ಅಕ್ರಮವಾಗಿ ಮುಡಾ ಸೈಟ್ ಪಡೆದ ವಿಚಾರದಲ್ಲಿ ಇಡಿ ಅಧಿಕಾರಿಗಳು ECIR ದಾಖಲು ಮಾಡಿಕೊಳ್ತಿದ್ದ ಹಾಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ 14 ಸೈಟ್ ವಾಪಸ್ ಮಾಡುವ ನಿರ್ಧಾರ ಮಾಡಿ ಪತ್ರ ಬರೆದಿದ್ದರು. ಮುಡಾ ಕಮಿಷನರ್ಗೆ ಪಾರ್ವತಿ ಪತ್ರ ಬರೆದು, ನನಗೆ ಕೊಟ್ಟಿರುವ ಸೈಟ್ ಕ್ರಯಪತ್ರ ರದ್ದು ಮಾಡಬೇಕು ಎಂದು ಕೋರಿದ್ದರು.
ನನ್ನ ಪತಿಯ ಘನತೆಗಿಂತ ಆಸ್ತಿ ದೊಡ್ಡದಲ್ಲ ಎಂದು ಭಾವನಾತ್ಮಕವಾಗಿ ಪತ್ರವನ್ನೂ ಬರೆದು ತಿಳಿಸಿದ್ದರು. ಪತ್ನಿ ಪಾರ್ವತಿ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೂಡ ಸ್ವಾಗತ ಮಾಡಿ, ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕು ಎಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರ ಹಾಗು ಪಿತೂರಿಯಿಂದ ನೊಂದಿರುವ ನನ್ನ ಪತ್ನಿ, ಸೈಟ್ ವಾಪಸ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ ಎಂದಿದ್ದರು.
ಮುಡಾ ಸೈಟ್ ವಾಪಸ್ ಮಾಡ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿ ರಾಜೀನಾಮೆ ಕೊಡಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. 2011ರಲ್ಲಿ ಯಡಿಯೂರಪ್ಪ ಮೇಲೆ ಆರೋಪ ಬಂದಿತ್ತು. ಆಗ ವಿಪಕ್ಷ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೇರಿದ್ರು ಎಂದು ಅಂದು ಸಿದ್ದರಾಮಯ್ಯ ಮಾತಾಡಿದ್ದ ವಿಡಿಯೋ ರಿಲೀಸ್ ಮಾಡಿದ್ದಾರೆ.
ರಾಜೀನಾಮೆಗೂ ಮುನ್ನ ಸಿಎಂ ರಾಜ್ಯಪಾಲರ ಬಳಿ ಕ್ಷಮಾಪಣೆ ಕೋರಬೇಕು. ಸ್ನೇಹಮಯಿ ಕೃಷ್ಣಗೆ ಸಿಎಂ ಟೀಂ ಬೆದರಿಕೆ ಹಾಕ್ತಿದೆ. ಪೊಲೀಸರು ಭದ್ರತೆ ಕೊಡುವ ಕೆಲಸ ಮಾಡಬೇಕು ಎಂದಿರುವ ವಿಜಯೇಂದ್ರ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಡಿಮ್ಯಾಂಡ್ ಕಾಂಗ್ರೆಸ್ನಲ್ಲೂ ಇದೆ. ಹೀಗಾಗಿ ಸಿದ್ದರಾಮಯ್ಯ ಯಾವ ಕ್ಷಣದಲ್ಲಾದ್ರು ರಾಜೀನಾಮೆ ಕೊಡಬಹುದು ಎಂದಿದ್ದಾರೆ..
ಸಿಎಂ ಪತ್ನಿ ಪಾರ್ವತಿ ಸೈಟು ಹಿಂದಿರುಗಿಸಲು ಪತ್ರ ಬರೆದಿರುವ ವಿಚಾರದ ಬಗ್ಗೆ ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಮಾತನಾಡಿ, ಕೆಟ್ಟ ಮೇಲೆ ಬುದ್ಧಿ ಬಂದಿದೆ ಎನಿಸುತ್ತದೆ. ಈ ಮೊದಲೇ ಈ ನಿರ್ಧಾರ ಮಾಡಿದ್ರೆ ಸ್ವಾಗತ ಮಾಡುತ್ತಿದ್ದೆ. ತನಿಖೆ ಕುತ್ತಿಗೆಗೆ ಬಂದಾಗ ಸೈಟ್ ವಾಪಸ್ ಕೊಡಲು ಬಂದಿದ್ದಾರೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಎರಡೂವರೆ ತಿಂಗಳ ಹಿಂದೆಯೇ ಅಕ್ರಮ ಸೈಟ್ ವಾಪಸ್ ಕೊಟ್ಟು ಬಿಡಿ ಎಂದು ಹೇಳಿದ್ದೆ. ಸಿಎಂ ಅವರ ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ಸೈಟ್ ನುಂಗಬಾರದು ಎಂದು ಅವತ್ತೇ ಹೇಳಿದ್ದೆ. ಎರಡೂವರೆ ತಿಂಗಳ ಹಿಂದೆ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ ಎಂದಿದ್ದಾರೆ.
ಸೈಟ್ ವಾಪಸ್ ಕೊಡೊ ಮೂಲಕ ಸಿಎಂ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಆದರೆ ಆಗ ಸಮರ್ಥನೆ ಮಾಡಿಕೊಂಡರು. ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ ಅನ್ನುತ್ತಿದ್ದರು. ಸೈಟ್ ವಾಪಸ್ ಕೊಡುವ ಮೂಲಕ ಈಗ ತಪ್ಪಾಗಿದೆ ಅನ್ನೋದನ್ನ ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೆಂಗಳೂರಲ್ಲಿ ಮಾತನಾಡಿ, ನೂರು ಬಾರೀ ಗೆದ್ದವರು ಒಂದು ಬಾರಿ ಸಿಕ್ಕಿ ಹಾಕಿಕೊಳ್ಳಬೇಕು ಅಂತ ನಾಣ್ಣುಡಿ ಇದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರು ಸಾಚ ಅಲ್ಲ.. ನೂರು ಬಾರಿ ಬಳಿಕ ಈಗ ಸಿಕ್ಕಿ ಹಾಕಿಕೊಂಡಿದ್ದಾರೆ.. ಜಗ್ಗಲ್ಲ ಬಗ್ಗಲ್ಲ ಅಂದವರು ನಿನ್ನೆ ರಾತ್ರಿ ಮೇಲೆ ಜಗ್ಗಿದ್ದು ಬಗ್ಗಿದ್ದು ಯಾಕೆ..? ಎಂದು ಪ್ರಶ್ನಿಸಿದ್ದಾರೆ.