ಬೆಂಗಳೂರು: ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತ ಸಾವಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಗಿರಿ ನಗರದಲ್ಲಿ ನಡೆದಿದೆ. ಗಗನ್ ರಾವ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಗನ್ ರಾವ್ ಸಾವಿಗೆ ಪತ್ನಿಯ ಕಿರುಕುಳವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ರಾವ್ ಎಂಟು ತಿಂಗಳ ಹಿಂದೆ ಮೇಘನಾ ಎನ್ನುವ ಯುವತಿ ಜೊತೆ ಮದುವೆಯಾಗಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಗಗನ್ ರಾವ್ ಮತ್ತು ಮೇಘನಾ ದಾಂಪತ್ಯದಲ್ಲಿ ದಿನ ಕಳೆದಂತೆ ಮನಸ್ತಾಪ ಆರಂಭವಾಗಿದೆ. ದಂಪತಿ ನಡುವೆ ಪ್ರತಿ ದಿನವೂ ಜಗಳ ನಡೆಯುತ್ತಿದ್ದು, ಮನೆಯ ವಾತಾವರಣ ಸಂಪೂರ್ಣವಾಗಿ ಹಾಳಾಗಿತ್ತು ಎನ್ನಲಾಗಿದೆ.

ಮನೆಯಲ್ಲಿ ನಡೆಯುತ್ತಿದ್ದ ಜಗಳದಿಂದ ಮನನೊಂದ ಗಗನ್ ರಾವ್ ಇಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಅಣ್ಣನ ಸಾವಿನ ಬಗ್ಗೆ ಗಗನ್ ರಾವ್ ತಂಗಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೇಘನಾ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಗಿರಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.













