~ಡಾ. ಜೆ ಎಸ್ ಪಾಟೀಲ.
ಬೆಂಗಳೂರು: ಮಾ.19: ಈ ಉಪಖಂಡದಲ್ಲಿ ಅನೇಕ ವಾಗ್ವಾದ ಚಳುವಳಿಗಳು ನಡೆದುಹೋಗಿವೆ. ಲೋಕಾಯತದಿಂದ ಲಿಂಗಾಯತದ ವರೆಗೆ ಘಟಿಸಿದ ಈ ಬಂಡಾಯಗಳು ಜೀವನ್ಮುಖಿ ಚಿಂತನೆಯ ತಳಹದಿಯಲ್ಲಿ ನಡೆದಿವೆ. ಹನ್ನೆರಡನೇ ಶತಮಾನದಲ್ಲಿ ಕನ್ನಡದ ಮಣ್ಣಿನಲ್ಲಿ ನಡೆದುಹೋದ ವಚನ ಚಳುವಳಿ ಒಂದು ವಿಶಿಷ್ಟ ಹಾಗು ವಿನೂತನ ಸಾಮೂಹಿಕ ಬಂಡಾಯದ ಜನಾಂದೋಲನ. ಈ ನೆಲದ ಬಹುಜನರು ಒಂದಾಗಿ ಸಮಾಜವನ್ನು ಕಾಡುತ್ತಿದ್ದ ಬಹುಜನ ವಿರೋಧಿ ಸಿದ್ಧಾಂತದ ವಿರುದ್ಧ ಘಟಿಸಿದ ಒಂದು ಬಹುದ್ದೇಶಪೂರಿತ ಅಪರೂಪದ ಆಂದೋಲನ.
ವೈದಿಕರು ನೆಲೆಗೊಳಿಸಿದ್ದ ಶ್ರೇಣೀಕೃತ ವರ್ಣ ವ್ಯವಸ್ಥೆಯು ಈ ನೆಲಮೂಲದ ಜನರನ್ನು ಸಾಮಾಜಿಕˌ ಶೈಕ್ಷಣಿಕˌ ಆರ್ಥಿಕˌ ಧಾರ್ಮಿಕ ಮುಂತಾದ ಮೂಲಭೂತ ಹಕ್ಕುಗಳಿಂದ ವಂಚಿಸಿ ಅಟ್ಟಹಾಸದಿಂದ ಮೆರೆಯುತ್ತಿದ್ದ ಕಾಲಘಟ್ಟದಲ್ಲಿ ಶರಣರು ಸಾಮೂಹಿಕವಾಗಿ ಈ ವಿಕೃತ ವೈದಿಕ ವ್ಯವಸ್ಥೆಯ ವಿರುದ್ಧ ಬಂಡೆದ್ದರು. ಆಚಾರ ಪ್ರಧಾನ ಸಮಾಜವನ್ನು ನಗಣ್ಯಗೊಳಿಸಿದ ಶರಣರು ಜೀವಂತ ಮಾನವನಿಗಿಂತ ಕಲ್ಪನೆಯ ದೇವರಿಗೆ ಪ್ರಾಧಾನ್ಯತೆ ನೀಡುತ್ತ ಶೋಷಿತರಿಗೆ ಅವರ ಮೂಲಭೂತ ಹಕ್ಕುಗಳಿಂದ ವಂಚಿಸುತ್ತಿದ್ದ ಸಮಯದಲ್ಲಿ ಬಸವಾದಿ ಶರಣರು ವೈಚಾರಿಕ ಆಂದೋಲನವನ್ನು ಆರಂಭಿಸಿದರು.
ಹೊಸ ವಿಚಾರಧಾರೆಯ ನೆಲೆಗಟ್ಟಿನಲ್ಲಿ ವರ್ಗ-ವರ್ಣ-ಲಿಂಗಭೇದ ರಹಿತ ಸಮಾಜ ನಿರ್ಮಾಣದ ಗುರಿಯೊಂದಿಗೆ ಜನಾಂದೋಲನವೊಂದನ್ನು ರೂಪಿಸಿದರು.
ಶರಣರು ಸರ್ವಾಂಗೀಣ ಸನಾಮತೆಯನ್ನು ನೆಲೆಗೊಳಿಸಲು “ಅನುಭವ ಮಂಟಪ”ವೆಂಬ ಪ್ರಜಾಸಂಸತ್ತು ಮಾದರಿಯ ವ್ಯವಸ್ಥೆವೊಂದನ್ನು ರೂಪಿಸಿದರು. ಆ ಮೂಲಕ ಮಾನವ ಹಕ್ಕುಗಳು ಮತ್ತು ಮಾನವ ಘನತೆಯ ಸ್ಥಾಪನೆಗೆ ವಚನ ಚಳುವಳಿ ಎಂಬ ವಿನೂತನ ಅಕ್ಷರ ಸ್ವಾತಂತ್ರದ ಮಾದ್ಯಮವನ್ನು ಪ್ರಾಯೋಗಿಕ ಅಸ್ತ್ರವಾಗಿ ಶೋಧಿಸಿಕೊಂಡರು. ಶಿಕ್ಷಣದಿಂದ ವಂಚಿತರಾಗಿದ್ದ ಕೃಷಿಕಾಯಕದ ಜನರನ್ನು ಅಕ್ಷರಸ್ಥರನ್ನಾಗಿಸುವ ಮುಖೇನ ಮಾನವ ಹಕ್ಕುಗಳು ಮತ್ತು ಘನತೆಯನ್ನು ಪ್ರತಿಪಾದಿಸಿದರು.
ಶರಣರ ಈ ಆಂದೋಲನವು ಮಾನವರೆಲ್ಲರಿಗೂ ಸ್ವತಾಂತ್ರ್ಯ ˌ ಸಮಾನತೆˌ ಸಹೋದರತೆಯನ್ನು ಭೋದಿಸಿದರು. ಸಮಾಜದ ಪ್ರತಿಯೊಬ್ಬರೂ ಶ್ರಮಪಟ್ಟು ದುಡಿಯುವ ಕಾಯಕ ಮಾಡಬೇಕು ಹಾಗು ಅದಿಂದ ಬಂದ ಆದಾಯದಲ್ಲಿ ತಮಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದದ್ದು ಸಮಾಜಕ್ಕೆ ದಾಸೋಹ ಮಾಡಬೇಕು ಎನ್ನುವ ಹೊಸ ಆರ್ಥಿಕ ಸೂತ್ರವನ್ನು ಮುಂದಿಟ್ಟರು. ಆ ಆರ್ಥಿಕ ಸೂತ್ರದ ಪರಿಣಾಮಕಾರಿ ಅನುಷ್ಟಾನವು ಕಲ್ಯಾಣವನ್ನು ಒಂದು ಸಮೃದ್ಧ ನಾಡಾಗಿಸಿತು.
ಮೇಲ್ಕಾಣಿಸಿದ ಸಿದ್ಧಾಂತಗಳ ಮುಖೇನ ಶರಣರು ಸಮಸ್ತ ಮಾನವರ ಮೂಲಭೂತ ಹಕ್ಕುಗಳ ಪ್ರತಿಷ್ಠಾಪನೆಗೆ ಅನುಭವ ಮಂಟಪವೆಂಬ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಈ ಅನುಭವ ಮಂಟಪದ ಮೂಲ ಉದ್ದೇಶಗಳೇನೆಂದರೆ ಅಕ್ಷರ ವಂಚಿತ ಜನರಿಗೆ ಅಕ್ಷರಭ್ಯಾಸˌ ದೇವರು ಮತ್ತು ಭಕ್ತರ ನಡುವಿನ ದಲ್ಲಾಳಿಯ ಅಸ್ಥಿತ್ವದ ನಿರಾಕರಣೆˌ ವೈದಿಕ ಮೂಲದ ಸಂಸ್ಕ್ರತವನ್ನು ದಿಕ್ಕರಿಸಿ ನೆಲಮೂಲದ ಜನಸಾಮಾನ್ಯರು ಆಡುವ ಕನ್ನಡ ಭಾಷೆಯಲ್ಲಿ ವಚನಗಳ ರಚನೆ.

ಅನುಭವ ಮಂಟಪದಲ್ಲಿ ಹೊಸ ವಿಚಾರಧಾರೆಯ ಕುರಿತು ಪೂರ್ವಾಪರ ಚಿಂತನೆˌ ಮಂಥನˌ ಪರಾಮರ್ಶೆ ಹಾಗು ಚರ್ಚೆಗಳು ನಡೆದು ಆ ವಿಚಾರಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಮೂಲಕ ಶೋಷಿತ ಜನಾಂಗದಲ್ಲಿ ಜಾಗೃತಿ ಮೂಡಿಸುವುದು. ಅನುಭವ ಮಂಟಪದ ಕಾರ್ಯ ಕಲಾಪಗಳಲ್ಲಿ ಸ್ತ್ರೀಯರಿಗೆ ಮತ್ತು ಸಮಾಜದ ನಿಮ್ನ ವರ್ಗದ ಜನರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಯಿತು.

ಹಾಗಾಗಿ ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಜನತಂತ್ರದ ಪರಿಕಲ್ಪನೆˌ ಸಂಸದೀಯ ವ್ಯವಸ್ಥೆ ಮತ್ತು ಅಧುನಿಕ ಸಂವಿಧಾನದ ಪರಿಕಲ್ಪನೆಯನ್ನು ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಲಾಯಿತು. ಆ ಮೂಲಕ ಈ ಸರ್ವಾಂಗೀಣ ವಚನಾಂದೋಲನ ಮಾನವ ಹಕ್ಕು ಮತ್ತು ಘನತೆಯ ಬೇಡಿಕೆಯ ಪರವಾಗಿ ಧ್ವನಿ ಎತ್ತಿತು. ಆದ್ದರಿಂದ ಕಲ್ಯಾಣದಲ್ಲಿ ಶರಣರು ಹಮ್ಮಿಕೊಂಡ ಈ ವಚನ ಚಳುವಳಿಯು ಅನೇಕ ವಿಷಯಗಳಲ್ಲಿ ವಿಶಿಷ್ಟ ಮತ್ತು ವಿಶೇಷವಾಗಿ ಜಗತ್ತಿನ ಗಮನ ಸೆಳೆದದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
~ ಡಾ. ಜೆ.ಎಸ್. ಪಾಟೀಲ