ಬೆಂಗಳೂರು: ಹೊಸ ವರ್ಷವನ್ನು(New Year 2026) ಸ್ವಾಗತಿಸಲು ಕೌಂಟ್‌ಡೌನ್ ಶುರುವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ನಗರಾದ್ಯಂತ ಬಿಗಿ ಪೊಲೀಸ್(Police) ಬಂದೋಬಸ್ತ್ ಏರ್ಪಡಿಸಲಾಗಿದೆ. ಹೊಸ ವರ್ಷವನ್ನು ವಿಶೇಷವಾಗಿ ಆಚರಿಸುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಹೆಚ್ಚು ಜನಸಂದಣಿಯಾಗುವ ಸಾಧ್ಯತೆ ಇರುವ ಕೋರಮಂಗಲ ಹಾಗೂ ಇತರ ಪ್ರಮುಖ ರಸ್ತೆಯಲ್ಲಿ ಪೊಲೀಸರು ಅತ್ಯಂತ ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ.

ಹೊಸ ವರ್ಷ ಆಚರಣೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಒಟ್ಟು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಮೂಲಕ ನಿರಂತರ ಕಣ್ಗಾವಲು ನಡೆಸಲಾಗುತ್ತಿದೆ. ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಆದ್ಯತೆ ನೀಡಲಾಗಿದ್ದು, ಕ್ಯೂಆರ್‌ಟಿ, ಚೆನ್ನಮ್ಮ ಪಡೆ ಸೇರಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಲೇಡಿ ಡಿಸಿಪಿ ಹುದ್ದೆಯ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇನ್ನು ವುಮೆನ್ ಬೌನ್ಸರ್‌ಗಳನ್ನೂ ಕೂಡ ನಿಯೋಜಿಸಲಾಗಿದ್ದು, ಅಸ್ವಸ್ಥರಾದವರಿಗೆ ಸುರಕ್ಷತೆ ಒದಗಿಸಲು ಸೇಫ್ಟಿ ಐಲ್ಯಾಂಡ್‌ಗಳನ್ನು ನಿರ್ಮಿಸಲಾಗಿದೆ. ವುಮೆನ್ ಶೆಲ್ಟರ್‌ಗಳಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿರುತ್ತಾರೆ. ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ವಾಚ್‌ಟವರ್‌ಗಳನ್ನು ನಿರ್ಮಿಸಿ ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು 66 ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪಾಯಿಂಟ್‌ಗಳು ಸ್ಥಾಪಿಸಲಾಗಿದ್ದು, 92 ವೀಲಿಂಗ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ.












