ಬೆಂಗಳೂರು: ಜೀವನ್ ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಲೀಲಾ ಪವಿತ್ರಾ (25) ಎಂಬ ಯುವತಿಯನ್ನು ಚಾಕುವಿನಿಂದ 16 ಬಾರಿ ಇರಿದು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿನಕರ್ (28) ಬಂಧಿತ ಆರೋಪಿ.
ಆಂಧ್ರಪ್ರದೇಶದ ಲೀಲಾ ಪವಿತ್ರಾ, ಎಂ.ಎಸ್ಸಿ ಪದವೀಧರೆಯಾಗಿದ್ದು, ಮುರುಗೇಶಪಾಳ್ಯದ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಕಚೇರಿಯಿಂದ ಹೊರಬಂದಾಗ ಅವರ ಮೇಲೆ ಆರೋಪಿ ದಾಳಿ ಮಾಡಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ದಿನಕರ್, ಆಂಧ್ರಪ್ರದೇಶದವ. ದೊಮ್ಮಲೂರು ಬಳಿಯ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ಪವಿತ್ರಾ ಹಾಗೂ ದಿನಕರ್, ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ, ಜಾತಿ ಬೇರೆ ಬೇರೆಯಾಗಿದ್ದರಿಂದ ಮದುವೆಗೆ ಯುವತಿ ಕಡೆಯವರು ಒಪ್ಪಿರಲಿಲ್ಲ. ಮಾತ್ರವಲ್ಲದೇ ದಿನಕರ್ ಜೊತೆ ಮಾತನಾಡದಂತೆ ಪೋಷಕರು ಯುವತಿಗೆ ತಾಕೀತು ಮಾಡಿದ್ದರು.
ಹೀಗಾಗಿ, ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಸಿಟ್ಟಾದ ಆರೋಪಿ, ಲೀಲಾ ಪವಿತ್ರಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಚಾಕು ಸಮೇತ ಕಚೇರಿ ಬಳಿ ಬಂದಿದ್ದ. ಲೀಲಾ ಪವಿತ್ರಾ ಅವರು ಕಚೇರಿಯಿಂದ ಹೊರಬರುತ್ತಿದ್ದಂತೆ ಮಾತುಕತೆ ನೆಪದಲ್ಲಿ ಅಡ್ಡಗಟ್ಟಿದ್ದ ಆರೋಪಿ ಹೊಟ್ಟೆ, ಎದೆ, ಕುತ್ತಿಗೆ ಸೇರಿ ದೇಹದ 16 ಕಡೆ ಚಾಕು ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದರು.