ಮಹಾಮಳೆಗೆ ತತ್ತಿರಿಸಿದ ಬೆಂಗಳೂರಿನಲ್ಲೀಗ ಆಪರೇಷನ್ ಬುಲ್ಡೋಜರ್ ಸದ್ದು ಮಾಡ್ತಿದೆ. ಒತ್ತುವರಿ ಬಗ್ಗೆ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟ ತಲ್ಲೀನವಾಗಿದೆ. ಈ ನಡುವೆ ಕಳೆದೇಳು ವರುಷದಲ್ಲಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಆಗಿದ್ದೆಷ್ಟು? ತೆರವಾಗಿದ್ದೆಷ್ಟು? ಎಂಬುವುದೇ ಗೊಂದಲದ ವಿಚಾರ. ಇದೀಗ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಪಟ್ಟಿ ಸಿಕ್ಕಿದ್ದು 2016ರಿಂದ ಈವರೆಗಿನ ತೆರವು ಕಾರ್ಯಚರಣೆ ಸಂಪೂರ್ಣ ಮಾಹಿತಿ ಇದೆ.
2016ರಲ್ಲಿ ಸರ್ವೇ.. 2019ರಲ್ಲಿ ತೆರವು.. ವರದಿ ಪ್ರಕಾರ ಇನ್ನೆಷ್ಟು ಬಾಕಿ?
ಬೆಂಗಳೂರಿನಲ್ಲಿ 800 ಕಿ.ಮೀಗಿಂತ ಅಧಿಕ ಉದ್ದದ ನೀರುಗಾಲುವೆ ಇದೆ. ಇದರಲ್ಲಿ 2626 ಒತ್ತುವರಿ ತೆರವು ಬಾಕಿ ಇದೆ. ಈ ರಾಜಕಾಲುವೆ ಒತ್ತುವರಿ ಕಾರಣದಿಂದ 50ಕ್ಕೂ ಅಧಿಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಈ ಬಾರಿ ಉಂಟಾಗಿದೆ. ಕಳೆದ 7 ವರ್ಷಗಳಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೂ, ಪೂರ್ಣಪ್ರಮಾಣದಲ್ಲಿ ಪಾಲಿಕೆಗೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಹಾಹಾದ್ರೆ 2016ರಲ್ಲಿ ಒತ್ತುವರಿ ಪಟ್ಟಿ ಎಷ್ಟು? 2018ರಲ್ಲಿ ಆದ ಕಾರ್ಯಾಚರಣೆಯೆಷ್ಟು?

2019ರಿಂದ 2022ರ ವರೆಗೆ ಏನೆಲ್ಲ ಕಾರ್ಯಾಚರಣೆ ಆಗಿದೆ? ಎಂಬುದರ ಪಿನ್ ಟು ಪಿನ್ ಡೀಟೇಲ್ಸ್ ಇಲ್ಲಿದೆ ನೋಡಿ.
2016ರಲ್ಲಿ ಕಂದಾಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 2,515 ಒತ್ತುವರಿ ಪ್ರದೇಶಗಳ ಗುರುತು ಮಾಡಲಾಗಿತ್ತು. ಈ ಪೈಕಿ 428 ಅತಿಕ್ರಮಣ ತೆರವು ಕೂಡ ನಡೆದಿತ್ತು. ಬಡಜನರೇ ವಾಸವಿದ್ದ ದೊಡ್ಡಬೊಮ್ಮಸಂದ್ರದಲ್ಲಿ 190 ಮನೆಗಳು, ಅವನಿ ಶೃಂಗೇರಿ ಬಡಾವಣೆಯಲ್ಲಿ 179 ಮನೆ ತೆರವು ಮಾಡಿತ್ತು ಪಾಲೊಕ. ಆದರೆ, ಪ್ರಭಾವಿಗಳ ಮನೆ, ಆಸ್ಪತ್ರೆ, ಐಟಿ ಕಂಪನಿ ತೆರವು ಮಾಡುವ ಊಸಾಬಾರಿಗೆ ಅಂದು ಪಾಲಕೆ ಕೈಹಾಕಲಿಲ್ಲ.
2018ರಲ್ಲಿ ಮತ್ತೆ ತೆರವು ಕಾರ್ಯಾಚರಣೆ ಬಿಬಿಎಂಪಿ ಕೈಗೆತ್ತಿಕೊಂಡಿತು. 1,478 ತೆರವು ಕಾರ್ಯಾಚರಣೆ ಅಂದು ಪಾಲಿಕೆ ಮಾಡಿತ್ತು. ಇದರಲ್ಲಿ ಪೂರ್ವ ವಲಯ 124, ಯಲಹಂಕ 277, ಮಹದೇವಪುರ 867, ಬೊಮ್ಮನಹಳ್ಳಿ ವಲಯದಲ್ಲಿ 210 ಒತ್ತುವರಿ ತೆರವು ಮಾಡಲಾಗಿತ್ತು. ಆದರೆ, ಪ್ರಭಾವಿಗಳ ಮೇಲೆ ತೆರವು ಕಾರ್ಯಾಚರಣೆಯನ್ನು ಅಂದೂ ಕೂಡ ಬಿಬಿಎಂಪಿ ಮಾಡಿರಲಿಲ್ಲ. ಇನ್ನು 2019ರಿಂದ 2021ರ ಅವಧಿಯಲ್ಲಿ ಒತ್ತುವರಿ ಸಂಖ್ಯೆಯೂ ಹೆಚ್ಚಳ ಆಗೋಗಿತ್ತು. ಮಹದೇವಪುರದಲ್ಲಿ 45, ಬೊಮ್ಮನಹಳ್ಳಿ ವಲಯದಲ್ಲಿ 66 ಹೊಸದಾಗಿ ಒತ್ತುವರಿ ಮಾಡಿಕೊಂಡ ಬಗ್ಗೆ ಕಂದಾಯ ಇಲಾಖೆ ಪತ್ತೆಮಾಡಿತ್ತು.
ವಲಯವಾರು ರಾಜಕಾಲುವೆ ಒತ್ತುವರಿ ತೆರವು ಮತ್ತು ಬಾಕಿ ವಿವರ:
- ವಲಯಗಳು ಒಟ್ಟು ತೆರವು ಬಾಕಿ:
- ಪೂರ್ವ ವಲಯ 237 – 127 – 110
- ಪಶ್ಚಿಮ ವಲಯ 71 – 12 – 59
- ದಕ್ಷಿಣ ವಲಯ 20 – 0 -20
- ಕೆ-100 ವ್ಯಾಲಿ 10 – 7 – 3
- ಯಲಹಂಕ 588 – 492 – 96
- ಮಹದೇವಪುರ 1,101 – 965 -136
- ಮಹದೇವಪುರ ನ್ಯೂ 45 – 0 – 45
- ಬೊಮ್ಮನಹಳ್ಳಿ 276 – 250 – 26
- ಬೊಮ್ಮನಹಳ್ಳಿ ನ್ಯೂ 66 – 0 – 66
- ಆರ್.ಆರ್. ನಗರ 47 – 38 – 9
- ದಾಸರಹಳ್ಳಿ 165 – 39 – 126
- ಒಟ್ಟು 2,626 – 1,930 -696
ಒಟ್ಟಾರೆ ಬಿಬಿಎಂಪಿ ಕಳೆದ ಆರೇಳು ವರ್ಷಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ಅಂತ ನಾಟಕವಾಡುತ್ತಲೇ ಬರುತ್ತಿದೆ. ಆದರೆ ಎಂದೂ ಕೂಡ ಸೂಕ್ತವಾಗಿ, ನ್ಯಾಯಬದ್ಧವಾಗಿ ತೆರವು ಕಾರ್ಯಾಚರಣೆ ಮಾಡಿಲ್ಲ. ಬಡವರಿಗೊಂದು ನ್ಯಾಯ. ಶ್ರೀಮಂತರಿಗೊಂದು ನ್ಯಾಯ ಅಂತಲೇ ಬಂದಿದೆ. ಇದೀಗ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಕೂಡ ಅದೇ ಮಾದರಿಯಲ್ಲಿದೆ.