ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನದ ಹಿಂದೆ ನಡೆದ ಟ್ರಾನ್ಸ್ ಫಾರ್ಮರ್ ದುರಂತದ ಬೆನ್ನಲ್ಲೆ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತುದೆ. ನಗರದಲ್ಲಿ ಅಪಾಯದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇಯನ್ನ ಬೆಸ್ಕಾಂ ಆರಂಭಿಸಿದ್ದು, ಈ ಮೂಲಕ ಟ್ರಾನ್ಸ್ ಫಾರ್ಮರ್ ಗಳಿಂದ ಸಂಭವಿಸಬಹುದಾದಂತ ದುರಂತಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಅಪಾಯದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಬದಲಾವಣೆಗೆ ಸರ್ವೇ ಆರಂಭಿಸಿದ ಬೆಸ್ಕಾಂ !
ಕಳೆದ ಬುಧವಾರ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬೆಂಗಳೂರಿನ ಮಂಗನಹಳ್ಳಿ ಬಳಿ ಹಂಪ್ ಹತ್ತಿರ ವಾಹನದ ವೇಗ ತಗ್ಗಿಸಿದ ಸಂದರ್ಭದಲ್ಲೇ ಅಲ್ಲಿದ್ದ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು, ಅದರಲ್ಲಿನ ಆಯಿಲ್ ಸಮೇತ ಬೆಂಕಿ ಸಿಡಿದು ತಂದೆ ಮಗಳು ಇಬ್ಬರು ದುರಂತವಾಗಿ ಸಾವನ್ನಪಿದ್ದರು. ಈ ಸಾವುಗಳ ಬಳಿಕ ಸದ್ಯ ಬೆಸ್ಕಾಂ ಅಧಿಕಾರಿಗಳು ಇಂತಹ ದುರಂತಗಳನ್ನ ತಪ್ಪಿಸಲು ಮುಂದಾಗಿದ್ದಾರೆ. ನಗರದಲ್ಲಿ ದುರಸ್ತಿ ಮತ್ತು ಕ್ಷಮತೆ ಕಳೆದುಕೊಂಡಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇ ಆರಂಭಿಸಿದ್ದು, ಈ ಸರ್ವೇ ಮೂಲಕ ಸಮಸ್ಯೆ ಇರುವ ಟ್ರಾನ್ಸ್ ಫಾರ್ಮರ್ ಗಳನ್ನ ಪತ್ತೆ ಮಾಡಿ ಅವುಗಳನ್ನ ಬದಲಾಯಿಸಿ ಅವಘಡಗಳನ್ನ ತಪ್ಪಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಅಪಾಯದ ಸ್ಥಿತಿಯಲ್ಲಿ !
ಬೆಂಗಳೂರಿನಲ್ಲಿ ಬರೊಬ್ಬರಿ 4,50,584 ಟ್ರಾನ್ಸ್ ಫಾರ್ಮರ್ ಸೆಂಟರ್ ಗಳಿವೆ. ಇವುಗಳಲ್ಲಿ 25, 63, 100, 250, 500 ಕೆವಿ ಕ್ಯಾಪಸಿಟಿ ಟ್ರಾನ್ಸ್ ಫಾರ್ಮರ್ ಗಳು ಇದ್ದು, ಸದ್ಯದ ಮಾಹಿತಿ ಪ್ರಕಾರ ನಗರದಾದ್ಯಂತ 100 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಅಪಾಯ ತಂದೊಡ್ಡಬಲ್ಲ ಪರಿಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ 25 ಮತ್ತು 15 ವರ್ಷದ ಹಳೆಯ 1000 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಡೇಂಜರ್ ಹಂತದಲ್ಲಿವೆ. ಜೊತೆಗೆ 27,830 ಅಧಿಕ ಟ್ರಾನ್ಸ್ ಫಾರ್ಮರ್ ವಿಫಲವಾಗಿವೆ. ಇವೆಲ್ಲ ಹಲವು ವರ್ಷಗಳ ಹಳೆದಾದ ಕಾರಣ ಅವುಗಳ ಗುಣಮಟ್ಟ ಪರಿಶೀಲನೆ ಮಾಡಿ, ಅವುಗಳ ಗುಣಮಟ್ಟ ಕ್ಷೀಣಿಸಿದ್ರೆ ಅವುಗಳನ್ನು ಬದಲಾಯಿಸಿ ಮತ್ತಷ್ಟು ಗುಣಮಟ್ಟದ ಟ್ರಾನ್ಸ್ ಫಾರ್ಮರ್ ಹಾಕಲು ಬೆಸ್ಕಾಂ ಚಿಂತನೆ ನಡೆಸಿದೆ.
ಟ್ರಾನ್ಸ್ ಫಾರ್ಮರ್ ಸರ್ವೇ ಬಗ್ಗೆ ಬೆಸ್ಕಾಂ ಟೆಕ್ನಿಕಲ್ ವಿಭಾಗದ ನಿರ್ದೇಶಕ ನಾಗರ್ಜುನ್ ಮಾಹಿತಿ ನೀಡಿದ್ದು, ಈಗಾಗಲೇ ನಗರದಾದ್ಯಂತ ಏಜ್ ಓಲ್ಡ್ ಟ್ರಾನ್ಸ್ ಫಾರ್ಮರ್ ಸರ್ವೇ ಆರಂಭಿಸಿದ್ದೇವೆ. ಸಾಮಾನ್ಯವಾಗಿ ಓವರ್ ಲೋಡ್ ಆದ ಟ್ರಾನ್ಸ್ ಫಾರ್ಮರ್ ಗಳು ಬಳಕೆಗೆ ಬರಲ್ಲ. ಮಳೆ ಸಂಧರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಲೂ ಬೇಗ ಹಾಳಾಗುತ್ತೆ. ಇಂತಹ ಸಮಸ್ಯೆಗಳನ್ನ ಸರ್ವೇ ಮೂಲಕ ಪತ್ತೆ ಮಾಡಲಾಗುತ್ತೆ. ಬಳಿಕ ಅವುಗಳ ಜಾಗಕ್ಕೆ ಉತ್ತಮ ಗುಣಮಟ್ಟದ ಟ್ರಾನ್ಸ್ ಫಾರ್ಮರ್ ಗಳನ್ನ ಅಳವಡಿಕೆ ಮಾಡಲಾಗುತ್ತೆ. ಸರ್ವೇ ಸಂಪೂರ್ಣವಾಗಿ ಇನ್ನೊಂದು ತಿಂಗಳೊಳಗೆ ಮುಕ್ತಾಯವಾಗಲಿದ್ದು ಆ ಬಳಿಕ ತಕ್ಷಣವೇ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದಿದ್ದಾರೆ. ಒಟ್ಟಾರೆ ದುರಂತದ ಬೆನ್ನಲ್ಲೆ ಬೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡಿರೋದು ಸಂತಸದ ವಿಚಾರ. ಆದರೆ ಸದ್ಯ ನಗರದಲ್ಲಿ ಇನ್ನಷ್ಟು ಟ್ರಾನ್ಸ್ ಫಾರ್ಮರ್ ಗಳು ಡೇಂಜರ್ ಪರಿಸ್ಥಿತಿಯಲ್ಲಿದ್ದು ಆದಷ್ಟು ಬೇಗ ಅವುಗಳನ್ನು ಬದಲಾಯಿಸಿ ಆಗಬಹುದಾದ ಅಪಾಯ ತಪ್ಪಿಸಲು ಬೆಸ್ಕಾಂ ತನ್ನ ಸರ್ವೇ ಕೆಲಸವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ.