ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾತಿಥ್ಯ ಪಡೆಯುತ್ತಿರುವ ವಿಡಿಯೋ ವೈರಲ್ ವಿವಾದದ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇದೇನು ಹೊಸದಲ್ಲ. ಜೈಲು ಅಧಿಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲೇ ಭಯೋತ್ಪಾದಕರನ್ನು ಇಟ್ಟುಕೊಂಡು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕರ ಬಗ್ಗೆ ಮಾತನಾಡಿ ಏನು ಪ್ರಯೋಜನ? ವಿಧಾನ ಸೌಧದಲ್ಲಿ ಇರುವಂತಹ ಟೆರರಿಸ್ಟ್ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲವಲ್ಲ. ಹಾಗಿದ್ದ ಮೇಲೆ ಪರಪ್ಪನ ಅಗ್ರಹಾರದ ಬಗ್ಗೆ ಏನು ಚರ್ಚೆ ಮಾಡುತ್ತೀರಿ? ಎಂದು ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಾತು ಮುಂದುವರಿಸಿದ ಅವರು, ಗೃಹ ಸಚಿವರೇ ಈಗ ಮತ್ತೆ ಏನು ತನಿಖೆ ಮಾಡುತ್ತೀರಾ..? ವಾಸ್ತವ ಏನೆಂಬುದು ರಾಜ್ಯದ ಜನತೆಯ ಮುಂದೆಯೇ ಇದ್ದಾಗ, ಹೊಸ ತನಿಖೆಯ ಅಗತ್ಯವೇನು? ಆಡಳಿತ ವೈಫಲ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ. ಅಲ್ಲದೇ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದಿರುವ ಸಿದ್ದರಾಮಯ್ಯನವರೇ ನಿಮಗೆ ಮಾನ ಮರ್ಯಾದೆ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.







