ಬೆಳಗಾವಿ: ಭೂಮಾಪನಾ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳು ತೋಟದ ವಸತಿ ಪ್ರದೇಶಗಳಿಂದ ನಾಗನೂರ-ಪಿಎ ಗ್ರಾಮದ ಶಾಲೆಗೆ ಹಳ್ಳದಲ್ಲಿ ನಡೆದುಕೊಂಡೇ ಹೋಗಬೇಕಿದೆ. ಅಥಣಿ ತಾಲ್ಲೂಕಿನಲ್ಲಿ ಇರುವ ಈ ಗ್ರಾಮವು ಕಾಗವಾಡ ವಿಧಾನಭಾ ಕ್ಷೇತ್ರಕ್ಕೆ ಒಳಪಟ್ಟಿದೆ.
ಕಂಟೇಕರ ತೋಟ, ಚೌಗಲಾ ತೋಟ ಮತ್ತು ಪವಾರ ತೋಟದ ವಸತಿ ಪ್ರದೇಶದಲ್ಲಿ 40 ಶಾಲಾ ವಿದ್ಯಾರ್ಥಿಗಳು ಇದ್ದಾರೆ. ತೋಟದ ವಸತಿ ಮತ್ತು ಗ್ರಾಮದ ಮಧ್ಯೆ ಹಳ್ಳ ಹರಿದಿದೆ. ಈ ಹಿಂದೆ ಇದ್ದ ರಸ್ತೆಯನ್ನು ರೈತರ ಅಗೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತುಂಬಿ ಹರಿಯುವ ಹಳ್ಳದಲ್ಲೇ ನಡೆದುಕೊಂಡು ಹೋಗಬೇಕು. ಹೆಚ್ಚು ಮಳೆಯಾಗಿ ಹಳ್ಳದ ನೀರು ಏರಿದರೆ ಸುತ್ತಿ ಬಳಸಿ ಹೊಲ- ಗದ್ದೆಗಳಲ್ಲಿ ದಾಟಿಕೊಂಡು ಶಾಲೆ ತಲುಪಬೇಕು.
ವಿದ್ಯಾರ್ಥಿಗಳು ಪ್ರತಿದಿನ ಶಾಲೆ ತಲುಪುವಷ್ಟರಲ್ಲೇ ಸಮವಸ್ತ್ರ ಕೆಸರುಮಯ ಆಗಿರುತ್ತದೆ. ಬೂಟು, ಸಾಕ್ಸ್‌ಗಳನ್ನು ಕೈಯಲ್ಲಿ ಹಿಡಿದು ಅಥವಾ ಸೊಂಟಕ್ಕೆ ಕಟ್ಟಿಕೊಂಡು ಶಾಲೆಗೆ ಹೋಗಬೇಕು. ಶಾಲಾ ಆವರಣದ ನೀರಿನಲ್ಲಿ ಮತ್ತೆ ಕೈಕಾಲು ತೊಳೆದು ಬೂಟುಗಳನ್ನು ಧರಿಸಬೇಕು. ಸಮವಸ್ತ್ರ ಅಲ್ಲದೇ ಶಾಲಾ ಬ್ಯಾಗು ಕೂಡ ಕೆಸರುಮಯ ಆಗಿರುತ್ತದೆ.
ನಾಗನೂರ-ಪಿಎ ಗ್ರಾಮ ಹಾಗೂ ಸಂಬರಗಿ ಗ್ರಾಮಗಳ ಮಧ್ಯೆ ಹಳ್ಳ ಇದೆ. ಈ ಎರಡೂ ಗ್ರಾಮಗಳ ಮಧ್ಯದಲ್ಲೇ ಈ ಮೂರು ತೋಟದ ವಸತಿ ಪ್ರದೇಶಗಳಿವೆ. ಗ್ರಾಮಗಳ ಮಧ್ಯೆ ಈ ಹಿಂದೆ ಕಚ್ಚಾ ರಸ್ತೆ ಇತ್ತು. ಆದರೆ, ಇಕ್ಕೆಲಗಳ ರೈತರ ತಮ್ಮ ಜಮೀನು ಎಂದು ಅದನ್ನು ಬಳಸಿ ಬಿತ್ತನೆ ಮಾಡಿದ್ದಾರೆ. ರಸ್ತೆಯ ಜಾಗ ಮತ್ತು ಹೊಲಗಳ ವ್ಯಾಪ್ತಿ ಎಷ್ಟು ಎಂದು ಸರಿಯಾಗಿ ಅಳತೆ ಮಾಡಿ ಕೊಡಬೇಕಾದ ಭೂ ಮಾಪನಾ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ರಸ್ತೆಯೇ ಮಾಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.