ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಅವಘಡಗಳಾಗ್ತಿರುವ ಬೆನ್ನಲ್ಲೆ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿರುವ ಹಾಗೆ ಕಾಣುತ್ತಿದೆ. ನಗರದಲ್ಲಿ ಹಾಳಾಗಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇಯನ್ನ ಬೆಸ್ಕಾಂ ಆರಂಭಿಸಿದ್ದು, ಈ ಮೂಲಕ ಟ್ರಾನ್ಸ್ ಫಾರ್ಮರ್ ಗಳಿಂದ ಸಂಭವಿಸಬಹುದಾದಂತ ದುರಂತಗಳಿಗೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗಿದೆ.
ಕಿಶೋರ್ ಸಾವಿನ ಬಳಿಕ ಬೆಸ್ಕಾಂ ಅಧಿಕಾರಿಗಳಿಗೆ ಜನರಿಂದ ತಪರಾಕಿ.!!
ನಗರದಲ್ಲಿ ಪದೇ ಪದೇ ವಿದ್ಯುತ್ ಅವಘಡಗಳಾಗ್ತಿವೆ. ಕಳೆದ ತಿಂಗಳಷ್ಟೇ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಪ್ಪ ಮಗಳು ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ದುರಂತ ಸಾವಿಗೀಡಾಗಿದ್ದರು. ಬಳಿಕ ಮೊನ್ನೆಯಷ್ಟೇ ವಿದ್ಯುತ್ ತಂತಿ ತಗುಲಿ ಯುವಕ ಕಿಶೋರ್ ಪ್ರಾಣ ಕಳೆದುಕೊಂಡ. ಸಿಟಿಯಲ್ಲಿ ನಡೆಯುವ ಇಂತಹ ದುರಂತಗಳನ್ನ ತಪ್ಪಿಸಲು ಬೆಸ್ಕಾಂ ಈಗ ಮುಂದಾಗಿದೆ. ನಗರದಲ್ಲಿ ದುರಸ್ತಿ ಮತ್ತು ಕ್ಷಮತೆ ಕಳೆದುಕೊಂಡಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇ ಆರಂಭಿಸಿದ್ದು, ಈ ಸರ್ವೇ ಮೂಲಕ ಸಮಸ್ಯೆ ಇರುವ ಟ್ರಾನ್ಸ್ ಫಾರ್ಮರ್ ಗಳನ್ನ ಪತ್ತೆ ಮಾಡಿ ಅವುಗಳನ್ನ ಬದಲಾಯಿಸಿ ಅವಘಡಗಳನ್ನ ತಪ್ಪಿಸಲು ಮುಂದಾಗಿದೆ ಬೆಸ್ಕಾಂ. ಜೊತೆಗೆ ಜನರ ಓಡಾಟಕ್ಕೆ ಅಡಚಣೆ ಯಾಗುವ ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಲು ಸಹ ಸಿದ್ಧವಾಗಿದೆ.

ನಗರದಲ್ಲಿದೆ 4 ಲಕ್ಷಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳು.!!
ಬೆಂಗಳೂರಿನಲ್ಲಿ ಬರೊಬ್ಬರಿ 4,50,584 ಟ್ರಾನ್ಸ್ ಫಾರ್ಮರ್ ಸೆಂಟರ್ ಗಳಿವೆ. ಇವುಗಳಲ್ಲಿ 25, 63, 100, 250, 500 KV ಕ್ಯಾಪಸಿಟಿ ಟ್ರಾನ್ಸ್ ಫಾರ್ಮರ್ ಗಳು ಇದ್ದು, ಸದ್ಯದ ಮಾಹಿತಿ ಪ್ರಕಾರ ನಗರದಾದ್ಯಂತ 100 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಶಿಥಿಲ ಪರಿಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ 25 ಮತ್ತು 15 ವರ್ಷದ ಹಳೆಯ 1000 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಅಪಾಯದ ಹಂತದಲ್ಲಿವೆ. ಜೊತೆಗೆ 27,830 ಅಧಿಕ ಟ್ರಾನ್ಸ್ ಫಾರ್ಮರ್ ವಿಫಲವಾಗಿವೆ. ಇವೆಲ್ಲ ಹಲವು ವರ್ಷಗಳ ಹಳೆದಾದ ಕಾರಣ ಅವುಗಳ ಗುಣಮಟ್ಟ ಪರಿಶೀಲನೆ ಮಾಡಿ, ಅವುಗಳ ಗುಣಮಟ್ಟ ಕ್ಷೀಣಿಸಿದ್ರೆ ಅವುಗಳನ್ನು ಬದಲಾಯಿಸಿ ಮತ್ತಷ್ಟು ಗುಣಮಟ್ಟದ ಟ್ರಾನ್ಸ್ ಫಾರ್ಮರ್ ಹಾಕಲು ಬೆಸ್ಕಾಂ ಚಿಂತನೆ ನಡೆಸಿದೆ. ಒಟ್ಟಾರೆ ಆಗುತ್ತಿರುವ ಅವಘಡಗಳಿಗೆ ಬ್ರೇಕ್ ಹಾಕಲು ಬೆಸ್ಕಾಂ ಇಲಾಖೆ ಹೈಅಲರ್ಟ್ ಆಗಿದೆ. ಆದರೆ ಸದ್ಯ ನಗರದಲ್ಲಿ ಇನ್ನಷ್ಟು ಟ್ರಾನ್ಸ್ ಫಾರ್ಮರ್ ಗಳು ಅಪಾಯದ ಪರಿಸ್ಥಿತಿಯಲ್ಲಿದ್ದು ಆದಷ್ಟು ಬೇಗ ಅವುಗಳನ್ನು ಬದಲಾಯಿಸಿ ಆಗುವ ಅಪಾಯ ತಪ್ಪಿಸಲು ಬೆಸ್ಕಾಂ ಮತ್ತಷ್ಟು ವೇಗವಾಗಬೇಕಿದೆ.