ಕಟ್ಟರ್ ಹಿಂದುತ್ವವಾದಿ, ಹಿಂದೂ ಹುಲಿ ಎಂದು ಕರೆಸಿಕೊಳ್ಳುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾರತೀಯ ಜನತಾ ಪಾರ್ಟಿಯಿಂದ ಹೊರಕ್ಕೆ ಹೋಗಲು ಸಿದ್ಧರಾಗಿದ್ದಾರಾ..? ಹೀಗೊಂದು ಅನುಮಾನ ಇತ್ತೀಚಿಗೆ ಜನರನ್ನು ಕಾಡುವುದಕ್ಕೆ ಶುರುವಾಗಿದೆ. ಇದಕ್ಕೆ ಕಾರಣ ಅಂದ್ರೆ ಸ್ವತಃ ಬಿಜೆಪಿ ಸರ್ಕಾರ ಹಾಗು ಸಚಿವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಪುಂಕಾನುಪುಂಕವಾಗಿ ವಾಗ್ದಾಳಿ ಮಾಡುತ್ತಲೇ ಇದ್ದಾರೆ. ಬಿ.ಎಸ್ ಯಡಿಯೂರಪ್ಪಮುಖ್ಯಮಂತ್ರಿ ಆದಾಗಿನಿಂದಲೂ ಬಿಜೆಪಿ ಪಾರ್ಟಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ. ವಿಜಯೇಂದ್ರ ಅಕ್ರಮ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾ ಹಿಂಬಾಗದಲ್ಲಿ ಮನೆ ಮಾಡಿಕೊಂಡು ಅಲ್ಲಿಂದಲೇ ಎಲ್ಲಾ ಸಚಿವರನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂದೆಲ್ಲಾ ಟೀಕೆ ಮಾಡಿದ್ದರು. ಬಿಜೆಪಿ ಹೈಕಮಾಂಡ್ ನಿಶಕ್ತವಾಗಿದೆಯಾ ಎನ್ನುವ ಮಟ್ಟಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟೀಕಾಪ್ರಹಾರ ನಡೆದಿತ್ತು.
ಯತ್ನಾಳ್ ನಿಯಂತ್ರಣ ಮಾಡಲು ಆಗದೆ ಕಂಗಾಲು..!
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕವೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಾಗ್ದಾಳಿ ಕಡಿಮೆ ಆಗಲಿಲ್ಲ. ಎರಡೂವರೆ ಸಾವಿರ ಕೋಟಿ ರೂಪಾಯಿಗೆ ಮುಖ್ಯಮಂತ್ರಿ ಹುದ್ದೆ ಸೇಲ್ ಎನ್ನುವ ಹೇಳಿಕೆ ನೀಡಿ ಭಾರೀ ಮುಜುಗರಕ್ಕೆ ಈಡು ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಲೆಕ್ಕದಿಂದ ತೆಗೆದುಹಾಕಿದೆ. ಯಾವುದೇ ನೋಟಿಸ್ ಕೂಡ ಇಲ್ಲೀವರೆಗೂ ನೀಡದ ಭಾರತೀಯ ಜನತಾ ಪಾರ್ಟಿ ಲೆಕ್ಕಕ್ಕೆ ಮಾತ್ರ ಶಾಸಕ ಎನ್ನುವ ರೀತಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ರನ್ನು ನಡೆಸಿಕೊಳ್ತಿದೆ. ಅನುದಾನ ವಿಚಾರದಲ್ಲೂ ಸರ್ಕಾರದ ವಿರುದ್ಧ ಗುಡುಗಿದ ಬಳಿಕ ಅನುದಾನ ಬಿಡುಗಡೆ ಆಗಿತ್ತು. ಕಳೆದ ವಿಜಯಪುರ ಪಾಲಿಕೆ ಚುನಾವಣೆ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುವ ಪ್ರಯತ್ನ ಕೂಡ ನಡೆದಿತ್ತು. ಆದರೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಕೊನೆಗೆ ರಾಜ್ಯ ಬಿಜೆಪಿ ಉದ್ತುವಾರಿ ಅರುಣ್ ಸಿಂಗ್ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಹೊರಗಿಟ್ಟು ಸಭೆ ಮಾಡಿ, ಸಂಜೆ ಬಳಿಕ ಯತ್ನಾಳ್ರನ್ನು ಭೇಟಿ ಮಾಡಿ ಚರ್ಚೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದರು.

ಈ ಬಾರಿ ಯತ್ನಾಳ್ಗೆ ಬಿಜೆಪಿ ಟಿಕೆಟ್ ಸಿಗುತ್ತಾ ಇಲ್ವಾ..?
ಭಾರತೀಯ ಜನತಾ ಪಾರ್ಟಿ ಹಾಗು ಯತ್ನಾಳ್ ನಡುವಿನ ಸಂಬಂಧ ನೋಡಿದಾಗ ಈ ಬಾರಿ ಬಿಜೆಪಿ ಟಿಕೆಟ್ ಸಿಗುವುದು ಡೌಟ್. ಇದೇ ಕಾರಣಕ್ಕೆ ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸಿಕೊಂಡು ಹೋರಾಟದ ಹಾದಿ ಹಿಡಿದಿರುವ ಬಸನಗೌಡ ಪಾಟೀಲ್ ಯತ್ನಾಳ್, ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಟಿಕೆಟ್ ಬೇಕೇಬೇಕು, ಹೋರಾಟ ಮಾಡಿದ್ರೆ ಟಿಕೆಟ್ ಸಿಗಲ್ಲ ಅಂತಾ ಭಯ ಇದ್ದವರು ಹೋರಾಟ ಬಿಟ್ಟು ಹೊರಡಬಹುದು ಎಂದಿದ್ದರು. ಇನ್ನು ಬಿಜೆಪಿ ಟಿಕೆಟ್ ಸಿಗೋದಿಲ್ಲ ಅಂತಾ ಕೆಲವರು ಮಾತನಾಡುತ್ತಿದ್ದಾರೆ. ನನಗೆ ಮನೆಗೆ ಬಿಫಾರಂ ಬರುತ್ತದೆ. ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೂ ನಾನು ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಬರುತ್ತೇನೆ. ನಾನು ಈಗಾಗಲೇ ಹಿಂದೆಯೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದೇನೆ ಎನ್ನುವ ಮೂಲಕ ಬಿಜೆಪಿ ಟಿಕೆಟ್ ಸಿಗಲ್ಲ ಎನ್ನುವುದನ್ನು ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆ ಬಳಿಕ ಸಚಿವ ಮುರುಗೇಶ ನಿರಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್ ಚುನಾವಣೆಯಲ್ಲಿ ಗೆಲ್ತಾರಾ..? ಸೋಲ್ತಾರಾ..?
ಬಸನಗೌಡ ಪಾಟೀಲ್ ಯುತ್ನಾಳ್ ಸ್ಪರ್ಧೆ ಮಾಡುವ ವಿಜಯಪುರ ನಗರದಲ್ಲಿ ಮುಸ್ಲಿಮರು ಹಾಗು ಹಿಂದೂಗಳು ಸಮಾಬಲ ಹೊಂದಿದ್ದಾರೆ. ಯತ್ನಾಳ್ ಅವರನ್ನು ಸೋಲಿಸಲೇ ಬೇಕು ಅನ್ನೋ ಕಾರಣಕ್ಕೆ ಸಾಕಷ್ಟು ಬಿಜೆಪಿ ನಾಯಕರೇ ತಂತ್ರಗಾರಿಕೆ ಮಾಡುವುದು ನಿಶ್ಚಿತ. ಆದರೆ ಪಂಚಮಸಾಲಿ ಹೋರಾಟ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯತೆ ಹೊಂದಿದ್ದಾರೆ. ಮಾಧ್ಯಮಗಳಲ್ಲಿ ಮುಸ್ಲಿಂ ಮತಗಳು ನನಗೆ ಬೇಕಾಗಿಲ್ಲ, ದೇಶಭಕ್ತರು, ಹಿಂದೂಗಳ ಮತಗಳು ಸಾಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರೂ ಕ್ಷೇತ್ರದಲ್ಲಿ ಒಂದಿಷ್ಟು ಮುಸ್ಲಿಂ ಮತಗಳ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್ ಹಿಡಿತ ಸಾಧಿಸಿದ್ದಾರೆ. ಜೊತೆಗೆ ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ. ದಶಕಗಳಿಂದ ವಿಜಯನಗರಕ್ಕೆ ಶಾಪವಾಗಿದ್ದ ಮಾರ್ಕೆಟ್ ಸಮಸ್ಯೆಯನ್ನು ನಿವಾರಿಸಿದ್ದಾರೆ. ಇದು ಒಂದಿಷ್ಟು ಮತಗಳನ್ನು ತಂದು ಕೊಡುವಲ್ಲಿ ಅನುಕೂಲ ಆಗಲಿದೆ. ಆದರೆ ಸೋಲು ಗೆಲುವಿನ ಲೆಕ್ಕಾಚಾರ ಇತರೆ ಪಕ್ಷಗಳ ಅಭ್ಯರ್ಥಿ ಆಯ್ಕೆ ಮೇಲೆ ನಿಂತಿದೆ ಎನ್ನಬಹುದು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಬೇಕು ಎನ್ನುವ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಟಿಕೆಟ್ ಕೊಡದೆ ನಿರ್ಲಕ್ಷ್ಯ ಮಾಡಿದರೆ ಇಡೀ ಸಮುದಾಯ ಬೆನ್ನಿಗೆ ನಿಲ್ಲುತ್ತಾ..? ಇಲ್ವಾ ಅನ್ನೋದ್ರ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ. ಯತ್ನಾಳ್ ಮಾತ್ರವೇ ಪಂಚಮಸಾಲಿ ನಾಯಕನಲ್ಲ, ಬೇರೆ ಬೇರೆ ನಾಯಕರು ಪಂಚಮಸಾಲಿ ಸಮುದಾಯದ ಒಳಿತಿಗಾಗಿ ಕೆಲಸ ಮಾಡ್ತಿದ್ದಾರೆ ಎನ್ನುವುದನ್ನು ಬಿಂಬಿಸುವ ಕೆಲಸ ಮಾಡ್ತಿದೆ. ಅಂತಿಮವಾಗಿ ಲಾಭ ನಷ್ಟದ ಲೆಕ್ಕಾಚಾರದ ಮೇಲೆ ಟಿಕೆಟ್ ಕೊಡುವುದು ಬಿಡುವುದು ನಿಶ್ಚಯ ಆಗಲಿದೆ. ಬಿಜೆಪಿ ಒಳಗಿನ ಇಂದಿನ ಪರಿಸ್ಥಿತಿ ನೋಡಿದಾಗ ಬಸನಗೌಡ ಪಾಟೀಲ್ ಯತ್ನಾಳ್ಗೆ ಟಿಕೆಟ್ ಸಿಗುವುದು ಅನುಮಾನ ಎನ್ನುತ್ತಿವೆ ಪಕ್ಷದ ಮೂಲಗಳು.
ಕೃಷ್ಣಮಣಿ