ಬಿಬಿಎಂಪಿ ಸಲ್ಲಿಸಿದ ವಾರ್ಡ್ ಮರು ವಿಂಗಡಣೆ ಕರಡನ್ನು ಸರ್ಕಾರ ತಿರಸ್ಕಾರ ಮಾಡಿದೆ. ಸುಪ್ರಿಂ ಕೋರ್ಟ್ ಸೂಚನೆ ಮೇರೆಗೆ ಪಟ್ಟಿ ಸಿದ್ದಪಡಿಸಿದ್ದರೂ, ಹತ್ತಾರು ತಪ್ಪುಗಳನ್ನ ಸರ್ಕಾರ ಹುಡುಕಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ಹೊಸ ಕರಡು ಸಲ್ಲಿಕೆಗೆ ಡೆಡ್ ಲೈನ್ ಕೊಡಲಾಗಿದೆ.
ಬಹು ನಿರೀಕ್ಷಿತ ಬಿಬಿಎಂಪಿ ವಾರ್ಡ್ ಮರುವಿಂಗಡನಾ ಕರಡು ಪ್ರತಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. 198 ವಾರ್ಡ್ ನಿಂದ 243ಕ್ಕೆ ಏರಿಕೆ ಮಾಡಿರೋ ಈ ಕರಡನ್ನ ಬಿಬಿಎಂಪಿ ಸಲ್ಲಿಸಿದ ವೇಗದಲ್ಲಿಯೇ ಸರ್ಕಾರ ತಿರಸ್ಕಾರ ಮಾಡಿದೆ. ಸುಪ್ರಿಂ ಆದೇಶವನ್ನು ಧಿಕ್ಕರಿಸಿ ವಾರ್ಡ್ ಸಮಿತಿ ವಾರ್ಡ್ ಗಳನ್ನ ವಿಂಗಡಣೆ ಮಾಡಿದೆ ಅಂತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ ಅಂತ ಹೇಳಲಾಗ್ತಿದೆ. ಮಾಧ್ಯಮಗಳಲ್ಲಿ ಬಿಬಿಎಂಪಿ ಸಲ್ಲಿಕೆ ಮಾಡಿರೋ ಕರಡು ಪ್ರತಿಗಳು ಹರಿದಾಡ್ತಿದ್ದರೂ ಬಿಬಿಎಂಪಿ ಮಾತ್ರ ನಾವಿನ್ನೂ ಕರಡು ಪ್ರತಿ ಸಲ್ಲಿಕೆ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಸಲ್ಲಿಕೆ ಮಾಡ್ತೀವಿ ಅಂತ ಮುಜುಗರದಿಂದ ತಪ್ಪಿಸಿಕೊಳ್ಳೋ ಯತ್ನಿಸುತ್ತಿದೆ.
ಸಲ್ಲಿಕೆಯಾದ ಕರಡಲ್ಲಿನ ಲೋಪಗಳು!
- ಒಂದು ವಾರ್ಡ್ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತೆ ವಿಂಗಡಿಸಿಲ್ಲ
- ಪಾಲಿಕೆಗೆ ಹೆಚ್ಚು ಅದಾಯ ಬರುವ ವಾರ್ಡ್ಗಳನ್ನು ಚಿಕ್ಕದಾಗಿ ಮಾಡಲಾಗಿದೆ
- ಕಡಿಮೆ ಆದಾಯ ಬರುವ ವಾರ್ಡ್ಗಳ ಗಾತ್ರವನ್ನು ಹೆಚ್ಚಿಸಲಾಗಿದೆ
- ಕನ್ನಡ & ಇಂಗ್ಲಿಷ್ ಭಾಷೆಯಲ್ಲಿ ಕರಡು ಪಟ್ಟಿ ಸಲ್ಲಿಸುವಂತೆ ಸೂಚನೆ
- ಹೊಸ ವಾರ್ಡ್ಗಳಿಗೆ ಇತಿಹಾಸ ಹೊಂದಿದ ಹಳೆಯ ಹೆಸರು ಇಡದಿರೋದು
- ಮತ್ತೆ 3 ದಿನಗಳಲ್ಲಿ ಮರು ಕರಡು ಪಟ್ಟಿ ಸಲ್ಲಿಸುವಂತೆ ಆದೇಶ
ಇನ್ನು ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರದಲ್ಲಿ ಬಿಬಿಎಂಪಿ ಪಕ್ಷಾತೀತವಾಗಿ ನಡೆದುಕೊಂಡಿಲ್ಲ ಅನ್ನೋದು ಸರ್ಕಾರದ ವಾದ. ಹೀಗಾಗಿ ಸರ್ಕಾರ ಬಿಬಿಎಂಪಿ ಸಲ್ಲಿಸಿದ ಕರಡು ಪ್ರತಿಯಲ್ಲಿ ಕೆಲ ದೋಷಗಳನ್ನ ಪತ್ತೆ ಹಚ್ಚಿದೆ. ಒಂದು ವಾರ್ಡ್ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತೆ ವಿಂಗಡಣೆ ಮಾಡಿಲ್ಲ ಅನ್ನೋದು ಮೊದಲ ದೋಷವಾದರೆ, ಪಾಲಿಕೆಗೆ ಹೆಚ್ಚು ಅದಾಯ ಬರುವ ವಾರ್ಡ್ಗಳ ಚಿಕ್ಕದಾಗಿ ಹಾಗೆನೇ ಕಡಿಮೆ ಆದಾಯ ಬರುವ ವಾರ್ಡ್ ಗಳ ಗಾತ್ರವನ್ನ ಹೆಚ್ಚಿಸಲಾಗಿದೆ ಅಂತ ಪತ್ತೆ ಹಚ್ಚಿದೆ. ಜತೆಗೆ ಕನ್ನಡ & ಇಂಗ್ಲಿಷ್ ಭಾಷೆಯಲ್ಲಿ ಕರಡು ಪಟ್ಟಿ ಸಲ್ಲಿಸುವಂತೆ ಸೂಚನೆಯನ್ನ ಸರ್ಕಾರ ಕೊಟ್ಟಿದೆಯಂತೆ. ಇದಕ್ಕಿಂತ ಮುಖ್ಯವಾಗಿ ಹೊಸ ವಾರ್ಡ್ಗಳಿಗೆ ಇತಿಹಾಸ ಹೊಂದಿದ ಹಳೆಯ ಹೆಸರು ಇಟ್ಟಿಲ್ಲವಂತೆ. ಇದನ್ನೆಲ್ಲಾ ಗಮನಿಸಿದ್ರೆ ಕರಡು ವಾಪಾಸ್ ಬರೋದಕ್ಕೆ ಬೆಂಗಳೂರಿನ ಸಚಿವರ ಕೈವಾಡ ಇದೆ ಅನ್ನೋ ಅನುಮಾನವನ್ನ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಗಳು ಮಾಡ್ತಿದ್ದಾರೆ. ಏನೇ ಎಡವಟ್ಟುಗಳನ್ನು ಮಾಡಿದರೂ ಸುಪ್ರಿಂ ಕೊಟ್ಟಿರೋ ದಿನಾಂಕದ ಒಳಗೇ ಚುನಾವಣೆ ನಡೆಯುತ್ತೆ ಅಂತ ವಿಶ್ವಾಸವನ್ನೂ ವ್ಯಕ್ತಪಡಿಸ್ತಿದೆ.
ಈಗಾಗಲೇ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸುಪ್ರಿಂ ಕೊಟ್ಟ ಗಡುವಿನಲ್ಲಿ ಎರಡುವಾರ ಕಳೆದಿದೆ. ಇನ್ನಾದರು ವಾರಗಳಲ್ಲಿ ಚುನಾವಣಾ ಸಿದ್ಧತೆಗಳು ಪೂರ್ಣಗೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಯಾವ ರೀತಿಯ ಕ್ರಮಗಳನ್ನ ಕೈಗೊಳ್ಳುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.