿರುವ ಜಟಿಲ ಮತ್ತು ಸಂಕೀರ್ಣ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಅಲ್ಪಸಂಖ್ಯಾತ-ಬಹುಸಂಖ್ಯಾತರ ನಡುವೆ ಜಾತ್ಯತೀತ ಮೌಲ್ಯಗಳನ್ನು ಉತ್ತೇಜಿಸುವುದರ ಬದಲು, ಈ ಸಮಾಜದ ಆಂತರ್ಯದಲ್ಲಿ ಬೇರೂರಿರುವ ಮತಾಂಧತೆ, ಮತೀಯವಾದ ಮತ್ತು ಕೋಮುವಾದವನ್ನು ತುಷ್ಟೀಕರಿಸುವ ಮೂಲಕ ಸಮುದಾಯಗಳ ನಡುವೆ ಕೆಡವಲಾಗದ ಗೋಡೆಗಳನ್ನು ನಿರ್ಮಿಸಿರುವುದು ಕಳೆದ ಐದಾರು ದಶಕಗಳ ರಾಜಕಾರಣದಲ್ಲಿ ಕಾಣಬಹುದಾದ ವಿದ್ಯಮಾನ. ಈ ಪ್ರಕ್ರಿಯೆಯಲ್ಲಿ ತನ್ನ ಪಾತ್ರವೇನು ? ತಾನು ಎಡವಿರುವುದು ಎಲ್ಲಿ ? ತನ್ನ ವೈಫಲ್ಯಗಳೇನು ? ಈ ಪ್ರಶ್ನೆಗಳಿಗೆ ಕಾಂಗ್ರೆಸ್‌ ಆತ್ಮಾವಲೋಕನದ ಮೂಲಕ ಉತ್ತರ ಕಂಡುಕೊಳ್ಳಬೇಕಿದೆ. ಅಧಿಕಾರ ರಾಜಕಾರಣದ ಅನಿವಾರ್ಯತೆಗಳಿಗಾಗಿ, ಸೌಹಾರ್ದತೆ, ಸೋದರತ್ವ ಮತ್ತು ಸಮನ್ವಯದ ನೆಲೆಗಳನ್ನು ಶಿಥಿಲಗೊಳಿಸಿರುವ, ಭ್ರಷ್ಟಗೊಳಿಸಿರುವ ಹೆಜ್ಜೆ ಗುರುತುಗಳನ್ನು ಅಳಿಸಿಹಾಕಲಾಗುವುದಿಲ್ಲ. ಇದನ್ನು ಅವಲೋಕಿಸಿ ಸರಿಪಡಿಸುವ ಮೂಲಕ ಭವಿಷ್ಯದ ಭಾರತಕ್ಕೆ ಈ ಸಾಂವಿಧಾನಿಕ ಮೌಲ್ಯಗಳನ್ನು ಬುನಾದಿಯಾಗಿ ನೀಡುವ ಸಂಕಲ್ಪದೊಂದಿಗೆ ಕಾಂಗ್ರೆಸ್‌ ತನ್ನ ಜೋಡಣೆಯ ಯಾತ್ರೆಯನ್ನು ಮುನ್ನಡೆಸಬೇಕಿದೆ.

ಅಲ್ಪಸಂಖ್ಯಾತ-ಬಹುಸಂಖ್ಯಾತ ಅಥವಾ ಹಿಂದೂ-ಮುಸ್ಲಿಂ ಎಂಬ ಸರಳೀಕರಿಸಿದ ಸಾಂಸ್ಕೃತಿಕ ನೆಲೆಗಳಲ್ಲಿ ಈ ಸಮುದಾಯಗಳ ಬಹುಸಂಖ್ಯೆಯ ಜನತೆ ಮತೀಯ –ಕೋಮುವಾದಿ ರಾಜಕಾರಣದಿಂದ ಹೊರತಾಗಿಯೇ ಇರುತ್ತಾರೆ. ಈ ಬಾಹ್ಯ ಜಗತ್ತಿನೊಳಗಿನ ಸಂವೇದನಾಶೀಲತೆಯನ್ನು ಪುನಶ್ಚೇತನಗೊಳಿಸುವ ಪ್ರಕ್ರಿಯೆಗೆ ಈಗ ಚಾಲನೆ ನೀಡಬೇಕಿದೆ. ತನ್ನ ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ಈ ನಿಟ್ಟಿನಲ್ಲಿ ಸಂಕಲ್ಪ ತೊಡಲು ಸಾಧ್ಯವೇ ? ಇದು ಸಾಧ್ಯವಾಗಬೇಕಾದರೆ ಕಾಂಗ್ರೆಸ್‌ ತನ್ನ ಹಿಂದಿನ ಹೆಜ್ಜೆಗಳನ್ನು ಮರುವಿಮರ್ಶೆಗೊಳಪಡಿಸಬೇಕಾಗುತ್ತದೆ. ಮನಮೋಹನ್‌ ಸಿಂಗ್‌ ಯುಗಕ್ಕೆ ಹಿಂದಿರುಗುವುದು ದುಸ್ತರವಾದರೂ,  ಯುಪಿಎ ಆರ್ಥಿಕನೀತಿಗಳ ಮುಂದುವರಿಕೆಯಾಗಿ ಇಂದು ಎದುರಾಗುತ್ತಿರುವ ಸಾರ್ವಜನಿಕ ಸಂಪತ್ತು ಮತ್ತು ಉದ್ದಿಮೆಗಳ ನಗದೀಕರಣಕ್ಕೆ ತಡೆಯೊಡ್ಡಲು ಕಾಂಗ್ರೆಸ್‌ ಸಿದ್ಧವಾಗಿದೆಯೇ ? ಈ ನೀತಿಗಳಿಂದಲೇ ಹೆಚ್ಚಾಗುತ್ತಿರುವ ಜನಾಕ್ರೋಶವನ್ನು ದಮನಿಸಲು ಬಳಸುತ್ತಿರುವ ಕರಾಳ ಶಾಸನಗಳನ್ನು ಅಂತ್ಯಗೊಳಿಸಲು ಕಾಂಗ್ರೆಸ್‌ ಕಟಿಬದ್ಧವಾಗಿದೆಯೇ ? ರಾಜಕೀಯ ಮತ್ತು ಹಣಕಾಸು ಭ್ರಷ್ಟಾಚಾರವನ್ನು ಕೊನೆಗಾಣಿಸಲು ಲೋಕಪಾಲ್‌ನಂತಹ ಕಠಿಣ ಕಾಯ್ದೆಗಳನ್ನು ಜಾರಿಗೊಳಿಸಲು ಸಜ್ಜಾಗಿದೆಯೇ ?

ಮುಂದುವರೆದಂತೆ, ಮಹಿಳಾ ಸಮಾನತೆ ಮತ್ತು ಸಬಲೀಕರಣದ ಹಾದಿಯಲ್ಲಿ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸುವುದೇ ? ಪ್ರತಿನಿತ್ಯ ದೌರ್ಜನ್ಯ ಮತ್ತು ಅತ್ಯಾಚಾರಕ್ಕೊಳಗಾಗುತ್ತಿರುವ ಅಸಹಾಯಕ ಮಹಿಳೆಯರ ರಕ್ಷಣೆಗಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವೇದನೆಯನ್ನು ಮೂಡಿಸುವ ಪ್ರಯತ್ನಗಳನ್ನು ಕಾಂಗ್ರೆಸ್‌ ಪಕ್ಷ ಮಾಡಲು ಸಾಧ್ಯವೇ ? (ಮುರುಘಾ ಮಠದ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರ ಮೌನ ಈ ವಿಶ್ವಾಸವನ್ನು ಹುಟ್ಟಿಸುವುದಿಲ್ಲ). ವಿಶ್ವ ಮಾರುಕಟ್ಟೆಗೆ ತೆರೆದುಕೊಳ್ಳುತ್ತಿರುವ ಭಾರತೀಯ ಸಮಾಜದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಮಾಡುತ್ತಿರುವ ಅನಾಹುತಗಳನ್ನು ತಡೆಗಟ್ಟಲು ಪಕ್ಷದ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಯಾವುದು ? ನಗದೀಕರಣಕ್ಕೊಳಗಾಗಿ ಖಾಸಗಿ ಮಾರುಕಟ್ಟೆಯ ವಶವಾಗುತ್ತಿರುವ ದೇಶದ ಅಮೂಲ್ಯ ನೈಸರ್ಗಿಕ-ಮಾನವ ಸಂಪನ್ಮೂಲಗಳು ಮತ್ತು ಉತ್ಪಾದನೆಯ ನೆಲೆಗಳನ್ನು, ಸಾರ್ವಜನಿಕ ವಲಯದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್‌ ಪಣ ತೊಡಲು ಸಾಧ್ಯವೇ ? ಸಾಮಾಜಿಕ ನ್ಯಾಯದಿಂದ ವಂಚಿತರಾಗಿ, ಸಾಂಸ್ಕೃತಿಕ ಸಮಾನತೆ ಮತ್ತು ಘನತೆಯನ್ನೂ ಕಳೆದುಕೊಳ್ಳುತ್ತಿರುವ ತಳಮಟ್ಟದ ದಲಿತ-ಅಸ್ಪೃಶ್ಯ-ಬುಡಕಟ್ಟು-ಅಲ್ಪಸಂಖ್ಯಾತ-ಮಹಿಳಾ ಸಮುದಾಯಗಳಿಗೆ ಸುಭದ್ರ ನೆಲೆಯನ್ನು ಕಲ್ಪಿಸಲು ಕಾಂಗ್ರೆಸ್‌ನ ಭಾರತ್‌ ಜೋಡೋ ರಥದಲ್ಲಿರುವ ಅಸ್ತ್ರಗಳಾದರೂ ಯಾವುದು?

ಈ ಜಟಿಲ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ, ವಸ್ತುನಿಷ್ಠತೆಯಿಂದ, ಸಂವಿಧಾನ ಬದ್ಧತೆಯೊಂದಿಗೆ ಉತ್ತರಿಸುವುದು ಭಾರತ್‌ ಜೋಡೋ ಯಾತ್ರೆಯ ಮುಂಚೂಣಿಯಲ್ಲಿರುವ ಕಾಂಗ್ರೆಸ್‌ ನಾಯಕರ ಆದ್ಯತೆ ಮತ್ತು ಜವಾಬ್ದಾರಿಯಾಗಿದೆ. ಈ ಉತ್ತರಗಳನ್ನು ಆಡಳಿತಾರೂಢ ಬಿಜೆಪಿಯಿಂದ ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಹಿಂದುತ್ವ ರಾಜಕಾರಣ ಕಾರ್ಪೋರೇಟ್‌ ಕೇಂದ್ರಿತವಾಗಿರುವುದನ್ನು ನಿರ್ಭಿಡೆಯಿಂದ ಘೋಷಿಸಿಕೊಂಡಿದೆ. ಜನಮನ್ನಣೆಯನ್ನೂ ಪಡೆದಿದೆ. ತನ್ನ ಮತೀಯ ರಾಜಕಾರಣದ ನೆಲೆಗಳನ್ನೂ ಸಹ ಹಿಂದುತ್ವ ರಾಜಕಾರಣ ಯಾವುದೇ ಹಿಂಜರಿಕೆಯಿಲ್ಲದೆ ಸಂರಕ್ಷಿಸಿಕೊಂಡುಬಂದಿದೆ. ಆದರೆ ಬಹುತ್ವ ಭಾರತವನ್ನು ಶಿಥಿಲಗೊಳಿಸುವ ಈ ಪ್ರಕ್ರಿಯೆಯನ್ನು ತಡೆಗಟ್ಟುವುದು ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಎಲ್ಲ ಪಕ್ಷಗಳ ಆದ್ಯತೆಯಾಗಬೇಕಿದೆ. ಇಂದು ನಿರಂತರವಾಗಿ ಶಿಥಿಲವಾಗುತ್ತಿರುವ ಸಾಂವಿಧಾನಿಕ ಮೌಲ್ಯಗಳು ಮತ್ತು ಕಣ್ಮರೆಯಾಗುತ್ತಿರುವ ಸಾಂವಿಧಾನಿಕ ನೈತಿಕತೆಯನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಜನಸಮೂಹಗಳನ್ನು ಕ್ರೋಢೀಕರಿಸಬೇಕಿದೆ. ಆಗ ಮಾತ್ರವೇ ಸ್ತ್ರೀ ಸಂವೇದನೆ, ಜಾತಿ ವಿನಾಶ, ಮಹಿಳಾ ಸಬಲೀಕರಣ, ಸೌಹಾರ್ದತೆ ಮತ್ತು ಸಮನ್ವಯತೆ, ಸೋದರತ್ವ ಹಾಗೂ ಸಾಮಾಜಿಕಾರ್ಥಿಕ ಸಮಾನತೆಗಳ ಸಾಂವಿಧಾನಿಕ ಆಶಯಗಳು ಕೈಗೂಡಲು ಸಾಧ್ಯ.

ಈ ಕೈಗೂಡುವಿಕೆಗೆ ಭಾರತ್‌ ಜೋಡೋ ಯಾತ್ರೆ ಕೈಜೋಡಿಸಲು ಸಾಧ್ಯವೇ ? ತನ್ನ 3500 ಕಿಲೋಮೀಟರ್‌ ನಡಿಗೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಸುತ್ತಲಿನ ಪೊರೆಯನ್ನು ಕಳಚಿಕೊಂಡು, ಆಂತರಿಕ ಮಾಲಿನ್ಯಗಳನ್ನು ಕಳೆದುಕೊಂಡು, ಇಟ್ಟ ತಪ್ಪು ಹೆಜ್ಜೆಗಳನ್ನು ಒಪ್ಪಿಕೊಂಡು , ಎಸಗಿದ ಪ್ರಮಾದಗಳನ್ನು ಸರಿಪಡಿಸಿಕೊಂಡು, 2500 ವರ್ಷಗಳ ಭಾರತೀಯ ಬಹುಸಾಂಸ್ಕೃತಿಕ ಸಮನ್ವಯ ಪರಂಪರೆಯನ್ನು ಎತ್ತಿಹಿಡಿಯಲು ಸಜ್ಜಾಗುವ ಅನಿವಾರ್ಯತೆ ಇಂದು ಎದುರಾಗಿದೆ. ಕಾಂಗ್ರೆಸ್‌ ಪಕ್ಷದ ಭಾರತ್‌ ಜೋಡೋ ಯಾತ್ರೆಯನ್ನು ಸ್ವಾಗತಿಸಿ, ಸಂಭ್ರಮಿಸುತ್ತಿರುವ ಎಲ್ಲ ಪರ-ವಿರೋಧಿ ಮನಸುಗಳ ಆಶಯವೂ ಇದೇ ಆಗಿರಲಿಕ್ಕೆ ಸಾಧ್ಯ. ಭಾರತ್‌ ಜೋಡೋ ಯಾತ್ರೆಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ.

Previous Post

ಗೂಗಲ್‌ ಮ್ಯಾಪ್‌ನಲ್ಲೂ ಬೆಂಗಳೂರಿನ ಮಾನ ಹರಾಜು!!

Next Post

ವಿದ್ಯುತ್‌ ದರ ಏರಿಕೆಗೆ ಎಸ್ಕಾಂ ನಿರ್ಧಾರ: 43 ಪೈಸೆ ಹೆಚ್ಚಳ?

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025
Next Post
ದೇಶದಲ್ಲಿ ಕಲ್ಲಿದಲ್ಲು ಕೊರತೆ: 8 ಗಂಟೆ ವಿದ್ಯುತ್‌‌ ಪೂರೈಕೆ ಕಡಿತ!

ವಿದ್ಯುತ್‌ ದರ ಏರಿಕೆಗೆ ಎಸ್ಕಾಂ ನಿರ್ಧಾರ: 43 ಪೈಸೆ ಹೆಚ್ಚಳ?

Please login to join discussion

Recent News

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
Top Story

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada