ಸಿಎಂ ಚಾಟಿ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ನಿದ್ದೆಯಿಂದ ಎದ್ದಿದ್ದಾರೆ. ಟ್ರಾಫಿಕ್ ಕಂಟ್ರೋಲ್ ಮಾಡೋಕೆ ಹರಸಾಸಹ ಪಡ್ತಿದ್ದ ಸಂಚಾರಿ ಪೊಲೀಸರಿಗೆ ಬಿಬಿಎಂಪಿ ಸಾಥ್ ಕೊಟ್ಟಿದ್ದೇ ಕೊಟ್ಟಿದ್ದು ನಗರದಲ್ಲಿ 40% ಟ್ರಾಫಿಕ್ ಕಂಟ್ರೋಲ್ ಗೆ ಬಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ರಸ್ತೆ ಗುಂಡಿ ಗಂಡಾಂತರ.. ಮಳೆ ನೀರಿನಿಂದ ಅವಾಂತರ.. ಕೊನೆಗೂ ಎಚ್ಚತ್ತ ಪಾಲಿಕೆ
ರಸ್ತೆ ಗುಂಡಿಯಿಂದಾಗಿ ಸಾವು ನೋವು ಆಗುವುದರ ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡ ಎದುರಾಗ್ತಿದೆ. ಮಳೆ ಬಂದ್ರೆ ವಾಟರ್ ಲಾಗಿಂಗಿಂದಲೂ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗ್ತಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬಳಿಕ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಬಿಬಿಎಂಪಿ ಚೀಫ್ ಕಮಿಷನರ್ ಗೆ ಸರ್ವ ಇಲಾಖೆಯ ಸಭೆ ಕರೆದು ಟ್ರಾಫಿಕ್ ಕಂಟ್ರೋಲ್ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ತಾಕೀತು ಮಾಡಿತ್ತು. ಅದರಂತೆ ಬಿಬಿಎಂಪಿಯಿಂದ ಸರ್ವ ಇಲಾಖೆ ಸಮನ್ವಯ ಸಭೆ ನಡೆಸಿ ಅಗತ್ಯ ಕ್ರಮ ಸೇರಿದಂತೆ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಸ್ಥಳ ಯಾವುದು ಅಂತ ಟ್ರಾಫಿಕ್ ಪೊಲೀಸರಿಗೆ ವರದಿ ಕೇಳಿತ್ತು.

ಟ್ರಾಫಿಕ್ ಪೊಲೀಸರು ನೀಡಿದ ಟ್ರಾಫಿಕ್ ಲಿಸ್ಟ್ ಕ್ಲಿಯರ್ ಮಾಡಿದ ಬಿಬಿಎಂಪಿ
ಅದರಂತೆ ಟ್ರಾಫಿಕ್ ಪೊಲೀಸ್ ಇಲಾಖೆಯ ಜೊತೆ ನಿರಂತರ ಸಭೆ ಮಾಡಿ ನಗರದ 54 ಟ್ರಾಫಿಕ್ ಕಿರಿಕ್ ಸ್ಪಾಟ್ ಗುರುತಿಸಲಾಗಿತ್ತು. ಹೀಗೆ ಗುರುತಿಸಲಾದ ಜಾಗವನ್ನು ತಪಾಸಣೆ ಮಾಡಿ ಬಿಬಿಎಂಪಿ ಅಗತ್ಯ ಕ್ರಮ ತೆಗೆದುಕೊಂಡಿರುವ ಪರಿಣಾಮ ನಗರದಲ್ಲಿ 40% ಟ್ರಾಫಿಕ್ ಕಂಟ್ರೋಲ್ ಆಗಿದೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ. 54 ಸ್ಥಳಗಳ ಪೈಕಿ 50 ಸ್ಪಾಟ್ ಗಳಲ್ಲಿ ಟ್ರಾಫಿಕ್ 40% ಸುಧಾರಣೆಯಾಗಿದೆ. ಸಂಚಾರಿ ಪೊಲೀಸರು ಒಟ್ಟು 54 ಕಡೆ ಮಳೆಬಿದ್ದಾಗ ನೀರು ತುಂಬುವ ಪ್ರದೇಶಗಳಲ್ಲಿ ತುರ್ತು ಕಾಮಾಗಾರಿ ನಡೆಸುವಂತೆ ಕೇಳಿದ್ದರು. ಅವರು ನೀಡಿರುವ 54 ಸ್ಥಳಗಳಲ್ಲಿ ಒಟ್ಟು 53 ಸ್ಥಳಗಳಲ್ಲಿ ತಕ್ಷಣಕ್ಕೆ ಬೇಕಾಗಿರುವ ಕಾಮಾಗಾರಿ ನಡೆಸಲಾಗಿದೆ. ಮುಂದುವರೆದು ಶಾಶ್ವತ ಕಾಮಾಗಾರಿಗಳನ್ನು ಮಾಡಲಾಗುವುದು. ಅತೀ ಹೆಚ್ಚು ಟ್ರಾಫಿಕ್ ಇರುವ ಜಂಕ್ಷನ್ ಗಳಲ್ಲಿ ನಾವು ಸರಣಿ ವಿಸಿಟ್‌ಗಳನ್ನು ಮಾಡಿ ಟ್ರಾಫಿಕ್ ಜಾಮ್ ಕಡಿಮೆಗೊಳಿಸಲು ಬೇಕಾಗಿರುವ ಕ್ರಮ ಜಾರಿಗೆ ತಂದಿದ್ದೇವೆ. ಅದರ ಪರಿಣಾಮ ಕೆಲವು ಕಡೆ ಶೇಕಾಡ 40ರಷ್ಟು ಟ್ರಾಫಿಕ್ ಜಾಮ್ ಕಡಿಮೆಯಾಗಿದ್ದು ಸುಗಮ ಸಂಚಾರಕ್ಕೆ ಅವಕಾಶವಾಗಿದೆ ಎಂದರು.
ಟ್ರಾಫಿಕ್ ಗೆ ಶಾಶ್ವತ ಪರಿಹಾರಕ್ಕೆ ಬಿಬಿಎಂಪಿಯಿಂದ ಹಿರಿಯ ಅಧಿಕಾರಿಗಳ ಸಮಿತಿ ರಚನೆ
ಇನ್ನು ಪೊಲೀಸರು ನೀಡಿದ 3,750 ರಸ್ತೆ ಗುಂಡಿಗಳ ಪೈಕಿ ಸುಮಾರು 3 ಸಾವಿರ ಗುಂಡಿಗಳನ್ನು ಪಾಲಿಕೆ ಮುಚ್ಚಿದೆಯಂತೆ. ಉಳಿದಂತೆ ಟ್ರಾಫಿಕ್ ಪೊಲೀಸರು ಹೇಳಿರುವ ಜಾಗದಲ್ಲಿ ಶೀಘ್ರವೇ ಪ್ಯಾಚ್ ವರ್ಕ್ ಮಾಡುವ ಭರವಸೆಯನ್ನು ಪಾಲಿಕೆ ಅಧಿಕಾರಿಗಳು ಕೊಟ್ಟಿದ್ದಾರೆ. ಇನ್ನು ಪೀಕ್ ಅವರ್ ಹಾಗೂ ನಾನ್ ಪೀಕ್ ಅವರ್ ಗಳಲ್ಲಿ ವಾಹನ ಸಂಚಾರ ದಟ್ಟಣೆ ಬೇರೆ ಬೇರೆಯಾಗಿದ್ದು, ಇದನ್ನು ಅಧ್ಯಯನ ಮಾಡುವ ಅಗತ್ಯವಿದೆ. ಹೀಗಾಗಿ ಈ ಬಗ್ಗೆ ಸಂಕ್ಷಿಪ್ತವಾಗಿ ಗಮನಿಸಿ ವರದಿ ನೀಡಲು ಬಿಬಿಎಂಪಿ ಚೀಫ್ ಕಮಿಷನರ್ ಕಮಿಟಿಯನ್ನೂ ರೂಪಿಸಿದ್ದಾರೆ.
 
			
 
                                 
                                 
                                
