• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಭಾರತ್‌ ಜೋಡೋ-ಜೋಡಿಸದೆ ಹೋದ ಸುಡು ವಾಸ್ತವಗಳು

ನಾ ದಿವಾಕರ by ನಾ ದಿವಾಕರ
January 28, 2023
in ಅಂಕಣ
0
ಭಾರತ್‌ ಜೋಡೋ-ಜೋಡಿಸದೆ ಹೋದ ಸುಡು ವಾಸ್ತವಗಳು
Share on WhatsAppShare on FacebookShare on Telegram
ದೇಶದುದ್ದಕ್ಕೂ ಕಾಣುವ ತಳಮಟ್ಟದ ಹತಾಶೆ ಆತಂಕಗಳನ್ನು ದಾಖಲಿಸುವ ಅವಕಾಶವಿತ್ತು

ರಾಹುಲ್‌ ಗಾಂಧಿ ಬಹಳ ಮಹತ್ವಾಕಾಂಕ್ಷೆಯೊಂದಿಗೆ ಕೈಗೊಂಡಿರುವ 3500 ಕಿಲೋಮೀಟರ್‌ ವ್ಯಾಪ್ತಿಯ ಭಾರತ್‌ ಜೋಡೋ ಯಾತ್ರೆ ಶೀಘ್ರದಲ್ಲೇ ಸಮಾರೋಪಗೊಳ್ಳಲಿದೆ. ತಮ್ಮ ಯಾತ್ರೆಯುದ್ದಕ್ಕೂ ರಾಹುಲ್‌ ಏನನ್ನು ಸಾಧಿಸಿದ್ದಾರೆ ಎಂಬ ಪ್ರಶ್ನೆಯನ್ನು ಚುನಾವಣಾ ರಾಜಕಾರಣದ ಚೌಕಟ್ಟಿನಿಂದ ಹೊರಬಂದು ನೋಡಿದಾಗ, ಅಲ್ಲಲ್ಲಿ ಕೆಲವು ಮಿಂಚುಹುಳುಗಳು ಕಾಣಲು ಸಾಧ್ಯ. ರಾಹುಲ್‌ ಗಾಂಧಿಯ ಮುಂದೆ ಪ್ರಧಾನವಾಗಿ ಇದ್ದ ಸವಾಲುಗಳು ಎರಡು. ಮೊದಲನೆಯದು ಸ್ವಾತಂತ್ರ್ಯಾನಂತರ ಮೊಟ್ಟಮೊದಲ ಬಾರಿ ತನ್ನ ಮೂಲ ಅಸ್ತಿತ್ವವನ್ನು ಮತ್ತು ಕೆಲವು ಸಂದರ್ಭಗಳಲ್ಲಿ ವರ್ಚಸ್ಸನ್ನೂ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷದ ಪುನರುತ್ಥಾನ. ಎರಡನೆಯದು ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷವು ತನ್ನದೇ ಆದ ಪ್ರಮಾದಗಳಿಂದ ಕಳೆದುಕೊಂಡಿರುವ ಜನಸಂಪರ್ಕವನ್ನು ಮರಳಿ ಪಡೆಯುವುದು

ADVERTISEMENT

ಈ ಎರಡರಲ್ಲಿ ರಾಹುಲ್‌ ಯಾವುದರಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ಪ್ರಶ್ನೆಗೆ ತಕ್ಷಣವೇ ಉತ್ತರ ದೊರೆಯುವ ಸಾಧ್ಯತೆಗಳಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಫಲಿತಾಂಶಗಳು, ಸೋಲು ಅಥವಾ ಗೆಲುವು, ಅಧಿಕಾರ ಗ್ರಹಣದ ಸಂದರ್ಭದಲ್ಲಿ ನಿರ್ಣಾಯಕವಾಗುವುದಾದರೂ, ಮೂಲತಃ ತಳಮಟ್ಟದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮ ನಿತ್ಯ ಬದುಕಿಗಾಗಿ ಆಡಳಿತ ವ್ಯವಸ್ಥೆಯತ್ತ ಸದಾ ನೋಡುತ್ತಲೇ ಇರುವ ಸಾಮಾನ್ಯ ಜನತೆಯ ನಿರೀಕ್ಷೆ, ಆಕಾಂಕ್ಷೆ, ಅಪೇಕ್ಷೆಗಳು ಮತ್ತು ಇವುಗಳು ಈಡೇರದೆ ಹೋದಾಗ ಉಂಟಾಗುವಂತಹ ಹತಾಶೆ, ನಿರಾಸೆ ಮತ್ತು ಆತಂಕಗಳು ಮುಖ್ಯವಾಗುತ್ತವೆ. ರಾಹುಲ್‌ ಯಾತ್ರೆಯು 2024ರ ಮಹಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎನ್ನುವುದಕ್ಕಿಂತಲೂ, ದೇಶದ ದುಡಿಯುವ ವರ್ಗಗಳು, ಮಹಿಳೆಯರು, ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ಶೋಷಿತ ದಲಿತ ಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ರಾಹುಲ್‌ ಎಷ್ಟರ ಮಟ್ಟಿಗೆ ಗ್ರಹಿಸಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.

ದೇಶದುದ್ದಕ್ಕೂ ಭಾರತ್‌ ಜೋಡೋ ಯಾತ್ರೆಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ಸಹಜವಾದುದೇ. ಏಕೆಂದರೆ ದೇಶದ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯ ಸೂಚ್ಯಂಕಗಳು ಏನೇ ಹೇಳಿದರೂ, ತಳಸ್ತರದ ಸಮುದಾಯಗಳು ಎದುರಿಸುತ್ತಿರುವ ಜಟಿಲ ಸಿಕ್ಕುಗಳು ಇನ್ನೂ ಸಂಕೀರ್ಣವಾಗುತ್ತಿವೆ. ಈ ಸಿಕ್ಕುಗಳಲ್ಲಿ ಸಿಲುಕಿ, ಪಾರಾಗುವ ಮಾರ್ಗವನ್ನೂ ಕಾಣದೆ, ಭವಿಷ್ಯದತ್ತ ಮುಖ ಮಾಡಿ ನಿಂತಿರುವ ಅಪಾರ ಜನಸ್ತೋಮಕ್ಕೆ ದೂರದ ಒಂದು ಪ್ರಣತಿಯೂ ಕತ್ತಲೆಯನ್ನು ದೂರಗೊಳಿಸುವ ಪ್ರಜ್ವಲ ದೀಪದಂತೆ ಕಾಣುತ್ತದೆ. ಜನಸಾಮಾನ್ಯರ ನಡುವೆ, ದೇಶದ ಕೊಳೆಗೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ವಲಸೆ ಕಾರ್ಮಿಕರ ನಡುವೆ, ಅಂಗನವಾಡಿ/ಆಶಾ ಕಾರ್ಯಕರ್ತೆಯರ ನಡುವೆ, ದುಡಿಯುವ ವರ್ಗಗಳ ನಡುವೆ, ನಿತ್ಯ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳಾ ಸಮೂಹದ ನಡುವೆ, ಇಂದಿಗೂ ಅಸ್ಪೃಶ್ಯತೆ ಮತ್ತು ತಾರತಮ್ಯದಿಂದ ಪಾರಾಗದ ದಲಿತ ಸಮುದಾಯಗಳ ನಡುವೆ, ಈ ಜಟಿಲ ಸಿಕ್ಕುಗಳ ಸೂಕ್ಷ್ಮ ಎಳೆಗಳು ಇದ್ದೇ ಇರುತ್ತವೆ. ಈ ಎಳೆಗಳನ್ನು ಶೋಧಿಸುವುದು, ಪ್ರತಿಯೊಂದು ಎಳೆಯ ಆದಿಯನ್ನು ಗ್ರಹಿಸಿ, ಆಳ-ಅಗಲ, ವ್ಯಾಪ್ತಿ ಹರವುಗಳನ್ನು ಶೋಧಿಸುವುದು ಒಬ್ಬ ಜನನಾಯಕನ ಆದ್ಯತೆಯಾಗಿರಬೇಕು. ಇಡೀ ದೇಶವನ್ನು ಕ್ರಮಿಸಿದ ರಾಹುಲ್‌ ಗಾಂಧಿ ಇಲ್ಲಿ ಯಶಸ್ವಿಯಾಗಿದ್ದಾರೆಯೇ ? ಈ ಪ್ರಶ್ನೆಗೆ ಉತ್ತರ ಬೇಕಿದೆ.

ತಪ್ಪಿಹೋದ ಮೈಲಿಗಲ್ಲುಗಳು

ಈ ದೃಷ್ಟಿಯಿಂದ ಯೋಚಿಸಿದಾಗ ರಾಹುಲ್‌ ತಮ್ಮ ಯಾತ್ರೆಯ ಹಾದಿಯಲ್ಲಿ ಗಮನಿಸದೆ ಇರಬಹುದಾದ ವಾಸ್ತವಗಳತ್ತ ನಂತರದಲ್ಲಾದರೂ ನೋಡಬಹುದು. ಇಂದು ಭಾರತ ಪ್ರಗತಿಯ ಹಾದಿಯಲ್ಲಿರುವುದು ನಿಶ್ಚಿತ. ಆರ್ಥಿಕವಾಗಿ ಭಾರತದ ಮಾರುಕಟ್ಟೆ ಜಾಗತಿಕ ಆರ್ಥಿಕತೆಯಲ್ಲಿ ತನ್ನದೇ ಆದ ಪ್ರಧಾನ್ಯತೆಯನ್ನು ಗಳಿಸುತ್ತಿದೆ. ಬಂಡವಾಳಶಾಹಿ ಆರ್ಥಿಕತೆಯ ದೃಷ್ಟಿಯಿಂದ ನೋಡಿದಾಗ, ಭಾರತದ ಅರ್ಥವ್ಯವಸ್ಥೆ ಪ್ರಕಾಶಿಸುತ್ತಿರುವಂತೆಯೇ ಕಾಣುವುದೂ ಸಹಜ. ಜಿಡಿಪಿ ಮತ್ತು ಬಂಡವಾಳಹೂಡಿಕೆಯೇ ನಿರ್ಣಾಯಕವಾಗಿರುವ ನವ ಉದಾರವಾದದ ವಾತಾವರಣದಲ್ಲಿ, ತಳಸ್ತರದ ಯಾವುದೇ ವ್ಯತ್ಯಯಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ʼದೇಶದ ಪ್ರಗತಿಗಾಗಿ ಅನಿವಾರ್ಯʼ ಎನ್ನಲಾಗುವ ತ್ಯಾಗಕ್ಕೆ ದುಡಿಯುವ ವರ್ಗಗಳು ಸದಾ ಸನ್ನದ್ಧರಾಗಿರಬೇಕಾಗುತ್ತದೆ. ಹಾಗಾಗಿಯೇ ಆಕ್ಸ್‌ಫಾಮ್‌ ವರದಿಯಲ್ಲಿ ಉಲ್ಲೇಖವಾಗಿರುವ ತಲ್ಲಣಗೊಳಿಸುವ ಅಂಕಿಅಂಶಗಳೂ ಸಹ ಆಡಳಿತ ವ್ಯವಸ್ಥೆಯನ್ನು ವಿಚಲಿತಗೊಳಿಸುವುದಿಲ್ಲ. ಬಡವ-ಶ್ರೀಮಂತರ ನಡುವಿನ ಅಂತರ ಹಿಗ್ಗಿದಷ್ಟೂ ನಡುವಿನ ಕಂದಕದಲ್ಲಿ ಬಂಡವಾಳದ ಕ್ರೋಢೀಕರಣ ಎಗ್ಗಿಲ್ಲದೆ ಸಾಗುವುದೇ ಬಂಡವಾಳಶಾಹಿ ವ್ಯವಸ್ಥೆಯ ಮೂಲ ಲಕ್ಷಣ.

ಆದರೆ ಈ ಅಂತರವನ್ನು ಸಂಪರ್ಕಿಸುವ ಹಾದಿಯಲ್ಲಿ ಸಮಾಜದಲ್ಲಿ ಕಂಡುಬರುವ ತಾರತಮ್ಯಗಳು, ದೌರ್ಜನ್ಯಗಳು, ಕೊರತೆಗಳು ಮತ್ತು ಇದರಿಂದ ಉದ್ಭವಿಸುವಂತಹ ಬಡತನ, ದಾರಿದ್ರ್ಯ, ನಿರುದ್ಯೋಗ ತತ್ಪರಿಣಾಮವಾಗಿ ಸಮಾಜದ ಒಡಲಲ್ಲೇ ಸೃಷ್ಟಿಯಾಗುವ ಕ್ಷೋಭೆ, ಹಿಂಸೆ, ದೌರ್ಜನ್ಯ, ಅತ್ಯಾಚಾರ ಮತ್ತಿತರ ಪಾತಕ ಪ್ರವೃತ್ತಿಗಳು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವುದು ಒಬ್ಬ ರಾಜಕೀಯ ನಾಯಕನ ಮತ್ತು ಒಂದು ಪಕ್ಷದ ಆದ್ಯತೆಯಾಗಬೇಕು. ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಇವೆಲ್ಲವನ್ನೂ ಕಾಣುತ್ತಲೇ ಮುನ್ನಡೆದಿದ್ದಾರೆ. ಹೇಗೆ ಎಂದು ಎಲ್ಲಿಯೂ ಹೇಳಿಲ್ಲವಾದರೂ ನೋವು ನಿವಾರಕ ಭರವಸೆಯನ್ನೂ ನೀಡುತ್ತಲೇ ಸಾಗಿದ್ದಾರೆ. ಆದರೆ ಯಾವುದೇ ರಾಜ್ಯದಲ್ಲಾದರೂ ಕಾಂಗ್ರೆಸ್‌ ಪಕ್ಷದ ಸ್ಥಳೀಯ ಘಟಕಗಳ ಮೂಲಕ, ಕಾರ್ಯಕರ್ತರ ಮೂಲಕ, ಈ ವ್ಯತ್ಯಯಗಳನ್ನು ದಾಖಲಿಸುವ ಪ್ರಯತ್ನ ನಡೆಸಿದ್ದಾರೆಯೇ ? ಬಹುಶಃ ಭಾರತ್‌ ಜೋಡೋ ಸರಪಣಿಯ ಸಡಿಲ ಕೊಂಡಿ ಇಲ್ಲಿ ಕಾಣುತ್ತದೆ.

ವರ್ತಮಾನ ಭಾರತದ ನಿಜಸ್ಥಿತಿಯನ್ನು ಗ್ರಹಿಸಲು ಆಕ್ಸ್‌ಫಾಮ್‌ ವರದಿಯಂತಹ ಬೌದ್ಧಿಕ ಕಸರತ್ತುಗಳು ಅವಶ್ಯವೇ ಆದರೂ ಅನಿವಾರ್ಯವಾಗಿ ಬೇಕೆಂದಿಲ್ಲ. ಏಕೆಂದರೆ ನಿರ್ಗತಿಕರ ಅಳಲು ಢಾಳಾಗಿ ಕಾಣುತ್ತಲೇ ಇದೆ. ಸೂಕ್ಷ್ಮಮತಿಯ ರಾಜಕಾರಣ ಮತ್ತು ಸಮಾಜಮುಖಿ ಧೋರಣೆ ಇದ್ದರೆ, ಹಾದಿಯುದ್ದಕ್ಕೂ ಕಂಡುಬರುವ ಸುಡು ವಾಸ್ತವಗಳೇ ಅಂತರಾಳವನ್ನು ಬಡಿದೆಬ್ಬಿಸಬಹುದು. ಸಾವಿರಾರು ಜನರ ಅಪ್ಪುಗೆಯ ನಡುವೆ ತಮ್ಮ ಜನಸಂಪರ್ಕದ ಕೊಂಡಿಗಳನ್ನು ಪುನರ್‌ ಸ್ಥಾಪಿಸುವ ಪ್ರಯತ್ನದ ನಡುವೆಯೇ ರಾಹುಲ್‌ ಗಾಂಧಿ, ಇದೇ ಜನಸಮೂಹದ ನಡುವೆ ಇದ್ದಿರಬಹುದಾದ ಅಸಮಾನತೆಯ ಎಳೆಗಳನ್ನು, ಶೋಷಣೆಯ ಆಯಾಮಗಳನ್ನು ಮತ್ತು ಸಾಮಾಜಿಕ-ಸಾಂಸ್ಕೃತಿಕ ತಾರಮತ್ಯಗಳ ಸೂಕ್ಷ್ಮಗಳನ್ನು ಗ್ರಹಿಸಿರಲೇಬೇಕು. ಗ್ರಾಂಥಿಕ ಸೂಚ್ಯಂಕಗಳು, ಆರ್ಥಿಕ ಸಮೀಕ್ಷೆಗಳು ಮತ್ತು ಮಾರುಕಟ್ಟೆ ತಜ್ಞರ ಅಭಿಪ್ರಾಯಗಳನ್ನು ಬದಿಗಿಟ್ಟು ನೋಡಿದಾಗ, ಮುಷ್ಕರ ನಿರತ ಕಾರ್ಮಿಕರು, ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಅತಿಥಿ ಶಿಕ್ಷಕರು/ಉಪನ್ಯಾಸಕರು, ಶಿಕ್ಷಣ ವಂಚಿತರು, ಸೌಲಭ್ಯವಂಚಿತ ಶೋಷಿತ ಸಮುದಾಯದ ವಿದ್ಯಾರ್ಥಿಗಳು, ಸ್ಥಳಾಂತರಿಸಲ್ಪಟ್ಟ ಆದಿವಾಸಿಗಳು, ಭೂಮಿ ಕಳೆದುಕೊಂಡ ರೈತರು, ಅತ್ಯಾಚಾರಕ್ಕೊಳಗಾದ ಮಹಿಳೆಯರು, ಹಲ್ಲೆಗೊಳಗಾದ ಅಮಾಯಕರು ಮತ್ತು ಬಂಡವಾಳಶಾಹಿ ಆರ್ಥಿಕತೆಯ ಪಥದಲ್ಲಿ ಹಾಸುಗಲ್ಲುಗಳಂತೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಅಪಾರ ಜನಸ್ತೋಮ ಇವೆಲ್ಲವೂ ನಮ್ಮ ಕಣ್ಣೆದುರು ನಿಲ್ಲುತ್ತದೆ.

ಜೋಡಣೆಯ ಅದ್ಯತೆಗಳು

ರಾಹುಲ್‌ ತಮ್ಮ ಭಾರತ್‌ ಜೋಡೋ ಯಾತ್ರೆಯಲ್ಲಿ ಜೋಡಿಸಬೇಕಾಗಿದ್ದುದು ಈ ಎಳೆಗಳನ್ನು. ದೇಶಾದ್ಯಂತ ಏಕೆ ಬಡತನ-ದಾರಿದ್ರ್ಯ ಹೆಚ್ಚಾಗುತ್ತಿದೆ ಎನ್ನುವುದಕ್ಕಿಂತಲೂ, “ ಸಾಮಾಜಿಕ ಕ್ಷೋಭೆ ಏಕೆ ತೀವ್ರವಾಗುತ್ತಿದೆ , ಯುವ ಸಮೂಹ ಏಕೆ ಪಾತಕ ಜಗತ್ತಿನತ್ತ ವಾಲುತ್ತಿದೆ, ಅತ್ಯಾಚಾರಗಳು ಏಕೆ ಹೆಚ್ಚಾಗುತ್ತಿವೆ, ಮಹಿಳಾ ದೌರ್ಜನ್ಯ ಏಕೆ  ಉಲ್ಬಣಿಸುತ್ತಿದೆ, ಅಸ್ಪೃಶ್ಯತೆಯ ಹೀನಾಚರಣೆ ಇನ್ನೂ ಏಕೆ ಜೀವಂತವಾಗಿದೆ, ಆದಿವಾಸಿಗಳನ್ನು ಏಕೆ ಒಕ್ಕಲೆಬ್ಬಿಸಲಾಗುತ್ತಿದೆ, ಅರಣ್ಯಗಳು ಏಕೆ ನಾಶವಾಗುತ್ತಿವೆ, ಪರಿಸರ ಮತ್ತು ನಿಸರ್ಗದ ಒಡಲು ಏಕೆ ಮಲಿನವಾಗುತ್ತಿದೆ/ಖಾಲಿಯಾಗುತ್ತಿದೆ,  ದೇಶದ ಸಾರ್ವಜನಿಕ ಸಂಪತ್ತು ಏಕೆ ಕಾರ್ಪೋರೇಟ್‌ ಪಾಲಾಗುತ್ತಿದೆ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಔದ್ಯಮಿಕ ಯಜಮಾನಿಕೆ ಏಕೆ ಗಟ್ಟಿಯಾಗುತ್ತಿದೆ , 70 ವರ್ಷಗಳ ಕಾಲ ಈ ದೇಶದ ಕೋಟ್ಯಂತರ ದುಡಿವ ಕೈಗಳು ಕಟ್ಟಿದ ಸುಭದ್ರ ಕೋಟೆಗಳು- ಸಾರ್ವಜನಿಕ ಉದ್ದಿಮೆಗಳು- ಏಕೆ ಕಾರ್ಪೋರೇಟ್‌ ಮಾರುಕಟ್ಟೆಯ ವಶವಾಗುತ್ತಿವೆ , ಅವಕಾಶವಂಚಿತ-ಅಂಚಿನಲ್ಲಿರುವ ಸಮುದಾಯಗಳೇಕೆ ಇನ್ನೂ ದೂಡಲ್ಪಡುತ್ತಿವೆ ” ಈ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ರಾಹುಲ್‌ ಗಾಂಧಿಯ ಮತ್ತು ಭಾರತ್‌ ಜೋಡೋ ಯಾತ್ರೆಯ ಆದ್ಯತೆಯಾಗಬೇಕಿತ್ತು.

ಈ ಎಲ್ಲ ಸಿಕ್ಕುಗಳಿಗೂ ಮೂಲವನ್ನು ಹುಡುಕುತ್ತಾ ಹೋದರೆ ಸ್ವತಃ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷ ಉತ್ತರದಾಯಿಯಾಗುವುದು ಸಹಜ. ಕೋಮುವಾದ, ಮತಾಂಧತೆ, ಭಯೋತ್ಪಾದನೆ ಮತ್ತಿತರ ಸಮಸ್ಯೆಗಳನ್ನು ಬದಿಗೊತ್ತಿ ನೋಡಿದಾಗಲೂ, ಈ ಸಮಸ್ಯೆಗಳು ಭಾರತವನ್ನು ನಿರಂತರವಾಗಿ ಕಾಡುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅಥವಾ ಈ ಸಮಸ್ಯೆಗಳಿಗೆ ಇಂದಿನ ಆಡಳಿತ ವ್ಯವಸ್ಥೆಯೊಂದೇ ಕಾರಣವೂ ಅಲ್ಲ. ಇವು ಉಲ್ಬಣಿಸಿರುವ ಕ್ಯಾನ್ಸರ್‌ ಗಡ್ಡೆಯಂತೆ, ವ್ಯವಸ್ಥಿತವಾಗಿ ಬೆಳೆಯುತ್ತಲೇ ಬಂದಿದೆ. ಸಾಂವಿಧಾನಿಕವಾಗಿ ಲಭ್ಯವಿರುವ ಚಿಕಿತ್ಸಕ ಗುಣಗಳ ಹೊರತಾಗಿಯೂ, ಇದನ್ನು ನಿವಾರಿಸಲು ಏಕೆ ಸಾಧ್ಯವಾಗಿಲ್ಲ ? ಈ ಪ್ರಶ್ನೆಗೆ ಕಾಂಗ್ರೆಸ್‌ ಪಕ್ಷವೂ ಉತ್ತರದಾಯಿಯಾಗಿದೆ. ಏಕೆಂದರೆ ನವ ಉದಾರವಾದ, ಕಾರ್ಪೋರೇಟ್‌ ಮಾರುಕಟ್ಟೆಯ ಆರ್ಥಿಕತೆ, ಅಸೀಮಿತ ಖಾಸಗೀಕರಣ ಹಾಗೂ ಇದರ ಬುನಾದಿಯ ಮೇಲೆ ಪ್ರವರ್ಧಮಾನಕ್ಕೆ ಬಂದಿರುವ ಬಲಪಂಥೀಯ ರಾಜಕಾರಣ ಇವೆಲ್ಲವನ್ನೂ ಶೋಧಿಸದೆ ಹೋದರೆ, ಉತ್ತರಗಳು ಹೊಳೆಯುವುದಿಲ್ಲ.

