ವಿಶ್ವ ವಿಖ್ಯಾತ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ನಡುವೆ ಕರಗಕ್ಕೂ ಕೋಮು ಬಣ್ಣ ಬಳಿಯಲಾಗುತ್ತಿದ್ದು, ಸಂಪ್ರಾದಯಕ್ಕೆ ಕೊಳ್ಳಿ ಇಡಲಾಗುತ್ತಿದೆ. ಈ ಬಾರಿಯ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಬಾರದು ಎಂಬ ಬೇಡಿಕೆಗಳು ಬರಲು ಶುರುವಾಗಿದೆ. ಆದರೆ ಕರಗ ಆಡಳಿತ ಮಂಡಳಿ ಹಾಗೂ ಮಸ್ತಾನ್ ದರ್ಹಾ ಮುಜಾವರ್ ಗಳು ದರ್ಗಾ ಭೇಟಿ ಮಾಡದೆ ಕರಗ ಅಪೂರ್ಣ ಎನ್ನುತ್ತಿದ್ದಾರೆ.
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗೋತ್ಸವಕ್ಕೆ ಕ್ಷಣಗಣನೆ
ಅದು ನಿನ್ನೆ ಮೊನ್ನೆಯ ಆಚರಣೆಯಲ್ಲ. ಬರೋಬ್ಬರಿ 800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಅಂಥಾ ಇತಿಹಾಸ ಪ್ರಸಿದ್ಧ ಆಚರಣೆಗೆ ಕೊಳ್ಳಿ ಇಡುವ ಕೆಲಸಗಳು ನಡೆಯುತ್ತಿದೆ. ಹೌದು, ಬೆಂಗಳೂರು ಕರಗಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 8ರಿಂದ ಶುರುವಾಗಿ ಏಪ್ರಿಲ್ 18ಕ್ಕೆ ಕರಗ ಸಮಾರೋಪಗೊಳ್ಳಲಿದೆ. ಇದರ ಕೊನೆಯ ದಿನದಂದು ಕರಗ ಬೆಂಗಳೂರು ದರ್ಶನವಿಡಲಿದೆ. ಈ ವೇಳೆ ಚಿಕ್ಕಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೂ ಭೇಟಿ ಕೊಟ್ಟು ಆಶಿರ್ವಾದ ನೀಡಲಿದೆ. ಇದು ಈಗ ವಿವಾದದ ಕೇಂದ್ರ ಬಿಂದುವಾಗಲಿದೆ. ಈ ಬಾರಿ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ಕೊಡಕೂಡದು ಎಂದು ಹಿಂದೂ ಪರ ಸಂಘಟನೆಗಳು ಭೇಡಿಕೆ ಇಟ್ಟಿದೆ. ಇದು ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ.
ಕೊರೊನಾ ಕಾರಣಕ್ಕೆ ಕಳೆದೆರಡು ವರುಷ ನಡೆಯದ ಅದ್ದೂರಿ ಕರಗ ಮಹೋತ್ಸವ
ಕಳೆದರಡು ವರ್ಷ ಕೊರೋನಾ ಕಾರಣಕ್ಕೆ ಬೆಂಗಳೂರು ಕರಗ ಅದ್ದೂರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಕೊರೋನಾ ತಗ್ಗಿದ ಕಾರಣ ಅದ್ದೂರಿಯಾಗಿ ಕರಗ ನಡೆಯಲಿದೆ. ಆದರೆ ಈ ಬಾರಿ ಕೋಮುಬಣ್ಣ ಕರಗಕ್ಕೆ ಬಳಿಯಲಾಗಿದೆ. ಆದರೆ ಈ ಬಾರಿಯೂ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕರಗೋತ್ಸವ ನಡೆಸಲು ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸತೀಶ್, ಯಾವುದೇ ರೀತಿಯ ಗೊಂದಲ ಇಲ್ಲ, ದರ್ಗಾಗೆ ಕರಗ ಹೋಗುತ್ತೆ. ಇದು ಹಲವು ವರ್ಷಗಳಿಂದ ನಡೆದುಕೊಂಡಿರುವ ಬಂದಿರುವ ಪದ್ಧತಿ. ಯಾವುದೇ ಸಂಘಟನೆಗಳು ಬೇಡಿಕೆ ಇವೆಲ್ಲಾ ಯಾವುದು ಇಲ್ಲ, ಕರಗ ಅದ್ದೂರಿಯಾಗಿ ನಡೆಯುತ್ತೆ. ಮುಸ್ಲಿಂ, ಹಿಂದೂ ಅನ್ನೋದೆಲ್ಲಾ ಇಲ್ಲ, ನಮ್ಮ ನಾಯಕರು ಇದ್ದಾರೆ ಅವರ ಮಾರ್ಗದರ್ಶನ ಇದೆ. ಮಸ್ತಾನ್ ದರ್ಗಾ ಆಡಳಿತ ಮಂಡಳಿ ನಮ್ಮನ್ನು ಭೇಟಿ ಮಾಡಿದೆ.ಭೇಟಿ ಮಾಡಿ ಕರಗವನ್ನು ದರ್ಗಾಕ್ಕೆ ಸಂಪ್ರದಾಯದಂತೆ ಆಹ್ವಾನ ಕೊಟ್ಟಿದ್ದಾರೆ. ಅದರಂತೆಯೇ ಕರಗ ಮಸ್ತಾನ್ ದರ್ಗಾಕ್ಕೂ ಹೋಗುತ್ತೆ.ಅದರಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದಿದ್ದಾರೆ.
ಕರಗಕ್ಕೂ ಮಸ್ತಾನ್ ಸಾಬ್ ದರ್ಗಾಕ್ಕಿದೆ 300 ವರ್ಷದ ನಂಟು
ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿ. ಆದರೆ ಈ ವರುಷ ಹಿಜಾಬ್, ಹಲಾಲ್ ಸಂಘರ್ಷ ಹಿನ್ನೆಲೆ ಕರಗ ಮಹೋತ್ಸವದ ಮೇಲೂ ಧರ್ಮ ಸಂಘರ್ಷದ ಬಿಸಿ ತಟ್ಟಿದೆ. ಈ ಹಿನ್ನೆಲೆ ಯಾವುದೇ ತಾಪತ್ರಯಗಳು ನಡೆಯದಂತೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ಮಸ್ತಾನ್ ಸಾಬ್ ದರ್ಗಾ ನಿಯೋಗ ಭೇಟಿ ಮಾಡಿ ಸಂಪ್ರದಾಯದಂತೆ ದರ್ಗಾಕ್ಕೆ ಭೇಟಿ ಕೊಡುವಂತೆ ಮನವಿ ಮಾಡಿದೆ. ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಕ್ಕೆ ತೆಗದುಕೊಳ್ಳದೆ ಎಂದಿನಂತೆ ಕರಗ ಮಸ್ತಾನ್ ಸಾಬ್ ಸನ್ನಿಧಿಗೆ ಬರಲಿದೆ. ಮಸ್ತಾನ್ ಸಾಬ್ ಗೆ ಹಾಗೂ ಕರಗಕ್ಕೆ 300 ವರ್ಷಗಳ ನಂಟಿದೆ. ಅದನ್ನು ನಾವು ಮುರಿಯಲು ಸಾಧ್ಯವಿಲ್ಲ ಎಂದು ಮಸ್ತಾನ್ ಸಾಬ್ ದರ್ಗಾದ ಮುಜಾವರ್ ತಬ್ರೀಜ್ ಅಹಮ್ಮದ್ ತಿಳಿಸಿದ್ದಾರೆ.
ಈ ಬಾರಿ ಕರಗ ಉತ್ಸವ ರೂಟ್ ಮ್ಯಾಪ್ ಹೇಗಿದೆ.!?
- ಏ.16ರಂದು ಕರಗ ಉತ್ಸವ ತಾಯಿ ಮೆರವಣಿಗೆ
- ಅಂದು ರಾತ್ರಿ ಕರಗ ತಾಯಿಯ ಮೆರವಣಿಗೆ ಮೊದಲು ಧರ್ಮರಾಯ ದೇಗುಲ ಪ್ರದಕ್ಷಿಣೆ
- ದೇಗುಲದ ರಸ್ತೆ ಮೂಲಕ ಕುಂಬಾರಪೇಟ್ ರೋಡ್
ಆನಂತರ ರಾಜ ಮಾರ್ಕೆಟ್ ಸರ್ಕಲ್ - ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ
- ಬಳಿಕ ಕೋಟೆ ಆಂಜನೇಯ ಸ್ವಾಮಿ ದೇಗುಲ ತೆರಳಲಿರುವ ಮೆರವಣಿಗೆ
- ವಾಪಾಸ್ ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಪೊಲೀಸ್ ರೋಡ್ ಕಡೆಗೆ ಪಯಣ
- ಕಾಟನ್ ಪೇಟ್ ಪೊಲೀಸ್ ಸ್ಟೇಷನ್ ರಸ್ತೆಯಿಂದ ಕಾಟನ್ ಪೇಟ್ ರಸ್ತೆಯಲ್ಲಿ ಮೆರವಣಿಗೆ
- ಅಲ್ಲಿರುವ ಮಸ್ತಾನ್ ಸಾಬ್ ದರ್ಗಾ ಕ್ಕೆ ತೆರಳಲಿರುವ ಕರಗ
- ಬಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನದತ್ತ ಮೆರವಣಿಗೆ
- ಕಬ್ಬನ್ ಪೇಟೆ ಮುಖ್ಯ ರಸ್ತೆಯ ಮೂಲಕ ವಾಪಾಸ್ ಶ್ರೀ ಧರ್ಮರಾಯ ಸ್ವಾಮಿ ದೇಗುಲ ಪ್ರವೇಶ
ಕಳೆದರಡು ಬಾರಿ ಕೊರೋನಾ ಕಾರಣಕ್ಕೆ ಕಳೆಗುಂದಿದ್ದ ಬೆಂಗಳೂರು ಕರಗ ಮಹೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ತಿಗಳರಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ಕರಗದ ಸಿದ್ಧತೆಗಳೆಲ್ಲಾ ಶುರುವಾಗಿದೆ. ಇದರ ನಡುವೆ ಶುರುವಾದ ದರ್ಗಾಕ್ಕೆ ಹೋಗುವ ವಿವಾದಕ್ಕೆ ಕರಗ ಸಮಿತಿ ಹಾಗೂ ಮಸ್ತಾನ್ ದರ್ಗಾ ಆಡಳಿ ಸಮಿತಿ ಸೊಪ್ಪು ಹಾಕಲಿಲ್ಲ.