ರಾಜಧಾನಿ ಬೆಂಗಳೂರು ಕಂಡು ಕೇಳರಿಯದ ರೀತಿಯಲ್ಲಿ ವರುಣ ಏಟಿಟಿದ್ದಾನೆ. ಒಂದೇ ಸಮೇನ ಉಯ್ದು ನಗರವಿಡೀ ಅವಾಂತರ ಸೃಷ್ಟಿಸಿದ್ದಾನೆ. ಇದರ ಜೊತೆಗೆ ಎರಡು ಬಡ ಜೀವಗಳಿನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾನೆ. ಹೌದು, ನಿನ್ನೆಯ ರಣ ಮಳೆಗೆ ನಗರದ ಉಲ್ಲಾಳ ಉಪನಗರದಲ್ಲಿ ಇಬ್ಬರು ಕಾರ್ಮಿಕರು ಜೀವ ಚೆಲ್ಲಿದ್ದಾರೆ.
ನಿನ್ನೆ ರಾತ್ರಿಯಿಂದ ಬೆಂಗಳೂರು ಅಕ್ಷರಶಃ ನೀರಲ್ಲಿ ತೇಲಿತ್ತು. ಸಂಜೆಯಿಂದ ಇಂದು ಬೆಳಗ್ಗಿನ ಜಾವದವರೆಗೆ ಎಡೆಬಿಡದೆ ಸುರಿದ ಮಳೆಯಿಂದ ಬೆಂಗಳೂರು ಜಲಮಯವಾಗಿತ್ತು. ಕೆರೆಗಳ ಕೋಡಿ ಹೊಡೆದು ನೆರೆ. ರಾಜಕಾಲುವೆ ತುಂಬಿ ಹರಿದು ಅವಾಂತರ. ಜನ ಜೀವನ ತತ್ತರ. ಹೀಗೆ ಇಂದು ಬೆಂಗಳೂರು ಮಂದಿಯ ಬದುಕು ಹೇಳತೀರದ್ದಾಗಿತ್ತು. ಈ ನಡುವೆ ನಿನ್ನೆ ಸಂಜೆ ನಗರದ ಉಲ್ಲಾಳ ಉಪನಗರದ ಉಪಕಾರ್ ಲೇಔಟ್ ನಲ್ಲಿ BWSSB ಕೈಗೊಂಡಿದ್ದ ಕಾವೇರಿ ಐದನೇ ಹಂತದ ಕಾಮಾಗರಿಯಲ್ಲಿದ್ದ ಉತ್ತರ ಭಾರತೀಯ ಮೂಲದ ಇಬ್ಬರು ಕಾರ್ಮಿಕರು ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ.
ಬೃಹತ್ ಪೈಪ್.. ಏಕಾಏಕಿ ನುಗ್ಗಿದ ನೀರು.. ಪೈಪ್ ಒಳಗೆಯೇ ಕೊಚ್ಚಿ ಹೋದ ಕಾರ್ಮಿಕರು!
ಕಾವೇರಿ ಐದನೇ ಹಂತದ ಕಾಮಾಗರಿ ಹಿನ್ನೆಲೆ ಉಪಕಾರ್ ಲೇಔಟ್ ಬಸ್ ನಿಲ್ದಾಣದ ಬಳಿ ಜಲ ಮಂಡಳಿ ಕೆಲಸ ಶುರು ಮಾಡಿ ಒಂದೂವರೆ ವರ್ಷವಾಯಿತು. ಇದೀಗ ಸ್ಥಳದಲ್ಲಿ ಅಳವಡಿಸಲಾದ ಬೃಹತ್ ಕಾವೇರಿ ಪೈಪ್ ಗೆ ದೊಡ್ಡದಾದ ಹೋಲ್ ಮಾಡಿ ಅದರಳೊಕ್ಕೆ ಕೆಲಸ ನಿಮಿತ್ತ ಉತ್ತರ ಭಾರತೀಯರಾದ ಮೂವರು ಕಾರ್ಮಿಕರು ಇಳಿದಿದ್ದಾರೆ. ಅಷ್ಟೊತ್ತಿಗೆ ಗಂಟಗೆ 7. ಒಂದೇ ಸಮನೆ ಸುರಿಯಲು ಶುರುವಾದ ಮಳೆಯಿಂದಾಗಿ ಕ್ರಮೇಣವಾಗಿ ಹಳ್ಳಕ್ಕೆ ನೀರು ತುಂಬಲು ಶುರುವಾಗಿದೆ. ಪರಿಣಾಮ ಪೈಪ್ ಒಳಕ್ಕೂ ನೀರು ನುಗ್ಗಿದೆ. ಮಳೆಯ ತೀವ್ರತೆ ಹೆಚ್ಚಿದ್ದರಿಂದ ನೀರು ರಭಸದಿಂದ ಬಂದು ತುಂಬಿದೆ. ಈ ವೇಳೆ ಮೂವರ ಪೈಕಿ ಓರ್ವ ಪೈಪ್ ನಿಂದ ಹೊರಗಡೆಗೆ ಬಚಾವ್ ಆಗಿದ್ದಾನೆ. ಆದರೆ ಪೈಪ್ ಒಳಗೆ ನೀರಿನ ಹರಿವು ಹೆಚ್ಚಿದ್ದರಿಂದ ಇನ್ನಿಬ್ಬರು ಸ್ವಲ್ಪ ದೂರ ಪೈಪ್ ಒಳಗೆಯೇ ಕೊಚ್ಚಿದ್ದಾರೆ. ಪರಿಣಾಮ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಸೇಫ್ಟಿ ಲೋಕ ಆಗಿಲ್ಲ.. ಘಟನೆ ಬಗ್ಗೆ BWSSB ಸ್ಪಷ್ಟನೆ!
ಇನ್ನು ಘಟನೆ ಸಂಬಂಧ ಕಾವೇರಿ ಐದನೇ ಹಂತದ ಯೋಜನೆ ಇಂಜಿನಿಯರ್ ರಮೇಶ್ ಮಾತನಾಡಿ, ನಿನ್ನೆ ಮೂವರು ಕಾರ್ಮಿಕರು ಕೆಲಸ ಮಾಡ್ತಿದ್ರು. ಆಕ್ಸಿಡೆಂಡಲಿ ಘಟನೆ ನಡೆದಿದೆ, ಇದರ ಬಗ್ಗೆ ಬೇಸರವಿದೆ. ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ ಗುತ್ತಿಗೆ ಕೊಡಲಾಗಿತ್ತು. ಕೇವಲ ಪೈಪ್ ಗೆ ಒಂದು ಹೋಲ್ ಮಾಡುವ ಕೆಲಸ ಮಾತ್ರವಿತ್ತು. ಹೀಗಾಗಿ ಮೂವರರ ಅಗತ್ಯ ಮಾತ್ರವಿತ್ತು ಕೆಲಸಕ್ಕೆ. ಒಬ್ಬ ಬಚಾವ್ ಆಗಿ ಬಂದಿದ್ದಾನೆ, ಒಟ್ಟು 480 ಕೋಟಿ ಪ್ರಾಜೆಕ್ಟ್ ಇದು. ಘಟನೆ ಸಂಬಂಧ ಸೂಕ್ತ ತನಿಖೆಯಾಗಲಿ, ಗುತ್ತಿಗೆದಾರರಿಂದ ಪರಿಹಾರ ಕೊಡಿಸುವ ಕೆಲಸ ಆಗಲಿದೆ. ಯಾವುದೇ ರೀತಿಯ ಸೇಫ್ಟಿ ಲೋಪ ಆಗಿಲ್ಲ ಎಲ್ಲವೂ ಸರಿ ಇತ್ತು. ಒಂದೂವರೆ ವರ್ಷಗಳಿಂದ ಈ ಕಾವೇರಿ ಐದನೇ ಹಂತದ ಕಾಮಾಗರಿ ನಡೀತಿದೆ ಎಂದರು.
ಮೇಘ ಇಂಜಿನಿಯರ್ ಕಂಪೆನಿಯ ನಾಲ್ವರ ಬಂಧಿಸಿದ ಖಾಕಿ!
ಈ ಇಬ್ಬರು ಕಾರ್ಮಿಕರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಪ್ರಾಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಸೈಟ್ ಎಂಜಿನಿಯರ್ ಹರೀಶ್ ರೆಡ್ಡಿ, ಹೆಚ್ ಆರ್ ಮ್ಯಾನೇಜರ್ ನರಸಿಂಹರಾಜು ಹಾಗೂ ಮನೋಜ್ ಯಾದವ್ ರನ್ನು ಬಂಧನವಾದವರು. ಒಟ್ಟಾರೆ ಮಳೆಯಿಂದಾದರೂ ಈ ಇಬ್ಬರು ಬಡ ಕಾರ್ಮಿಕರು ಸಾವಿಗೆ ಜಲ ಮಂಡಳಿ ಹಾಗೂ ಗುತ್ತಿಗೆ ಕಂಪೆನಿಯಾದ ಮೇಘ ಇಂಜಿನಿಯರಿಂಗ್ ಸಂಸ್ಥೆಯೇ ನೇರ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗೆ ವರುಣ ತನ್ನ ಆರ್ಭಟ ಮುಂದುವರೆಸಿದರೆ, ಬೆಂಗಳೂರು ಮತ್ತಷ್ಟು ಅಲ್ಲೋಲ ಕಲ್ಲೋಲವಾಗಲಿದೆ ಎಂಬುವುದು ಮಾತ್ರ ಸತ್ಯ.