ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ. 2022ರ ಮಾರ್ಚ್ ತಿಂಗಳಿನಲ್ಲಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಅವಧಿ ಮುಗಿದ್ರೂ, ಇನ್ನೂ ಬಿಬಿಎಂಪಿ ಎಲೆಕ್ಷನ್ ಪ್ರಕಟವಾಗಿಲ್ಲ. ಕೆಲವೇ ದಿನಗಳಲ್ಲಿ ಬಿಬಿಎಂಪಿಗೆ ಚುನಾವಣೆ ಘೋಷಣೆಯಾಗಬಹುದು. ಹೀಗಿರುವಾಗಲೇ ಸಚಿವರುಗಳಿಗೆ ಬಿಬಿಎಂಪಿ ಚುನಾವಣೆಗೂ ಮುನ್ನವೇ ಟೆನ್ಷನ್ ಶುರುವಾಗಿದೆಯಂತೆ. ಹೌದು, ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಮೂಲ ಮತ್ತು ವಲಸಿಗರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ನಾವಾ ನೀವಾ ಅನ್ನೋ ಪೈಪೋಟಿ ಆಗುತ್ತಲೇ ಇದೆ. ಸದ್ಯ ಈ ಸಮರ ಬಿಬಿಎಂಪಿ ಚುನಾವಣಾ ಅಂಗಳಕ್ಕೂ ಎಂಟ್ರಿಕೊಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಬಿಎಂಪಿಗೆ ಚುನಾವಣೆ ಘೋಷಣೆಯಾಗಲಿದ್ದು, ಈಗ ವಲಸಿಗರು-ಮೂಲ ಬಿಜೆಪಿಗರ ಮಧ್ಯೆ ಟಿಕೆಟ್ ಕಿತ್ತಾಟ ಶುರುವಾಗಿದೆ ಎನ್ನಲಾಗಿದೆ.
ಬಿಬಿಎಂಪಿ ಎಲೆಕ್ಷನ್ ವಿಚಾರ ಸುಪ್ರಿಂಕೋರ್ಟ್ ಅಂಗಳದಲ್ಲಿದೆ. ಅವಧಿ ಮುಗಿದ್ರೂ, ಪಾಲಿಕೆ ಎಲೆಕ್ಷನ್ ಅಧಿಸೂಚನೆ ಪ್ರಕಟವಾಗಿಲ್ಲ. ವಾರ್ಡ್ ಮರು ವಿಂಗಡಣೆ ನೆಪದಲ್ಲಿ ಪಾಲಿಕೆ ಚುನಾವಣೆ ವಿಳಂಬವಾಗ್ತಿದೆ. ಸರ್ಕಾರ, ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ನೆಪ ಹೇಳ್ತಿದೆ. ಈಗ ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆ ವಿಚಾರವನ್ನ ಇತ್ಯರ್ಥ ಮಾಡೋ ಸಾಧ್ಯತೆ ಇದೆ. ಈ ಮಧ್ಯೆ ಬಿಬಿಎಂಪಿ ಚುನಾವಣೆಗೆ ವಲಸಿಗ ನಗರ ಸಚಿವರಲ್ಲಿ ಆತಂಕವಾಗ್ತಿದೆ. ಬೈರತಿ ಬಸವರಾಜು, ಗೋಪಾಲಯ್ಯ, ಸೋಮಶೇಖರ್, ಮುನಿರತ್ನಗೆ ತಲೆಬಿಸಿ ಶುರುವಾಗ್ತಿದೆ.
ಕಾಂಗ್ರೆಸ್ನಲ್ಲಿದ್ದ ಕೆಲ ನಗರ ಶಾಸಕರು ಈಗ ಬಿಜೆಪಿಯಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಬಗ್ಗೆ ಪೈಪೋಟಿ ಸಹಜವಾಗೇ ಇದೆ. ಮೂಲ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ಸಿಗುವ ವಿಶ್ವಾಸವಿದೆ. ಆದ್ರೆ, ಮತ್ತೊಂದೆಡೆ ಮೂಲ ಹಾಗೂ ವಲಸಿಗ ಕಾರ್ಯಕರ್ತರಲ್ಲಿ ಟಿಕೆಟ್ಗೆ ಪೈಪೋಟಿ ಶುರುವಾಗಿದೆ. ಸದ್ಯಕ್ಕೆ ಬಿಬಿಎಂಪಿ ಚುನಾವಣೆ ಬೇಡವೇ ಬೇಡ ಎಂಬ ಒತ್ತಾಯವೂ ಕೇಳಿ ಬರ್ತಿದೆ. ಬಿಬಿಎಂಪಿ ಎಲೆಕ್ಷನ್ ಇನ್ನಷ್ಟು ವಿಳಂಬವಾಗಲಿ ಎಂಬ ಅಭಿಮತವೂ ಇದೆ.
ಬಿಬಿಎಂಪಿ ಚುನಾವಣೆಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮೂಲ ಬಿಜೆಪಿಗರು ಮತ್ತು ವಲಸಿಗ ಸಚಿವರು ಪೈಪೋಟಿ ಶುರುವಾಗಿರೋದಂತೂ ಸುಳ್ಳಲ್ಲ. ಆದ್ರೆ, ಸರ್ಕಾರ ಮೂಲ ಬಿಜೆಪಿ ನಾಯಕರ ಬೆಂಬಲಿಗರಿಗೆ ಮಣೆ ಹಾಕುತ್ತಾ? ಅಥವಾ ಸರ್ಕಾರ ರಚನೆಯಲ್ಲಿ ಬೆಂಬಲಕೊಟ್ಟವರ ಕೈ ಹಿಡಿಯುತ್ತಾ ಅನ್ನೋದನ್ನು ಕಾದು ನೋಡ್ಬೇಕು.
ಎಲೆಕ್ಷನ್ ಯಾಕೆ ವಿಳಂಬ?
ಈ ಹಿಂದೆಯೇ 2020ರ ಸೆಪ್ಟೆಂಬರ್‌ನಲ್ಲಿ ಪಾಲಿಕೆ ಕೌನ್ಸಿಲ್ ಅವಧಿ ಪೂರ್ಣಗೊಂಡಿತ್ತು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತು. ಬಳಿಕ 198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ಚುನಾವಣೆ ವಿಳಂಬವಾಗಿದೆ.
ನಾಲ್ವರು ಅಧಿಕಾರಿಗಳ ನೇಮಕಬಿಬಿಎಂಪಿಗೆ ಹೊಸದಾಗಿ ಸೇರಬೇಕಾದ ವಾರ್ಡ್‌ಗಳ ಪುನರ್ ವಿಂಗಡನೆ ಆಗಬೇಕಿದೆ. ಇದಕ್ಕಾಗಿ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವಾರ್ಡ್ ಪುನರ್ ವಿಂಗಡನಾ ಸಮಿತಿಯನ್ನು ರಚಿಸಿದೆ. ವಾರ್ಡ್ ಪುನರ್ ವಿಂಗಡನೆಗೆ 2022ರ ಜನವರಿ ತನಕ ಅವಕಾಶ ನೀಡಿ ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದೆ.