ಅವೈಜ್ಞಾನಿಕವಾಗಿರುವ ತ್ರಿವರ್ಣ ಧ್ವಜ ನೀಡಿದ ಬಿಬಿಎಂಪಿ ಇದಿಗ ಕೆಟ್ಟಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನಂತೆ ಎಚ್ಚೆತ್ತುಕೊಂಡಿದೆ. ಈಗ ಡಿಫೆಕ್ಟ್ ಧ್ವಜಗಳನ್ನು ವಾಪಾಸ್ ಪಡೆದು ಹೊಸ ಬಾವುಟವನ್ನು ಕೊಡಲು ಮುಂದಾಗಿದೆ. ಅಲ್ಲದೆ ಜಂಟಿ ಆಯುಕ್ತರಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚನೆ ಕೊಡಲಾಗಿದೆ.
ಅವೈಜ್ಞಾನಿಕ ತ್ರಿವರ್ಣ ಧ್ವಜ ಕೊಟ್ಟಿದ್ದ ಬಿಬಿಎಂಪಿ
ಕೇಂದ್ರ ಸರ್ಕಾರ ಸ್ವಾತಂತ್ರ್ಯ ಸಿಕ್ಕಿ ದೇಶಕ್ಕೆ 75 ವರ್ಷ ತುಂಬುವ ಗಳಿಗೆಯನ್ನು ಬಹಳ ಅದ್ದೂರಿಯಾಗಿ ಆಚರಿಸುವ ಪಣ ತೊಟ್ಟಿದೆ. ಇದರ ಅಂಗವಾಗಿ ಹರ್ ಘರ್ ತಿರಂಗ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ಮನೆಗಳ ಮೇಲೆ ರಾಷ್ಟ್ರೀಯ ಬಾವುಟ ಹಾರಿಸಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಜನರಿಗೆ ತ್ರಿವರ್ಣ ಧ್ವಜ ಹಂಚುವ ಜವಾಬ್ದಾರಿಯನ್ನು ಬಿಬಿಎಂಪಿಗೆ ಕೊಡಲಾಗಿದೆ. ಆದರೆ ಅದನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಬಿಬಿಎಂಪಿ ಎಡವಿದೆ. ಜನರಿಗೆ ಬಿಬಿಎಂಪಿ ಕೊಡಮಾಡುವ ತ್ರಿವರ್ಣ ಧ್ವಜಗಳು ಎಲ್ಲವೂ ಅವೈಜ್ಞಾನಿಕ ತಯಾರಾಗಿದೆ. ದೇಶದ ತ್ರಿವರ್ಣ ಧ್ವಜಕ್ಕೆ ಒಂದು ಸಂಹಿತೆಯಿದೆ. ಕೇಸರಿ, ಬಿಳಿ, ಹಸಿರು. ಈ ಮೂರು ಬಣ್ಣಗಳ ಅಳತೆಗೂ ಒಂದು ಸೂಕ್ತ ಶಿಸ್ತಿದೆ. ಮಧ್ಯ ಭಾಗದಲ್ಲಿರುವ ಅಶೋಕ ಚಕ್ರಕ್ಕೂ ಇಂತಿಷ್ಟೇ ಎಂಬ ಅಳತೆಗೋಲಿದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ಬೇಕಾಬಿಟ್ಟಿ, ಅಡ್ಡಾದಿಡ್ಡಿ ಬಾವುಟ ರಚಿಸಿ ಜನರಿಗೆ ಕೊಡಲಾಗುತ್ತಿದೆ.
ದೋಷಪೂರಿತ ಧ್ವಜ ವಾಪಸಾತಿಗೆ ಮುಂದಾಗಿರುವ ಸಿಬ್ಬಂದಿ
ಕೇಂದ್ರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಒಟ್ಟು 10 ಲಕ್ಷ ಧ್ವಜವನ್ನು ಹಂಚುವ ಗುರಿ ಹೊಂದಲಾಗಿದೆ. ಆದರೆ ಈವರೆಗೆ ಹಂಚಿರುವ ಬಾವುಟಗಳಲ್ಲಿ ಅನೇಕ ಅವೈಜ್ಞಾನಿಕವಾಗಿದೆ. ಹೀಗಾಗಿ ಅವುಗಳನ್ನು ವಾಪಾಸ್ ಪಡೆದು ಹೊಸ ತ್ರಿವರ್ಣ ಧ್ವಜ ನೀಡಲು ಬಿಬಿಎಂಪಿ ಮುಂದಾಗಿದೆ. ತ್ರಿವರ್ಣ ಧ್ವಜದಲ್ಲಿನ ಎಡವಟ್ಟು ವರದಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು, ತ್ರಿವರ್ಣ ಧ್ವಜ ಪ್ರಿಂಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಕಡೆಯಿಂದ ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೆವೆ. ಡಿಫೆಕ್ಟ್ ಇರುವ ಬಾವುಟವನ್ನು ವಿತರಣೆ ಮಾಡದಂತೆ ಸೂಚನೆ ಕೊಡಲಾಗಿದೆ. ಯಾವುದಾದ್ರೂ ಬಾವುಟ ಡಿಫೆಕ್ಟ್ ಇದ್ದರೆ ವಾಪಾಸ್ ಕೊಟ್ಟು ಬೇರೆ ತೆಗೆದುಕೊಂಡು ಹೋಗಲು ಸಾರ್ವಜನರಿಕಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಒಟ್ಟಾರೆ ಬಿಬಿಎಂಪಿ ಎಡವಟ್ಟುಗಳ ಮೇಲೊಂದು ಎಡವಟ್ಟನ್ನು ಮಾಡಿಕೊಳ್ಳುತ್ತಿದ್ದು, ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಇದೀಗ ಅತ್ಯುನ್ನತ ತ್ರಿವರ್ಣ ಧ್ವಜದ ವಿಚಾರದಲ್ಲೂ ನಿರ್ಲಕ್ಷ್ಯ ತೋರಿದ್ದು, ದೇಶದ ರಾಷ್ಟ್ರೀಯ ಬಾವುಟಕ್ಕೇ ಅಪಮಾನ ಮಾಡಿದೆ. ಇದೀಗ ಅದಕ್ಕೂ ತೇಪೆ ಹಚ್ಚುವ ನಾಟಕವಾಡಿ, ಸಮಸ್ಯೆ ಬಗೆಹರಿದಿದೆ ಎಂದಿದೆ.