ಚಾಮರಾಜಪೇಟೆ ಈದ್ಗಾ ಮೈದಾನ ತಮ್ಮದೆಂದು ವಾದಿಸಿ ವರ್ಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾ ಮಾಡಿದೆ. ಚಾಮರಾಜಪೇಟೆ ಆಟದ ಮೈದಾನವನ್ನ ವರ್ಕ್ಫ್ ಬೋರ್ಡ್ ಹೆಸರಿಗೆ ಖಾತ ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಬಿಬಿಎಂಪಿ ದಾಖಲೆಗಳಲ್ಲಿ ಈ ಆಸ್ತಿ ಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಆಸ್ತಿಯೆಂದು ನಮೂದಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
ಹಲವು ದಿನಗಳಿಂದ ವಿವಾದಕ್ಕೆ ಈಡಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಈ ಮೂಲಕ ತಾರ್ಕಿಕ ಅಂತ್ಯ ಕಂಡಿದೆ. ಈತನ್ಮಧ್ಯೆ ದಾಖಲೆ ನೀಡಲು ಬಿಬಿಎಂಪಿ ನೀಡಿದ್ದ ಸಮಯವಕಾಶ ಕಳೆದ ಮಂಗಳಾವರಕ್ಕೆ ಮುಕ್ತಾಯಗೊಂಡಿತ್ತು. ಈವರೆಗೆ ಈ ವಿವಾದಿತ ಮೈದಾನಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆ ಪಾಲಿಕೆಗೆ ಸಮರ್ಪಕವಾಗಿ ಸಲ್ಲಿಕೆಯಾಗದ ಹಿನ್ನೆಲೆ ಪಾಲಿಕೆ ಈ ಆಸ್ತಿ ತಮ್ಮದೇ ಅಂತ ಘೋಷಿಸಿಕೊಂಡಿದೆ.
ಈ ಮೊದಲು ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತಡ ಆಗಸ್ಟ್ 3ರ ಒಳಗಾಗಿ ವಕ್ಫ್ ಬೋರ್ಡ್ ಅಥವಾ ಯಾರೇ ಮೈದಾನದ ದಾಖಲೆ ನೀಡಲು ಕಾಲವಕಾಶ ನೀಡಿತ್ತು. ಈ ಮದ್ಯೆ ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡು ಚಾಮರಾಜಪೇಟೆ ನಾಗರೀಕರು ಬಂದ್ ಆಚರಣೆ ಮಾಡುವ ಮಟ್ಟಕ್ಕೆ ಬೆಳೆದಿತ್ತು. ಅಲ್ಲದೆ ಸ್ಥಳೀಯ ಶಾಸಕರು, ಸಂಸದರೇ ಈ ಪ್ರಕರಣದಲ್ಲಿ ಮುಖಾಮುಖಿಯಾಗಿ ವಾಗ್ವಾದಕ್ಕೆ ಇಳಿದಿದ್ದರು. ಇದೀಗ ಚಾಮರಾಜಪೇಟೆ ಈದ್ಗಾ ಮೈದಾನ ಸರ್ಕಾರದ್ದೆ ಎಂದು ಘೋಷಣೆಯಾಗಿದ್ದು, ವಿವಾದ ಬಗೆಹರಿದಿದೆ.

ವಕ್ಫ್ ಬೋರ್ಡ್ ಈವರೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಹಾಗೂ ಹಲವು ವರ್ಷಗಳ ಹಿಂದಿನ ತೆರಿಗೆ ಕಟ್ಟಿರುವ ಬಿಲ್ ಮಾತ್ರ ಹಾಜರುಪಡಿಸಿದೆ. ಇದರ ಹೊರತಾಗಿ ಬೇರೆ ಯಾವುದೇ ದಾಖಲೆ ವಕ್ಫ್ ಬೋರ್ಡ್ ನಿಂದ ಸಲ್ಲಿಕೆಯಾಗಿಲ್ಲ. ಈ ವಿಚಾರವಾಗಿ ಬಿಬಿಎಂಪಿ ಇನ್ ಹೌಸ್ ಪ್ರೊಸೀಡಿಂಗ್ಸ್ ಕೂಡ ನಡೆದಿದ್ದು ಸಮರ್ಪಕ ದಾಖಲೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಯದ್ದೇ ಎಂಬುವುದು ಪಾಲಿಕೆಯ ಅಧಿಕಾರಿಗಳ ವಾದ.
ಒಟ್ಟಾರೆ ಹಲವು ತಿಂಗಳುಗಳಿಂದ ಶಾಂತಿಭಂಗಕ್ಕೆ ಕಾರಣವಾಗಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಲವು ತಿರುವುಗಳನ್ನು ಪಡೆದುಕೊಂಡಿದ್ದರೂ ಸಹ, ಪಾಲಿಕೆ ಇದು ತಮ್ಮದೇ ಎಂದು ಘೋಷಿಸಿಕೊಂಡು ಗೊಂದಲಕ್ಕೆ ತೆರೆ ಎಳೆದಿದೆ.
ಇದೇ ವೇಳೆ ಬಿಬಿಎಂಪಿ ವಕ್ಫ್ ಬೋರ್ಡ್ ಮುಂದಕ್ಕೆ ಮೈದಾನದ ದಾಖಲೆ ಇಚ್ಛಿಸುವಲ್ಲಿ ನೇರವಾಗಿ ರಾಜ್ಯ ಕಂದಾಯ ಇಲಾಖೆಯ ಜೊತೆಗೆ ವ್ಯವಹರಿಸಲು ಹಾಗೂ ದಾಖಲೆ ಸಲ್ಲಿಸಲು ಈ ಆದೇಶ ಅಡ್ಡಿಯಾಗುವುದಿಲ್ಲವೆಂದೂ ಇದೇ ವೇಳೆ ಬಿಬಿಎಂಪಿ ಹೇಳಿದೆ.