ಶೋಷಿತರು, ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಭದ್ರತೆಯನ್ನು, ಶೋಷಿತ ಸಮುದಾಯಗಳು ಎದುರಿಸುತ್ತಿರುವ ಅಪಮಾನಗಳನ್ನು, ಮಹಿಳೆಯರು ಎದುರಿಸುತ್ತಿರುವ ಯಜಮಾನಿಕೆಯ ಸವಾಲುಗಳನ್ನು, ಬಡ ಜನತೆ ಎದುರಿಸುತ್ತಿರುವ ಹಸಿವೆ ಮತ್ತು ಕೊರತೆಗಳನ್ನು ಅರ್ಥಮಾಡಿಕೊಳ್ಳಲು ಬೌದ್ಧಿಕ ಸಮೀಕ್ಷೆಯಂತಹ ಕಸರತ್ತುಗಳೊಂದೇ ಮಾರ್ಗವಲ್ಲ. ತಳಮಟ್ಟದಲ್ಲಿ ಆಳಕ್ಕಿಳಿದು, ಜನಸಮುದಾಯಗಳ ನಡುವೆ ನಿಂತು ಸುತ್ತಲಿನ ವಾತಾವರಣವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಇವೆಲ್ಲವೂ ಅರ್ಥವಾಗುತ್ತದೆ. ಬಹುಶಃ ರಾಹುಲ್‌ ಗಾಂಧಿ ತಮ್ಮ ಭಾರತ್‌ ಜೋಡೋ ಯಾತ್ರೆಯ ಮಾರ್ಗದಲ್ಲಿ ಇವೆಲ್ಲವನ್ನೂ ಕಂಡಿರಲಿಕ್ಕೂ ಸಾಕು. ಏಕೆ ಇವೆಲ್ಲವನ್ನೂ ದಾಖಲಿಸಲಾಗಿಲ್ಲ ? ಒಂದು ವೇಳೆ ಕಾಂಗ್ರೆಸ್‌ ಪಕ್ಷವೇ ತನ್ನ ಕಾರ್ಯಕರ್ತರ ಮೂಲಕ ಇವೆಲ್ಲ ಅಸಮಾನತೆಯ ಎಳೆಗಳನ್ನೂ ಪೋಣಿಸಿ ದಾಖಲಿಸಿದ್ದರೆ, ಆಕ್ಸ್‌ಫಾಮ್‌ ವರದಿ ಬಹುಶಃ ಪೂರಕವಾಗಿ ಕಾಣುತ್ತಿತ್ತೇನೋ ! ಇದಕ್ಕೆ ಕಾಂಗ್ರೆಸ್‌ ಪಕ್ಷದ ವತಿಯಿಂದ ಸಾಮಾಜಿಕ ಬಂಡವಾಳ ಹೂಡಿಕೆಯ ಅವಶ್ಯಕತೆ ಇರುವಷ್ಟೇ, ಸಾಮಾಜಿಕ ಕಾಳಜಿ ಮತ್ತು ಬದ್ಧತೆಯೂ ಬೇಕಾಗುತ್ತದೆ. ಅಪಾರ ಸಂಖ್ಯೆಯ ಕಾರ್ಯಕರ್ತರ ಮಾನವ ಸಂಪನ್ಮೂಲ ಮತ್ತು ಹಣಕಾಸು ಬಂಡವಾಳವನ್ನು ಹೊಂದಿರುವ ಕಾಂಗ್ರೆಸ್‌ ಪ್ರತಿಯೊಂದು ರಾಜ್ಯದಲ್ಲೂ ಇಂತಹ ಒಂದು ಲಿಖಿತ ದಾಖಲೆಗಳನ್ನು ಸಿದ್ಧಪಡಿಸಿದ್ದರೆ, ಬಹುಶಃ ಸಾಮಾನ್ಯ ಜನತೆಗೆ ವರ್ತಮಾನದ ವಾಸ್ತವಗಳ ಪರಿಚಯವಾಗುತ್ತಿತ್ತು.

ತಮ್ಮ ಪಯಣದ ಹಾದಿಯಲ್ಲಿ ಎದುರಾದ ಮತ್ತು ಕೇಳಿಬಂದ ಅತ್ಯಾಚಾರ, ದೌರ್ಜನ್ಯಗಳ ಬಗ್ಗೆಯೂ ರಾಹುಲ್‌ ಗಂಭೀರವಾದ ಪ್ರತಿಕ್ರಿಯೆ ನೀಡಿರಬಹುದಾದರೂ ತಮ್ಮ ತಾತ್ವಿಕ ಪ್ರತಿರೋಧವನ್ನು ತೋರುವಲ್ಲಿ ಸಫಲರಾಗಿಲ್ಲ . ತಮಿಳುನಾಡಿನ ವೆಂಗವಯಿಲ್‌ ಗ್ರಾಮದಲ್ಲಿ ದಲಿತರ ಕಾಲೋನಿಯಲ್ಲಿನ ಕುಡಿವ ನೀರಿನ ಟ್ಯಾಂಕಿನಲ್ಲಿ ಮಲ ಸುರಿದ ಘಟನೆ, ದೆಹಲಿಯಲ್ಲಿ ನಡೆದ ಶ್ರದ್ಧಾವಾಲ್ಕರ್‌ ಪ್ರಕರಣ, ಕರ್ನಾಟಕದ ಹಲವೆಡೆ ನಡೆದ ಅಸ್ಪೃಶ್ಯತೆಯ ಪ್ರಕರಣಗಳು, ಯುವ ಸಮೂಹದ ನಡುವೆಯೇ ಹೆಚ್ಚಾಗುತ್ತಿರುವ ಆತ್ಮಹತ್ಯೆಯ ಪ್ರವೃತ್ತಿ, ಹಿಂಸಾತ್ಮಕ ಧೋರಣೆ ಮತ್ತು ತತ್ಸಂಬಂಧಿ ಹತ್ಯೆಗಳು, ಹೆಚ್ಚಾಗುತ್ತಿರುವ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ಈ ಎಲ್ಲ ಬೆಳವಣಿಗೆಗಳಿಗೂ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಅಭದ್ರತೆ, ಅಸಮಾನತೆ ಮತ್ತು ಅನಿಶ್ಚಿತತೆಗೂ ಸೂಕ್ಷ್ಮ ಸಂಬಂಧಗಳಿರುವುದನ್ನು ಭಾರತ್‌ ಜೋಡೋ ಯಾತ್ರೆಯ ವೇಳೆ ಗಮನಿಸಬಹುದಿತ್ತು. ಯುವ ಸಮೂಹದಲ್ಲಿನ ಹತಾಶೆಗೆ, ಪುರುಷಾಧಿಪತ್ಯ-ಮತೀಯವಾದ-ಮತಾಂಧತೆ ಮತ್ತು ಜಾತಿ ಶ್ರೇಷ್ಠತೆ ಇವೆಲ್ಲಕ್ಕೂ ಸಮಾಜವು ಸೃಷ್ಟಿಸುವ ಅಸಮಾನತೆ, ತಾರತಮ್ಯ ಮತ್ತು ವಂಚಿತ ಅವಕಾಶಗಳೂ ಕಾರಣವಾಗಿರುತ್ತವೆ.

ತಮ್ಮ ಭಾರತ್‌ ಜೋಡೋ ಯಾತ್ರೆಯುದ್ದಕ್ಕೂ ಕಂಡಿರಲೇಬೇಕಾದ ಈ ವಿದ್ಯಮಾನಗಳನ್ನು ದಾಖಲಿಸಲು ಯುವ ಸಮುದಾಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಯೋಚಿಸಬಹುದಿತ್ತು. ಬಹುಶಃ ಸಾಮಾಜಿಕ ಬಂಡವಾಳ ಹೂಡಿಕೆಯ ಸದವಕಾಶವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದೆ ಎಂದೇ ಹೇಳಬಹುದು.

Tags: Congress Party
Previous Post

| CM BOMMAI ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಭೂಮಿ ಪೂಜೆ | ಸಿಎಂ ಬೊಮ್ಮಾಯಿ |

Next Post

MERK CARD SCAM | ವಿ.ವಿ ಗಳ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ, 6ಸಾವಿರಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್ಗಳ ವಶ | SCAM |

Related Posts

Top Story

ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು “ನಿದ್ರಾದೇವಿ Next Door” ಚಿತ್ರದ “ನೀ ನನ್ನ” ಎಂಬ ರೊಮ್ಯಾಂಟಿಕ್ ಸಾಂಗ್.

by ಪ್ರತಿಧ್ವನಿ
July 8, 2025
0

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ & ರಿಷಿಕಾ ನಾಯಕ - ನಾಯಕಿಯಾಗಿ ನಟಿಸಿರುವ "ನಿದ್ರಾದೇವಿ next door"...

Read moreDetails

Narendra Modi: ಭಾರತದಲ್ಲಿ ಪ್ರೆಸ್‌ ಸೆನ್ಸಾರ್‌ಶಿಪ್‌ ಖಾತೆಗಳನ್ನು ನಿಷೇಧಿಸಲು ಆದೇಶ ಹೊರಡಿಸಿಲ್ಲ: ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

July 8, 2025

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025

Sri Ramulu:‌ ಮೋದಿಗೆ ಟಕ್ಕರ್ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ..!!

July 8, 2025
Next Post
MERK CARD SCAM | ವಿ.ವಿ ಗಳ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ, 6ಸಾವಿರಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್ಗಳ ವಶ | SCAM |

MERK CARD SCAM | ವಿ.ವಿ ಗಳ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ, 6ಸಾವಿರಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್ಗಳ ವಶ | SCAM |

Please login to join discussion

Recent News

Top Story

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

by ಪ್ರತಿಧ್ವನಿ
July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 
Top Story

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

by Chetan
July 9, 2025
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 
Top Story

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

by Chetan
July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 
Top Story

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

by Chetan
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada